ಟೆಹ್ರಾನ್‌/ವಾಷಿಂಗ್ಟನ್‌ [ಜ.06]:  ಇರಾನ್‌ ಸೇನೆಯ ಪ್ರಮುಖ ಕಮಾಂಡರ್‌ ಆಗಿದ್ದ ಖಾಸಿಂ ಸುಲೈಮಾನಿ ಅವರನ್ನು ಡ್ರೋನ್‌ ದಾಳಿ ನಡೆಸಿ ಅಮೆರಿಕ ಹತ್ಯೆ ಮಾಡಿದ ಬೆನ್ನಲ್ಲೇ ಉಭಯ ದೇಶಗಳ ನಡುವಣ ಸಂಘರ್ಷ ಮತ್ತಷ್ಟುವಿಕೋಪಕ್ಕೆ ಹೋಗಿದೆ. ದಾಳಿ ನಡೆಸುವ ಸಲುವಾಗಿ ಅಮೆರಿಕದ ವಿವಿಧ 35 ತಾಣಗಳನ್ನು ಗುರುತಿಸಿರುವ ಇರಾನ್‌, ರಕ್ತಸಿಕ್ತ ಪ್ರತೀಕಾರದ ದ್ಯೋತಕವಾಗಿ ತನ್ನ ಮಸೀದಿಯೊಂದರ ಪವಿತ್ರ ಗುಮ್ಮಟದ ಮೇಲೆ ಕೆಂಪು ಬಾವುಟ ಹಾರಿಸಿದೆ. ಶಿಯಾ ಸಂಪ್ರದಾಯದ ಪ್ರಕಾರ, ಈ ರೀತಿ ಮಸೀದಿ ಮೇಲೆ ಕೆಂಪುಬಾವುಟ ಹಾರಿಸುವುದು ರಕ್ತಪಾತಸಹಿತ ಪ್ರತೀಕಾರ ತೆಗೆದುಕೊಳ್ಳುವುದರ ಸೂಚನೆ.

ಆದರೆ ಇದಕ್ಕೆ ತೀಕ್ಷ್ಣ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇರಾನ್‌ನಲ್ಲಿ ದಾಳಿ ನಡೆಸಬಹುದಾದ 52 ತಾಣಗಳನ್ನು ನಾವೂ ಗುರುತಿಸಿದ್ದೇವೆ. ಪ್ರತೀಕಾರದ ಕ್ರಮಕ್ಕೆ ಆ ದೇಶ ಏನಾದರೂ ಮುಂದಾದರೆ ಭಾರಿ ಬಲಿಷ್ಠ ರೀತಿಯಲ್ಲಿ ತಿರುಗೇಟು ಎದುರಿಸಬೇಕಾಗುತ್ತದೆ ಎಂದು ಅಬ್ಬರಿಸಿದ್ದಾರೆ.

3 ನೇ ಮಹಾಯುದ್ಧ: ಇರಾನ್- ಅಮೆರಿಕಾ ರಣಕಹಳೆಗೆ ವಿಶ್ವವೇ ವಿಲವಿಲ!...

ಈ ನಡುವೆ ತಮ್ಮ ತಂದೆಯ ಹತ್ಯೆಯನ್ನು ನಮ್ಮನ್ನು ಛಿದ್ರಗೊಳಿಸುವುದಿಲ್ಲ ಎಂದು ಅಬ್ಬರಿಸಿರುವ ಸುಲೈಮಾನಿ ಪುತ್ರಿ, ಜೈನಾಬ್‌ ಸುಲೈಮಾನಿ ನಮ್ಮ ತಂದೆಯ ರಕ್ತ ವ್ಯರ್ಥವಾಗಲು ಬಿಡುವುದಿಲ್ಲ. ಅಮೆರಿಕ ವಿರುದ್ಧ ಹೆಜ್ಬುಲ್ಲಾ ಸಂಘಟನೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

ಮತ್ತೊಂದೆಡೆ ಖಾಸಿಂ ಅವರನ್ನು ಹತ್ಯೆ ಮಾಡಿದ ಅಮೆರಿಕದ ಸೇನಾಪಡೆಗಳು ಇದಕ್ಕೆ ಸೂಕ್ತ ಬೆಲೆ ತೆರಬೇಕಾಗಿ ಬರಲಿದೆ ಎಂದು ಲೆಬಾನಾನ್‌ ಮೂಲದ ಹೆಜ್ಬುಲ್ಲಾ ಸಂಘಟನೆ ಮುಖ್ಯಸ್ಥ ಹಸ್ಸನ್‌ ನಸ್ರಲ್ಹಾ ಎಚ್ಚರಿಕೆ ನೀಡಿದ್ದಾರೆ.

ಮಸೀದಿ ಮೇಲೆ ಬಾವುಟ:

ತಮ್ಮ ತಂದೆಯ ರಕ್ತಕ್ಕೆ ಯಾರು ಪ್ರತೀಕಾರ ತೀರಿಸಿಕೊಳ್ಳುತ್ತಾರೆ ಎಂದು ಸುಲೈಮಾನಿ ಅವರ ಪುತ್ರಿ ಇರಾನ್‌ ಅಧ್ಯಕ್ಷ ರೌಹಾನಿ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಅವರು, ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಅಮೆರಿಕದ 35 ಪ್ರಮುಖ ಆಸ್ತಿಗಳನ್ನು ಇರಾನ್‌ ಗುರುತಿಸಿದೆ. ಅಲ್ಲದೆ ಟೆಹ್ರಾನ್‌ನಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ ಖೋಮ್‌ ನಗರದಲ್ಲಿರುವ ಜಮಕರನ್‌ ಮಸೀದಿಯಲ್ಲಿನ ಪವಿತ್ರ ಗುಮ್ಮಟದ ಮೇಲೆ ಕೆಂಪು ಬಾವುಟ ಹಾರಿಸುವ ಮೂಲಕ ಪ್ರತೀಕಾರ ಕೈಗೊಳ್ಳುವ ಕುರಿತು ಬಹಿರಂಗ ಸಂದೇಶ ರವಾನಿಸಿದೆ.

ಟ್ರಂಪ್‌ ವಾರ್ನಿಂಗ್‌:

ಇರಾನ್‌ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗುವುದನ್ನು ಅರಿತಿರುವ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರು, ಆ ದೇಶಕ್ಕೆ ಎಚ್ಚರಿಕೆ ನೀಡಿದ್ದಾರೆ. ನಮ್ಮ ಮೇಲೆ ದಾಳಿ ಮಾಡಿದರೆ, ಪ್ರತಿದಾಳಿ ಮಾಡುತ್ತೇವೆ. ಮತ್ತೆ ದಾಳಿಗೆ ಮುಂದಾದರೆ, ಹಿಂದೆಂದಿಗಿಂತ ಘೋರ ದಾಳಿ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಅಮೆರಿಕನ್ನರನ್ನು ಹತ್ಯೆ ಮಾಡಿದ ಭಯೋತ್ಪಾದಕ ನಾಯಕನಿಗೆ ಮುಕ್ತಿ ಕೊಟ್ಟಿದ್ದೇವೆ. ಆದರೆ ಇರಾನ್‌ ಪ್ರತೀಕಾರದ ಮಾತುಗಳನ್ನು ಆಡುತ್ತಿದೆ. ಇರಾನ್‌ ಏನಾದರೂ ನಮ್ಮ ಮೇಲೆ ದಾಳಿ ಮಾಡಿದರೆ, ಆ ದೇಶದ 52 ತಾಣಗಳನ್ನು ನಾವೂ ಗುರುತಿಸಿದ್ದೇವೆ. ಅದರಲ್ಲಿ ಇರಾನ್‌ನ ಅತ್ಯುನ್ನತ ಹಾಗೂ ಮಹತ್ವದ ಸ್ಥಳಗಳಿವೆ. ಇರಾನ್‌ನ ಸಂಸ್ಕೃತಿಗೂ ಸಂಬಂಧಿಸಿದ್ದಾಗಿವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಕೀನ್ಯಾದಲ್ಲಿ ಅಮೆರಿಕ ಸೇನಾ ನೆಲೆ ಮೇಲೆ ಉಗ್ರರ ದಾಳಿ

-ಅಮೆರಿಕದ 2 ಯುದ್ಧವಿಮಾನ ಧ್ವಂಸ

ಒಂದೆಡೆ ಇರಾನ್‌ ದಾಳಿ ಎಚ್ಚರಿಕೆ ನೀಡುತ್ತಿದ್ದರೆ ಇನ್ನೊಂದೆಡೆ ಅಮೆರಿಕದ ಸೇನಾ ನೆಲೆ ಮೇಲೆ ಉಗ್ರರ ದಾಳಿ ನಡೆದಿದೆ. ಕೀನ್ಯಾದ ಕರಾವಳಿ ಭಾಗದ ಲಾಮು ಪ್ರದೇಶದಲ್ಲಿರುವ ಅಮೆರಿಕ ಹಾಗೂ ಕೀನ್ಯಾ ವಾಯು ನೆಲೆಯ ಮೇಲೆ ಅಲ್‌ ಖೈದಾ ನಂಟು ಹೊಂದಿರುವ ಸೊಮಾಲಿಯಾದ ಅಲ್‌-ಶಬಾಬ್‌ ಉಗ್ರ ಸಂಘಟನೆ ಭಾನುವಾರ ಮುಂಜಾನೆ ಬಾಂಬ್‌ ದಾಳಿ ಮಾಡಿದೆ. ಘಟನೆ ನಡೆದಿರುವ ಬಗ್ಗೆ ಅಮೆರಿಕ ಖಚಿತ ಪಡಿಸಿದ್ದು, ನಾಲ್ವರು ದಾಳಿಕೋರರನ್ನು ಸಂಹರಿಸಲಾಗಿದೆ. ಈ ಮಧ್ಯೆ ಘಟನೆ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೀನ್ಯಾ ಪೊಲೀಸರು ತಿಳಿಸಿದ್ದಾರೆ. ಮುಂಜಾನೆ 5.30ರ ಸುಮಾರಿಗೆ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ ಅಮೆರಿಕ ನಿರ್ಮಿತ 2 ಯುದ್ಧ ವಿಮಾನ ಹಾಗೂ ಹಲವು ವಾಹನಗಳು ನಾಶವಾಗಿದೆ. ಸೈನಿಕರ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. ದಾಳಿ ವೇಳೆ 100 ಅಮೆರಿಕ ಸೈನಿಕರಿದ್ದರು ಎಂದು ತಿಳಿದು ಬಂದಿದೆ.