ವನ್ಯಜೀವಿಗಳನ್ನು ಮನೆಯಲಿಟ್ಟು ಸಾಕುತ್ತಿರುವ ವೈದ್ಯ ಅವುಗಳನ್ನು ಬಿಟ್ಟು ದೇಶಕ್ಕೆ ಮರಳಲಾರೆ ಎಂದು ಗಿರೀಶ್ ಉಕ್ರೇನ್‌ನಲ್ಲಿ ವೈದ್ಯರಾಗಿರುವ ಆಂಧ್ರಪ್ರದೇಶ ಮೂಲದ ಗಿರೀಶ್
ವೈದ್ಯಕೀಯ ವ್ಯಾಸಂಗಕ್ಕಾಗಿ ಉಕ್ರೇನ್‌ಗೆ ತೆರಳಿರುವ ಕೆಲವು ವಿದ್ಯಾರ್ಥಿಗಳು ತಾವು ಸಾಕಿದ ಬೆಕ್ಕು ಹಾಗೂ ನಾಯಿಗಳೊಂದಿಗೆ ವಿಮಾನ ಏರಿ ಭಾರತಕ್ಕೆ ಬಂದಿದ್ದಾರೆ. ಬೆಕ್ಕು ನಾಯಿಯನ್ನೇನೋ ತರಬಹುದು ಆದರೆ ವನ್ಯಜೀವಿ ಎನಿಸಿದ ಚಿರತೆ ತರುವುದು ಹೇಗೆ. ಹೌದು ಉಕ್ರೇನ್‌ನಲ್ಲಿದ್ದ ವೈದ್ಯನೋರ್ವ ಮನೆಯಲ್ಲಿ ಚಿರತೆಯನ್ನು ಸಾಕುತ್ತಿದ್ದ ಆದರೆ ಈಗ ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಮನುಷ್ಯರು ಜೀವಿಸುವಂತಹ ವಾತಾವರಣವಿಲ್ಲ ಹೀಗಾಗಿ ಬಹುತೇಕ ಭಾರತೀಯರನ್ನು ಆಪರೇಷನ್ ಗಂಗಾ ಮೂಲಕ ಭಾರತ ಸರ್ಕಾರವೇ ಉಕ್ರೇನ್‌ನಿಂದ ಸ್ಥಳಾಂತರಿಸಿದೆ. ಬಹುತೇಕ ಭಾರತೀಯ ಪ್ರಜೆಗಳ ಸ್ಥಳಾಂತರವಾಗಿದೆ. ಅಲ್ಲದೇ ಅನೇಕ ವಿದ್ಯಾರ್ಥಿಗಳು ಇದೀಗ ತಮ್ಮ ಪ್ರೀತಿಯ ಸಾಕುಪ್ರಾಣಿಗಳನ್ನು ಬಿಟ್ಟು ತವರಿಗೆ ವಾಪಸ್ ಆಗಿದ್ದಾರೆ. ಇದರ ಮಧ್ಯೆ ಅಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯನೋರ್ವ ಅವುಗಳನ್ನ ಬಿಟ್ಟು ಬರಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಆಂಧ್ರಪ್ರದೇಶ ಮೂಲದ ಭಾರತೀಯ ವೈದ್ಯರೊಬ್ಬರು ತಮ್ಮ ಮನೆಯ ನೆಲಮಾಳಿಗೆಯಲ್ಲಿ ಎರಡು ಸಾಕು ಚಿರತೆಗಳೊಂದಿಗೆ ಒಂದು ವಾರದಿಂದ ವಾಸಿಸುತ್ತಿದ್ದಾರೆ. ಆಂಧ್ರದ ವೈದ್ಯ ಗಿರಿಕುಮಾರ್ ಪಾಟೀಲ್ (Girikumar Patil), ಪೂರ್ವ ಉಕ್ರೇನ್‌ನ ಡೊನ್‌ಬಾಸ್ ಪ್ರದೇಶದ ಸೆವೆರೊಡೊನೆಟ್ಸ್ಕ್(Severodonetsk) ಪಟ್ಟಣದಲ್ಲಿ 6 ವರ್ಷಕ್ಕೂ ಹೆಚ್ಚು ಕಾಲದಿಂದ ವಾಸಿಸುತ್ತಿದ್ದಾರೆ. ಬಿಬಿಸಿ ವರದಿ ಮಾಡಿದಂತೆ ಪಾಟೀಲ್ ಅವರು 20 ತಿಂಗಳ ಹಿಂದೆ ಕೈವ್ ಮೃಗಾಲಯದಿಂದ (Kyiv zoo) ಕಪ್ಪು ಹಾಗೂ ಮಾಮೂಲಿ ಚಿರತೆಯನ್ನು ದತ್ತು ಪಡೆದಿದ್ದರು. ಆದರೆ ಯುದ್ಧ ನಡೆಯುತ್ತಿದ್ದು, ಇಂತಹ ಸ್ಥಿತಿಯಲ್ಲಿ ಅವುಗಳನ್ನು ಬಿಟ್ಟು ಬರಲು ಅವರು ನಿರಾಕರಿಸಿದ್ದಾರೆ.
Russia Ukraine War: ಉಕ್ರೇನ್ ಜೊತೆ ನಾವಿದ್ದೇವೆ, ರಷ್ಯಾ ಎದುರಿಸಲು ಪ್ಲ್ಯಾನ್ ಬಿ ಸಿದ್ದ ಎಂದ ಅಮೆರಿಕಾ
ತಮ್ಮ ಈ ಎರಡೂ ಚಿರತೆಗಳು ಸುತ್ತಲೂ ಸಂಭವಿಸುತ್ತಿರುವ ಬಾಂಬ್ ದಾಳಿಯಿಂದ ಭಯಗೊಂಡಿವೆ ಮತ್ತು ಆಹಾರ ಕಡಿಮೆ ತಿನ್ನಲು ಪ್ರಾರಂಭಿಸಿವೆ ಎಂದು 40 ವರ್ಷ ವಯಸ್ಸಿನ ವೈದ್ಯ ಗಿರಿ ಕುಮಾರ್ ಹೇಳಿದರು. ಯುದ್ಧ ಪ್ರಾರಂಭವಾದಾಗಿನಿಂದ, ಪಾಟೀಲ್ ಅವರು ತಮ್ಮ ಸಾಕುಪ್ರಾಣಿಗಳಿಗೆ ಆಹಾರವನ್ನು ಖರೀದಿಸಲು ಬೆಳಗ್ಗೆ ಕರ್ಫ್ಯೂ ಮುಗಿದ ನಂತರವೇ ಹೆಜ್ಜೆ ಹಾಕುತ್ತಿದ್ದಾರೆ. ಮಾಮೂಲಿ ದರಕ್ಕಿಂತ ನಾಲ್ಕು ಪಟ್ಟು ಅಧಿಕ ದರದಲ್ಲಿ ಸುಮಾರು 23 ಕೆಜಿ ಮಾಂಸ ತಂದಿದ್ದಾರೆ.
ವೈದ್ಯ ಗಿರಿಕುಮಾರ್ ವೈದ್ಯಕೀಯ ಅಧ್ಯಯನಕ್ಕಾಗಿ 2007ರಲ್ಲಿ ಉಕ್ರೇನ್‌ಗೆ ಹೋದರು ಮತ್ತು ಸೆವೆರೊಡೊನೆಟ್ಸ್ಕ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಜೊತೆಗೆ 2014 ರಿಂದ ಆ ದೇಶದಲ್ಲಿ ಮೂಳೆಚಿಕಿತ್ಸೆಯನ್ನು ಪ್ರಾಕ್ಟಿಸ್ ಮಾಡುತ್ತಿದ್ದಾರೆ. ಅವರು ಸದಾ ಚಿರತೆಗಳಿಂದ ಆಕರ್ಷಿತರಾಗಿದ್ದರು ಇದಲ್ಲದೇ ಅವರ ಬಳಿ ಮೂರು ಇಟಾಲಿಯನ್ ನಾಯಿಗಳಿವೆ. ಯೂಟ್ಯೂಬ್ ಚಾನೆಲ್‌ವೊಂದನ್ನು ನಡೆಸುತ್ತಿರುವ ಅವರು ಸುಮಾರು 85,000 ಚಂದಾದಾರರನ್ನು ಹೊಂದಿದ್ದಾರೆ. ತನ್ನ YouTube ಚಾನಲ್ ಮೂಲಕ ತನ್ನ ಸಾಕುಪ್ರಾಣಿಗಳಿಗಾಗಿ ಹಣವನ್ನು ಸಂಗ್ರಹಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಈ ವೈದ್ಯರು ಕೆಲವು ತೆಲುಗು ಟಿವಿ ಸಿರೀಸ್ ಹಾಗೂ ಮತ್ತು ಉಕ್ರೇನಿಯನ್ ಚಲನಚಿತ್ರಗಳು (Ukrainian films) ಮತ್ತು ಸೀರಿಸ್‌ಗಳಲ್ಲಿ ಸಣ್ಣ ಪಾತ್ರಗಳನ್ನು ಕೂಡ ಮಾಡಿದ್ದಾರೆ ಎಂದ ತಿಳಿದು ಬಂದಿದೆ.
Russia Ukraine War: ಉಕ್ರೇನ್ ಪರ ಹೋರಾಟಕ್ಕಿಳಿದ 20 ಸಾವಿರ ವಿದೇಶಿ ಸ್ವಯಂ ಸೇವಕರು
ಡೊನ್ಬಾಸ್ ಪ್ರದೇಶದಲ್ಲಿ ( Donbas region)ಬಾಂಬ್ ದಾಳಿಗಳು ಮತ್ತು ರಷ್ಯಾದ ಪಡೆಗಳ ಆಕ್ರಮಣ ಹೆಚ್ಚುತ್ತಿರುವಾಗ, ಹೆಚ್ಚಿನ ಭಾರತೀಯರು ಹತ್ತಿರದ ಹಳ್ಳಿಗಳಿಗೆ ತೆರಳಿದ್ದಾರೆ. ಪಾಟೀಲ್ ಅವರ ಪೋಷಕರು ಕೂಡ ಅವರ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ ಮತ್ತು ಮನೆಗೆ ಮರಳುವಂತೆ ಕೇಳುತ್ತಿದ್ದಾರೆ. ಆದರೆ ವೈದ್ಯ ಗಿರಿಕುಮಾರ್ ಮಾತ್ರ ಅಲ್ಲಿನ ಪರಿಸ್ಥಿತಿಯಿಂದ ಸ್ವಲ್ಪ ಭಯಭೀತರಾಗಿದ್ದರೂ ಸಹ, ಅವರು ತಮ್ಮ ಸಾಕುಪ್ರಾಣಿಗಳನ್ನು ಅಲ್ಲಿ ಬಿಟ್ಟು ಬರಲು ಸಿದ್ಧರಿಲ್ಲ. ನನ್ನ ಪೋಷಕರು ಕರೆ ಮಾಡಿ ಮನೆಗೆ ಬರುವಂತೆ ಕೇಳುತ್ತಿದ್ದಾರೆ, ಆದರೆ ನಾನು ಪ್ರಾಣಿಗಳನ್ನು ಬಿಟ್ಟು ಬರಲು ಸಾಧ್ಯವಿಲ್ಲ ಎಂದು ಪಾಟೀಲ್ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.