ಹೆಲಿಕಾಪ್ಟರ್ ಅಪಘಾತ : ಇರಾನ್ ಅಧ್ಯಕ್ಷ ಬದುಕಿರುವ ಸಾಧ್ಯತೆ ಕಡಿಮೆ: ಇರಾನ್ ಮಾಧ್ಯಮ ವರದಿ
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ಇರಾನ್ ವಿದೇಶಾಂಗ ಸಚಿವ ಹುಸೈನ್ ಅಮಿರ್ ಅಬ್ದೊಲ್ಲಾಹಿಯನ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಿನ್ನೆ ಅಪಘಾತಕ್ಕೀಡಾಗಿತ್ತು. ಆದರೆ ದುರಂತದಲ್ಲಿ ಅವರು ಸಾವನ್ನಪ್ಪಿದ್ದಾರೆಯೇ ಇಲ್ಲವೋ ಎಂಬ ಬಗ್ಗೆ ಖಚಿತತೆ ಇರಲಿಲ್ಲ,
ನವದೆಹಲಿ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ಇರಾನ್ ವಿದೇಶಾಂಗ ಸಚಿವ ಹುಸೈನ್ ಅಮಿರ್ ಅಬ್ದೊಲ್ಲಾಹಿಯನ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಿನ್ನೆ ಅಪಘಾತಕ್ಕೀಡಾಗಿತ್ತು. ಆದರೆ ದುರಂತದಲ್ಲಿ ಅವರು ಸಾವನ್ನಪ್ಪಿದ್ದಾರೆಯೇ ಇಲ್ಲವೋ ಎಂಬ ಬಗ್ಗೆ ಖಚಿತತೆ ಇರಲಿಲ್ಲ, ಆದರೆ ಇಂದು ಇರಾನ್ ಸ್ಟೇಟ್ ಮೀಡಿಯಾವೊಂದು ಈ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದವರು ಜೀವಂತವಾಗಿರುವ ಯಾವುದೇ ಲಕ್ಷಣ ಕಂಡು ಬರುತ್ತಿಲ್ಲ ಎಂದು ವರದಿ ಮಾಡಿದೆ. ಹೀಗಾಗಿ ಇರಾನ್ ಅಧ್ಯಕ್ಷ ಹಾಗೂ ವಿದೇಶಾಂಗ ಸಚಿವರು ಈ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ಹೆಲಿಕಾಪ್ಟರ್ ಪತ್ತೆಯಾದ ನಂತರ ಅದರಲ್ಲಿದ್ದ ಪ್ರಯಾಣಿಕರು ಜೀವಂತವಾಗಿರುವ ಯಾವುದೇ ಲಕ್ಷಣಗಳಿಲ್ಲ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಟಿವಿ ಅನದೋಲು ವರದಿ ಮಾಡಿದೆ. ಇರಾನ್ ಹಾಗೂ ಅಜೆರ್ಬೈಜಾನಿ ಗಡಿಯಲ್ಲಿ ನಿನ್ನೆ ಅಜೆರ್ಬೈಜಾನಿ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು ಕ್ವಿಜ್ ಖಲಾಸಿ ಅಣೆಕಟ್ಟನ್ನು ಉದ್ಘಾಟಿಸಿದ್ದರು. ಈ ಸಮಾರಂಭಕ್ಕೆ ಇರಾನ್ ಅಧ್ಯಕ್ಷ ರೈಸಿ ಹಾಗೂ ವಿದೇಶಾಂಗ ಸಚಿವರು ಹೋಗಿದ್ದರು. ಅಲ್ಲಿಂದ ಇರಾನ್‌ನ ತಬ್ರೀಜ್‌ಗೆ ಆಗಮಿಸುವ ವೇಳೆ ಅವರಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಅಧ್ಯಕ್ಷ ರೈಸಿ, ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್ ಮತ್ತು ಇತರ ಅಧಿಕಾರಿಗಳಿದ್ದ ಹೆಲಿಕಾಪ್ಟರ್ ಟೇಕಾಫ್ ಆದ ಸುಮಾರು 30 ನಿಮಿಷಗಳ ನಂತರ ರಾಡಾರ್ ಸಂಪರ್ಕ ಕಳೆದುಕೊಂಡಿತು. ಕೂಡಲೇ ಹೆಲಿಕಾಪ್ಟರ್‌ಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗಳು ನಡೆದವು. ಆದರೆ ಈಗ ಇರಾನ್‌ನ ರಾಜ್ಯ ಮಾಧ್ಯಮಗಳು ಇದೊಂದು ಅಪಘಾತ ಎಂದು ಹೇಳಿದ್ದು, ಇರಾನ್ ಅಧ್ಯಕ್ಷರ ಜೀವಂತಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿವೆ.
ಇರಾನ್ ಅಧ್ಯಕ್ಷ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತ, ಮುಂದುವರಿದ ರಕ್ಷಣಾ ಕಾರ್ಯಾಚರಣೆ!
ನಿನ್ನೆ ಅಧ್ಯಕ್ಷರ ಪರಿವಾರದ ಇಬ್ಬರು ಸದಸ್ಯರು ರಕ್ಷಣಾ ತಂಡಗಳನ್ನು ಸಂಪರ್ಕಿಸಿದ್ದಾರೆ ಎಂದು ಇರಾನ್‌ನ ಕಾರ್ಯನಿರ್ವಾಹಕ ವ್ಯವಹಾರಗಳ ಉಪ ಅಧ್ಯಕ್ಷ ಮೊಹ್ಸೆನ್ ಮನ್ಸೌರಿ ಅವರು ಹೇಳಿದ್ದರು. ಆದರೆ ಆ ಸಂದರ್ಭದಲ್ಲಿ ಅವರು ಈ ಘಟನೆಯೂ ದುರಂತ ಆಗಿರಲಾರದು, 2 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಅಪಘಾತದ ಸ್ಥಳವನ್ನು ಪತ್ತೆ ಮಾಡುವಲ್ಲಿ ರಕ್ಷಣಾ ಸಚಿವಾಲಯ ಯಶಸ್ವಿಯಾಗಿದೆ ಎಂದು ಮನ್ಸೌರಿ ಹೇಳಿದ್ದರು.
ಪತನಗೊಂಡ ಹೆಲಿಕಾಪ್ಟರ್‌ನಲ್ಲಿದ್ದ 63 ವರ್ಷದ ಅಧ್ಯಕ್ಷ ರೈಸಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಲು ತಬ್ರಿಜ್‌ನ ಶುಕ್ರವಾರದ ಪ್ರಾರ್ಥನೆಯ ನಾಯಕ ಯಶಸ್ವಿಯಾಗಿದ್ದಾರೆ ಎಂದು ಆರ್ಥಿಕ ರಾಜತಾಂತ್ರಿಕತೆಯ ಉಪ ವಿದೇಶಾಂಗ ಸಚಿವ ಮೆಹದಿ ಸಫಾರಿ ಹೇಳಿದ್ದರು ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿತ್ತು. ಅಧ್ಯಕ್ಷ ರೈಸಿ ಅವರ ಪರಿವಾರ ಪ್ರಯಾಣಿಸುವ ಮೂರು ಹೆಲಿಕಾಪ್ಟರ್‌ಗಳಲ್ಲಿ ಒಂದರಲ್ಲಿ ಉಪಸ್ಥಿತರಿದ್ದ ಮೆಹದಿ ಸಫಾರಿ, ತಬ್ರಿಜ್ ಶುಕ್ರವಾರದ ಪ್ರಾರ್ಥನಾ ಮುಖ್ಯಸ್ಥರು ಅಪಘಾತಕ್ಕೀಡಾದ ಕಾಪ್ಟರ್‌ನೊಳಗಿಂದ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿದ್ದಾರೆ ಎಂದು ಮೆಹದಿ ಸಫಾರಿ ಹೇಳಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈಗ ಇರಾನ್ ಅಧ್ಯಕ್ಷರು ಜೀವಂತವಾಗಿರುವ ಸಾಧ್ಯತೆ ಕಡಿಮೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬುರ್ಕಾ ಬೇಕೋ, ಬೇಡ್ವೋ? ಭಾರತದಲ್ಲಿ ನಿಲ್ಲದ ಹೋರಾಟ, ಸೌದಿಯಲ್ಲಿ ಮೊಟ್ಟಮೊದಲ ಸ್ವಿಮ್ ವೇರ್ ಶೋ!
ಇಸ್ರೇಲ್ ಜತೆ ಇರಾನ್ ವೈಷಮ್ಯ ತಾರಕಕ್ಕೆ ಏರಿರುವಾಗಲೇ ಈ ಬೆಳವಣಿಗೆ ನಡೆದಿದೆ. ರೈಸಿ ಯೋಗಕ್ಷೇಮಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಾರ್ಥಿಸಿದ್ದರು. ಇರಾನ್‌ನ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದ ಜೋಲ್ಫಾ ಬಳಿಯ ದುರ್ಗಮ ಬೆಟ್ಟಗಳಲ್ಲಿ ಭಾನುವಾರ ಈ ಘಟನೆ ಸಂಭವಿಸಿತ್ತು. ಪ್ರತಿಕೂಲ ಹವಾಮಾನವು ಘಟನೆಗೆ ಕಾರಣ ಎಂದು ಇರಾನ್ ಸರ್ಕಾರ ಹೇಳಿದೆ. ಅಧ್ಯಕ್ಷರ ಜತೆ ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಕೂಡ ಕಾಣೆ ಆಗಿದ್ದರು. ಆದರೆ ಹೆಲಿಕಾಪ್ಟರ್ ಪತ್ತೆ 65 ರಕ್ಷಣಾ ತಂಡಗಳು ಶೋಧಿಸಿ, ಅದರ ಅವಶೇಷಗಳನ್ನು ಪತ್ತೆ ಹಚ್ಚುವಲ್ಲಿ ಯಶ ಕಂಡಿದ್ದವು. ಆದರೆ ರೈಸಿ ಮತ್ತು ಹುಸೇನ್ ಸ್ಥಿತಿ ತಿಳಿದುಬಂದಿರಲಿಲ್ಲ. ರಾತ್ರಿ ಹೊತ್ತು ಹಾಗೂ ಪ್ರತಿಕೂಲ ಹವಾಮಾನವು ಶೋಧಕ್ಕೆ ಅಡ್ಡಿ ಆಗಿದ್ದವು.
ಉತ್ತರಾಧಿಕಾರಿ ಪ್ರಕ್ರಿಯೆ ಶುರು:
ಈ ನಡುವೆ, ಅಧ್ಯಕ್ಷರ ಸ್ಥಿತಿಗತಿ ಬಗ್ಗೆ ಗೊಂದಲ ಇರುವ ಕಾರಣ ಇರಾನ್ ಉಪಾಧ್ಯಕ್ಷಗೆ ಅಧ್ಯಕ್ಷ ಪಟ್ಟ ಕಟ್ಟುವ ಪ್ರಕ್ರಿಯೆಯೂ ನಡೆದಿದೆ ಎಂದು ಮೂಲಗಳು ಹೇಳಿವೆ. ಏತನ್ಮಧ್ಯೆ ಶಾಂತಿ ಕಾಪಾಡಬೇಕು ಹಾಗೂ ವದಂತಿ ಹರಡಿಸಬಾರದು ಎಂದು ಇರಾನ್ ಪರಮೋಚ್ಚ ನಾಯಕ ಅಲಿ ಖಮೇನಿ ಮನವಿ ಮಾಡಿದ್ದಾರೆ.
ಆಗಿದ್ದೇನು?:
ಅಜರ್‌ಬೈಜಾನ್‌ಗೆ ಅಣೆಕಟ್ಟೆ ಉದ್ಘಾಟನೆಗೆಂದು ಹೋಗಿದ್ದ ಅಧ್ಯಕ್ಷ ರೈಸಿ ಅವರು ವಿದೇಶಾಂಗ ಸಚಿವ, ತಮ್ಮ ಪ್ರತಿನಿಧಿ ಹಾಗೂ ಅಧಿಕಾರಿಯೊಬ್ಬರ ಸಮೇತ ತೆಹ್ರಾನ್‌ಗೆ 3 ಹೆಲಿಕಾಪ್ಟರ್ ತಂಡದೊಂದಿಗೆ ಮರಳುತ್ತಿದ್ದರು. 2 ಹೆಲಿಕಾಪ್ಟರ್ ಸುರಕ್ಷಿತವಾಗಿ ವಾಪಸು ಬಂದರೆ ಅಧ್ಯಕ್ಷ ಹಾಗೂ ವಿದೇಶಾಂಗ ಸಚಿವ ಇದ್ದ ಕಾಪ್ಟರ್ ಪತನಗೊಂಡಿತ್ತು.