* ಗಾಳಿಯಲ್ಲಿ ಗುಂಡು ಹಾರಿಸಿ ಉಗ್ರ ಸಂಘಟನೆಗಳ ಸಂಭ್ರಮ* ತಾಲಿಬಾನ್‌ ಬೆಂಬಲಿಸಿ ಪಾಕ್‌ನಲ್ಲಿ ಉಗ್ರರ ವಿಜಯೋತ್ಸವ!

ನವದೆಹಲಿ(ಆ.24): ಪಾಕಿಸ್ತಾನ ಉಗ್ರಗಾಮಿಗಳಿಗೆ ಸಹಕಾರ ನೀಡುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ. ತಾಲಿಬಾನ್‌ ಅಷ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿದ್ದನ್ನು ಬೆಂಬಲಿಸಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ರಾರ‍ಯಲಿ ನಡೆದಿದ್ದು, ಲಷ್ಕರ್‌-ಎ-ತೊಯ್ಬಾ ಮತ್ತು ಜೈಶ್‌-ಎ-ಮೊಹಮ್ಮದ್‌ ಉಗ್ರರು ಭಾಗವಹಿಸಿದ್ದಾರೆ. ರಾರ‍ಯಲಿಯ ಸಂದರ್ಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಉಗ್ರರು ಸಂಭ್ರಮಾಚರಣೆ ಮಾಡಿದ್ದಾರೆ. ಎರಡು ಸಂಘಟನೆಗಳ ನಾಯಕರು ರಾರ‍ಯಲಿಯಲ್ಲಿ ಜನರನ್ನು ಉದ್ದೇಶಿಸಿ ಮಾತಡಿದ್ದಾರೆ.

ಈ ನಡುವೆ, ಪಾಕಿಸ್ತಾನ ಗುಪ್ತ ಸಂಸ್ಥೆ ಐಎಸ್‌ಐ ಮುಖ್ಯಸ್ಥ ಫೈಜ್‌ ಹಮೀದ್‌ ಮತ್ತು ತಾಲಿಬಾನ್‌ ನಾಯಕ ಮುಲ್ಲಾ ಬರಾದರ್‌ ಒಟ್ಟಿಗೆ ಪ್ರಾರ್ಥನೆ ಮಾಡುತ್ತಿರುವ ಫೋಟೋ ವೈರಲ್‌ ಆಗಿದೆ. ಇದು ಪಾಕಿಸ್ತಾನಕ್ಕೆ ಮತ್ತಷ್ಟುಮುಜುಗರ ತಂದೊಡ್ಡಿದೆ.

ತಾಲಿಬಾನ್‌ಗೆ ಬೆಂಬಲ ನೀಡಿದ ದೇಶಗಳಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಸೇರಿದಂತೆ ಹಲವು ನಾಯಕರು ತಾಲಿಬಾನಿಗಳು ಕ್ರೂರಿಗಳಲ್ಲ ಅವರು ಇಸ್ಲಾಂ ಮುಖಾಂತರ ಆಡಳಿತ ನಡೆಸುತ್ತಾರೆ ಎಂದು ಹೇಳಿದ್ದರು. ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಶಾಲೆಯೊಂದರ ವಿದ್ಯಾರ್ಥಿಗಳು ತಾಲಿಬಾನ್‌ ಪರವಾಗಿ ಘೋಷಣೆ ಕೂಗಿದ್ದರು.