ವಾಷಿಂಗ್ಟನ್(ನ.08)‌: ಜೋ ಬೈಡೆನ್‌ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗುವುದರೊಂದಿಗೆ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅಮೆರಿಕ ಇತಿಹಾಸದಲ್ಲೇ ಮೊದಲ ಉಪಾಧ್ಯಕ್ಷೆಯಾಗಿದ್ದಾರೆ. ಅಷ್ಟೇ ಅಲ್ಲದೆ ಅವರು ಮೊದಲ ಭಾರತೀಯ ಮೂಲದ, ಮೊದಲ ಕಪ್ಪು ವರ್ಣೀಯ ಹಾಗೂ ಮೊದಲ ಆಫ್ರಿಕನ್‌- ಅಮೆರಿಕನ್‌ ಉಪಾಧ್ಯಕ್ಷೆ ಎಂಬ ದಾಖಲೆಗಳನ್ನು ಒಂದೇ ಹಂತದಲ್ಲಿ ಬರೆದಿದ್ದಾರೆ.

ಹಾಲಿ ಮೈಕ್‌ ಪೆನ್ಸ್‌ ಅವರು ಅಮೆರಿಕದ 48ನೇ ಉಪಾಧ್ಯಕ್ಷರಾಗಿದ್ದು, ಕಮಲಾ ಅವರು 49ನೇ ಉಪಾಧ್ಯಕ್ಷೆಯಾಗಿ ಜ.20ರಂದು ಅಧ್ಯಕ್ಷರ ಜತೆಗೇ ಅಧಿಕಾರ ಸ್ವೀಕರಿಸಲಿದ್ದಾರೆ.

"

ಕ್ಯಾಲಿಫೋರ್ನಿಯಾದ ಸೆನೆಟರ್‌ ಆಗಿರುವ ಕಮಲಾ ಹ್ಯಾರಿಸ್‌ ಡೆಮೊಕ್ರೆಟಿಕ್‌ ಪಕ್ಷದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು. ಹೀಗಾಗಿ ಅವರಿಗೆ ಉಪಾಧ್ಯಕ್ಷ ಅಭ್ಯರ್ಥಿ ಹುದ್ದೆ ಒಲಿದುಬಂದಿತ್ತು.

ಕ್ಯಾಲಿಫೋರ್ನಿಯಾದ ಓಕ್ಲಾಂಡ್‌ನಲ್ಲಿ ಜನಿಸಿದ ಕಮಲಾ ಹ್ಯಾರಿಸ್‌ ಭಾರತದ ಚೆನ್ನೈ ಮೂಲದವರಾಗಿದ್ದಾರೆ. ಕಮಲಾ ಹ್ಯಾರಿಸ್‌ ಅವರ ತಾಯಿ ಶ್ಯಾಮಲಾ ಗೋಪಾಲ್‌ ಹ್ಯಾರಿಸ್‌ ಚೆನ್ನೈ ಮೂಲದವರು. ತಂದೆ ಜಮೈಕಾ ಮೂಲದವರಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್‌ ಭಾರತೀಯ ಮತಗಳನ್ನು ಸೆಳೆಯುವಲ್ಲಿ ಯಶಸ್ವಿ ಆಗಿದ್ದರು.