ವೈಟ್‌ಹೌಸ್‌ನಲ್ಲಿ ಭಾರತದ ಸುಧಾಗೆ ಅಮೆರಿಕ ಪೌರತ್ವ!
ಶ್ವೇತಭವನದಲ್ಲಿ ಸುಧಾ ಸೇರಿ 5 ವಿದೇಶಿಯರಿಗೆ ಅಮೆರಿಕ ಪೌರತ್ವ ಪ್ರದಾನ| ಮಂಗಳವಾರ ಅಮೆರಿಕ ಅಧ್ಯಕ್ಷರ ಗೃಹಕಚೇರಿ ಶ್ವೇತಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮ
ವಾಷಿಂಗ್ಟನ್(ಆ.27): ಮಂಗಳವಾರ ಅಮೆರಿಕ ಅಧ್ಯಕ್ಷರ ಗೃಹಕಚೇರಿ ಶ್ವೇತಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಸುಧಾ ಸುಂದರಿ ನಾರಾಯಣ್ ಸೇರಿದಂತೆ 5 ವಿದೇಶಿಯರಿಗೆ ಅಮೆರಿಕ ಪೌರತ್ವ ನೀಡುವುದರ ಜೊತೆಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ವಿದೇಶಿಯರಿಗೆ ಪೌರತ್ವ ನೀಡುವುದು ಹೊಸತಲ್ಲವಾದರೂ, ಶ್ವೇತಭವನದಲ್ಲಿ ಇಂಥದ್ದೊಂದು ಕಾರ್ಯಕ್ರಮ ಆಯೋಜಿಸಿ, ಭಾರತ, ಬೊಲಿವಿಯಾ, ಲೆಬನಾನ್, ಸುಡಾನ್ ಮತ್ತು ಘಾನಾದ ತಲಾ ಒಬ್ಬರಿಗೆ ಪ್ರತಿಜ್ಞಾವಿಧಿ ಬೋಧಿಸಿದ್ದು ಬಲು ಅಪರೂಪ. ಸುಧಾ ಸಾಫ್ಟ್‌ವೇರ ಎಂಜಿನಿಯರ್ ಆಗಿದ್ದು, ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ 13 ವರ್ಷದಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ.
ಶ್ವೇತಭವನದಲ್ಲೇ ಕಾರ್ಯಕ್ರಮ ಆಯೋಜಿಸಿದ್ದು ಏಕೆ ಎಂಬ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿಲ್ಲವಾದರೂ, ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ವಿದೇಶಿ ಮೂಲದವರ ಓಟುಗಳನ್ನು ಸೆಳೆಯುವ ಯತ್ನ ಎನ್ನಲಾಗಿದೆ.
ವಿದೇಶೀ ನೌಕರರಿಗೆ ಅಮೆರಿಕದ ಬಾಗಿಲು ಬಂದ್!
ಅಮೆರಿಕದ ಉದ್ಯೋಗದ ಮೇಲೆ ಕಣ್ಣಿಟ್ಟಿರುವ ಭಾರತದ ಸಾಫ್ಟ್‌ವೇರ್ ಎಂಜಿನಿಯರ್‌ಗಳೂ ಸೇರಿದಂತೆ ವಿದೇಶಿ ಉದ್ಯೋಗಾಕಾಂಕ್ಷಿಗಳಿಗೆ ಭಾರಿ ಹೊಡೆತ ನೀಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ವರ್ಷದ ಅಂತ್ಯದವರೆಗೆ ಎಚ್1ಬಿ ಸೇರಿದಂತೆ ಎಲ್ಲ ನೌಕರಿ ವೀಸಾಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಿದ್ದಾರೆ. ಆದರೆ, ಈಗಾಗಲೇ ಅಮೆರಿಕದ ನಾಗರಿಕತ್ವ ಪಡೆದಿರುವ ಗ್ರೀನ್‌ಕಾರ್ಡ್ ಹೋಲ್ಡರ್‌ಗಳು, ಅವರ ಪತ್ನಿ ಹಾಗೂ ಮಕ್ಕಳು, ಸದ್ಯ ಚಾಲ್ತಿಯಲ್ಲಿರುವ ಎಚ್1ಬಿ ಸೇರಿದಂತೆ ಇತರ ನೌಕರಿಗಳ ವೀಸಾದಾರರಿಗೆ ಇದರಿಂದ ಸಮಸ್ಯೆಯಾಗುವುದಿಲ್ಲ. ಆದರೆ, ನೌಕರಿ ವೀಸಾಗಳ ನವೀಕರಣಕ್ಕೆ ಕಾಯುತ್ತಿರುವವರು ಸ್ವದೇಶಕ್ಕೆ ಮರಳಬೇಕಾಗುತ್ತದೆ.