ಯುಎಇ ಪ್ರವಾಸದಲ್ಲಿರುವ  ಪ್ರಧಾನಿ ನರೇಂದ್ರ ಮೋದಿಯವರಿಗೆ ಯುಎಇ ರಾಜಧಾನಿ ಅಬುಧಾಬಿಯಲ್ಲಿ ದೇಶದ ರಾಜ ಹಾಗೂ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಝಯೇದ್‌ ಅಲ್‌ ನಹ್ಯಾನ್‌ ಅವರು ಫ್ರೆಂಡ್‌ಶಿಪ್‌ ಬ್ಯಾಂಡ್‌ ಕಟ್ಟಿದರು. 

ಅಬುಧಾಬಿ: ಯುಎಇ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಯುಎಇ ರಾಜಧಾನಿ ಅಬುಧಾಬಿಯಲ್ಲಿ ದೇಶದ ರಾಜ ಹಾಗೂ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಝಯೇದ್‌ ಅಲ್‌ ನಹ್ಯಾನ್‌ ಅವರು ಫ್ರೆಂಡ್‌ಶಿಪ್‌ ಬ್ಯಾಂಡ್‌ ಕಟ್ಟಿದರು. ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಭೇಟಿ ಯಶಸ್ವಿಯಾಗಿದ್ದು, ಆರ್ಥಿಕ ಹಾಗೂ ಶಿಕ್ಷಣ ವಿಷಯಗಳಿಗೆ ಸಂಬಂಧಿಸಿದಂತೆ 3 ಮಹತ್ವದ ಒಪ್ಪಂದ ಮಾಡಿಕೊಳ್ಳಲಾಗಿದೆ. ಗಡಿಯಾಚಿನ ವ್ಯವಹಾರಗಳನ್ನು ಸ್ಥಳೀಯ ಕರೆನ್ಸಿಯಲ್ಲೇ ಮಾಡಲು ಹಾಗೂ ಭಾರತದ ಯುಪಿಐ ಹಾಗೂ ಗಲ್ಪ್‌ನ ಐಐಪಿ ಪೇಮೆಂಟ್‌ ವ್ಯವಸ್ಥೆಗಳ ಸಂಯೋಜನೆ ಮಾಡಲು ನಿರ್ಧರಿಸಲಾಗಿದೆ. ಇದರ ಜತೆಗೆ ದುಬೈನಲ್ಲಿ ಐಐಟಿ-ದಿಲ್ಲಿ ಕ್ಯಾಂಪಸ್‌ ಸ್ಥಾಪನೆಗೆ ಸಮ್ಮತಿ ಲಭಿಸಿದೆ.

ಫ್ರಾನ್ಸ್‌ಗೆ ಭೇಟಿ ನೀಡಿದ್ದ ಮೋದಿ ಶನಿವಾರ ಮಾರ್ಗಮಧ್ಯೆ ಯುಎಇಗೆ ಸಂಕ್ಷಿಪ್ತ ಭೇಟಿ ನೀಡಿದರು. ಈ ವೇಳೆ ಅವರು ಯುಎಇ ಅರಸ ಹಾಗೂ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಝಯೇದ್‌ ಅಲ್‌ ನಹ್ಯಾನ್‌ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ‘ಈ ಸಂದರ್ಭದಲ್ಲಿ ಆರ್ಥಿಕ ಹಾಗೂ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ಹಾಗೂ ಆರ್ಥಿಕ ಬಾಂಧವ್ಯಕ್ಕೆ ಬಲ ಬರಲಿದೆ. ಸರಾಗ ಹೂಡಿಕೆಗೆ ಸಹಕಾರಿಯಾಗಲಿದೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ‘ಅಲ್‌ ನಹ್ಯಾನ್‌ ಅವರಲ್ಲಿ ನಾನು ಸೋದರನ ಪ್ರೀತಿ ಕಂಡೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಯುಎಇಗೆ ಪ್ರಧಾನಿ ಮೋದಿ ಭೇಟಿ: ಬುರ್ಜ್ ಖಲೀಫಾದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ, ಮೋದಿ ಫೋಟೋ

ಒಪ್ಪಂದಗಳು ಏನು?:

ಭಾರತದ ಕೇಂದ್ರೀಯ ಬ್ಯಾಂಕ್‌ ಆದ ಆರ್‌ಬಿಐ (RBI) ಹಾಗೂ ಯುಎಇ ಸೆಂಟ್ರಲ್‌ ಬ್ಯಾಂಕ್‌ಗಳು (UAE Central Bank) 2 ಒಪ್ಪಂದಕ್ಕೆ ಮೋದಿ-ನಹ್ಯಾನ್‌ ಸಮ್ಮುಖದಲ್ಲಿ ಸಹಿ ಹಾಕಿವೆ. ಮೊದಲನೆಯದಾಗಿ ಭಾರತದ ‘ರುಪಾಯಿ’ ಹಾಗೂ ಯುಎಇಯ ‘ದಿರ್ಹಾಂ’ನಲ್ಲಿ ಗಡಿಯಾಚಿಗಿನನ ಪರಸ್ಪರ ವ್ಯವಹಾರಗಳನ್ನು ನಡೆಸಲು ಸಮ್ಮತಿಸಲಾಗಿದೆ. ಇದರಿಂದ ಉಭಯ ದೇಶಗಳ ವ್ಯಾಪಾರಿಗಳು ಆಯಾಯ ಸ್ಥಳೀಯ ಕರೆನ್ಸಿಯಲ್ಲೇ ವ್ಯವಹಾರ ನಡೆಸಲು ಅವಕಾಶ ಸಿಗಲಿದ್ದು, ಹೂಡಿಕೆಗೆ ಹಾಗೂ ವ್ಯಾಪಾರ-ವಹಿವಾಟಿಗೆ ಉತ್ತೇಜನ ದೊರಕಲಿದೆ ಎಂದು ಆಶಿಸಲಾಗಿದೆ.

ಎರಡನೆಯದಾಗಿ ಭಾರತದ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯಾದ ‘ಯುಪಿಐ’(UPI) ಹಾಗೂ ಅರಬ್‌ನ ‘ಐಐಪಿ’ಗಳನ್ನು(IIP) ಪರಸ್ಪರ ಸಂಯೋಜಿಸಲು ನಿರ್ಧರಿಸಲಾಗಿದೆ. ಇದರಿಂದ ಉಭಯ ದೇಶಗಳ ಜನರು ಡಿಜಿಟಲ್‌ ಪೇಮೆಂಟ್‌ (Digital Payment)ಮೂಲಕ ಕ್ಷಣಾರ್ಧದಲ್ಲಿ ಹಣಕಾಸು ವಹಿವಾಟು ನಡೆಸಬಹುದಾಗಿದೆ.

ಫ್ರಾನ್ಸ್‌ ಪತ್ರಿಕೆಗೆ ಪ್ರಧಾನಿ ಸಂದರ್ಶನ: ಏನೇನೆಂದರು ನರೇಂದ್ರ ಮೋದಿ

ಇನ್ನೊಂದೆಡೆ ಅಬುಧಾಬಿ ಶಿಕ್ಷಣ ಇಲಾಖೆ (abudhabi education department) ಹಾಗೂ ಭಾರತದ ಶಿಕ್ಷಣ ಸಚಿವಾಲಯಗಳು ಐಐಟಿ-ದಿಲ್ಲಿ ಕ್ಯಾಂಪಸ್ಸನ್ನು ಯುಎಇನಲ್ಲಿ ಆರಂಭಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ಇದು ಭಾರತದ ಐಐಟಿ, ವಿದೇಶದಲ್ಲಿ ಆರಂಭಿಸಿದ 2ನೇ ಕ್ಯಾಂಪಸ್‌ ಆಗಲಿದೆ. ಮೊದಲನೇ ಕ್ಯಾಂಪಸ್‌ ತಾಂಜೇನಿಯಾದಲ್ಲಿ ಆರಂಭವಾಗಲಿದ್ದು, ಅದನ್ನು ಐಐಟಿ-ಮದ್ರಾಸ್‌ ಸ್ಥಾಪಿಸಲಿದೆ.