ಒತ್ತೆಯಾಳು ಬಿಡುಗಡೆ ನಿರಾಕರಿಸಿ ಹಮಾಸ್, ಗಾಜಾ ಮೇಲೆ ದಾಳಿ ತೀವ್ರಗೊಳಿಸಿದ ಇಸ್ರೇಲ್!
ಇಸ್ರೇಲ್‌ನಿಂದ ಸೆರೆಹಿಡಿದು ಒತ್ತೆಯಾಳಿಗಿಟ್ಟುಕೊಂಡಿರುವ ನಾಗರೀಕರ ಬಿಡುಗಡೆಗೆ ಹಮಾಸ್ ಉಗ್ರರು ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡಿರುವ ಇಸ್ರೇಲ್ ಗಾಜಾ ಮೇಲೆ ದಾಳಿ ತೀವ್ರಗೊಳಿಸಿದೆ. ಇಷ್ಟೇ ಅಲ್ಲ ವೆಸ್ಟ್‌ಬ್ಯಾಂಕ್‌ನಲ್ಲಿ ಅನಧಿಕೃತ ಕಟ್ಟಡಗಳನ್ನು ಧ್ವಂಸಗೊಳಿಸಿದೆ.
ಇಸ್ರೇಲ್(ಅ.28) ಹಮಾಸ್ ಉಗ್ರರು ದಾಳಿ ನಡೆಸಿ ಒತ್ತೆಯಾಳಾಗಿಟ್ಟುಕೊಂಡಿರುವ ಇಸ್ರೇಲ್ ಸೇರಿದಂತೆ ಕೆಲ ದೇಶಗಳ ನಾಗರೀಕರ ಬಿಡುಗಡೆ ನಡೆಸಿದ ಮಾತುಕತೆ ವಿಫಲವಾಗಿದೆ. ಹಮಾಸ್ ಉಗ್ರರು ಒತ್ತೆಯಾಳುಗಳ ಬಿಡುಗಡೆ ನಿರಾಕರಿಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಒತ್ತೆಯಾಳುಗಳು ಹಮಾಸ್ ಉಗ್ರರ ಕೈಯಲ್ಲಿ ನರಳುತ್ತಿದ್ದಾರೆ. ಇದರಲ್ಲಿ 10ಕ್ಕೂ ಹೆಚ್ಚು ಪುಟ್ಟ ಕಂದಮ್ಮಗಳು ಅನ್ನೋದು ಗಂಭೀರ. ಒತ್ತೆಯಾಳು ಬಿಡುಗಡೆ ನಿರಾಕರಿಸಿದ ಬೆನ್ನಲ್ಲೇ ಇಸ್ರೇಲ್ ತನ್ನ ಪ್ರತಿ ದಾಳಿ ತೀವ್ರಗೊಳಿಸಿದೆ. ಹಮಾಸ್ ಉಗ್ರರ ಸುರಂಗ ಮಾರ್ಗಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುತ್ತಿದೆ. ಇತ್ತ ವೆಸ್ಟ್‌ಬ್ಯಾಂಕ್‌ನಲ್ಲಿ ಅನಧಿಕೃತವಾಗಿ ಕಟ್ಟಿರುವ ಪ್ಯಾಲೆಸ್ತಿನಿಯರ ಕಟ್ಟಗಳನ್ನು ಧ್ವಂಸಗೊಳಿಸಿದೆ.
ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್‌ಗೆ ನುಗ್ಗಿ ನರಮೇಧ ನಡೆಸಿದ್ದರು. ಸಿಕ್ಕ ಸಿಕ್ಕಇಸ್ರೇಲ್ ನಾಗರೀಕರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಯಹೂದಿ ಕುಟುಂಬಗಳನ್ನ ಸಜೀವ ದಹನ ಮಾಡಲಾಗಿತ್ತು. ಮಕ್ಕಳ ರುಂಡ ಕತ್ತರಿಸಲಾಗಿತ್ತು. ಭೀಕರ ದಾಳಿ ವೇಳೆ 200ಕ್ಕೂ ಹೆಚ್ಚು ಮಂದಿಯನ್ನು ಸೆರೆ ಹಿಡಿದು ಗಾಜಾಗೆ ಕರೆದುಕೊಂಡು ಹೋಗಿದ್ದರು. ಒತ್ತೆಯಾಳಾಗಿಟ್ಟುಕೊಂಡು ತಮ್ಮ ದಾಳ ಉರುಳಿಸುವ ತಂತ್ರ ಮುಂದುವರಿಸಿದ್ದರು. ಆದರೆ ಇಸ್ರೇಲ್ ಹಮಾಸ್ ವಿರುದ್ಧ ಪ್ರತಿ ದಾಳಿ ಆರಂಭಿಸಿತ್ತು.
ಇಸ್ರೇಲ್-ಹಮಾಸ್ ಯುದ್ಧ.. 3ನೇ ಮಹಾಯುದ್ಧಕ್ಕೆ ಮುನ್ನುಡಿ ಬರೆಯುತ್ತಿದ್ಯಾ ಈ ಯುದ್ಧ ?
ಒತ್ತೆಯಾಳುಗಳ ಬಿಡುಗಡೆಗೆ ಇಸ್ರೇಲ್ ಎಲ್ಲಾ ಪ್ರಯತ್ನ ಮಾಡುತ್ತಿದೆ. ಖುದ್ದು ಅಮೇರಿಕ ಒತ್ತೆಯಾಳುಗಳ ಬಿಡುಗಡೆಗೆ ಮಾತುಕತೆ ನಡೆಸಿತ್ತು. ಆದರೆ ಪ್ರಯೋಜನವಾಗಿಲ್ಲ. ಹೀಗಾಗಿ ಇದೀಗ ಇಸ್ರೇಲ್ ತನ್ನ ದಾಳಿ ತೀವ್ರಗೊಳಿಸಿದೆ. ಹಮಾಸ್ ಉಗ್ರರ ಸುರಂಗ ಮಾರ್ಗಗಳ ಮೇಲೆ ದಾಳಿ ನಡೆಸುತ್ತಿದೆ. ಈಗಾಗಲೇ 150ಕ್ಕೂ ಹೆಚ್ಚು ಹಮಾಸ್ ಉಗ್ರರ ಸುರಂಗ ಮಾರ್ಗಗಳನ್ನು ಧ್ವಂಸಗೊಳಿಸಿದೆ.
ಇತ್ತ ವೆಸ್ಟ್‌ಬ್ಯಾಂಕ್‌ನಲ್ಲಿ ಪ್ಯಾಲೆಸ್ತಿನ್ ನಿರಾಶ್ರಿತರಿಗೆ ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳನ್ನು ಇಸ್ರೇಲ್ ಧ್ವಂಸಗೊಳಿಸಿದೆ. ಉತ್ತರ ಗಾಜಾದಲ್ಲಿನ ನಾಗರೀಕರು ದಕ್ಷಿಣ ಗಾಜಾಗೆ ತೆರಳಲು ಇಸ್ರೇಲ್ ಸೇನೆ ಸೂಚನೆ ನೀಡಿದೆ. ಉತ್ತರ ಗಾಜಾದಲ್ಲಿನ ಹಮಾಸ್ ಸುರಂಗದ ಮೇಲೆ ದಾಳಿ ನಡೆಸಲಾಗುತ್ತದೆ. ಹೀಗಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಇಸ್ರೇಲ್ ಸೂಚನೆ ನೀಡಿದೆ. ಇದೀಗ ಉತ್ತರ ಗಾಜಾದ ಮೇಲೆ ಇಸ್ರೇಲ್ ಆಕ್ರಮಣ ತೀವ್ರಗೊಳಿಸಿದೆ.
ಇಸ್ರೇಲ್ ಮೇಲೆ ಮುಗಿಬೀಳಲು ರಣತಂತ್ರ: ಉಗ್ರ ಸಂಘಟನೆಗಳ ಜೊತೆ ಹಿಜ್ಬುಲ್ಲಾ ನಾಯಕರ ರಹಸ್ಯ ಸಭೆ