ಲಂಡನ್(ಜ.14)‌: ಭಾರತ ಮತ್ತು ಬ್ರಿಟನ್‌ ದೇಶಗಳು ಪರಸ್ಪರ ವ್ಯಾಪಾರ, ರಾಜತಾಂತ್ರಿಕ ಸಂಬಂಧ ವೃದ್ಧಿಗೆ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಹೊತ್ತಿನಲ್ಲೇ, ಭಾರತದ ಬಗ್ಗೆ ಎಚ್ಚರದಿಂದಿರುವಂತೆ ಬ್ರಿಟನ್‌ನ ಚಿಂತಕರ ಚಾವಡಿಯೊಂದು ಪ್ರಧಾನಿ ಬೋರಿಸ್‌ ಜಾನ್ಸನ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ರಾಯಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಟರ್‌ನ್ಯಾಷನಲ್‌ ಅಫೇ​ರ್‍ಸ್ನ ಛಾಥಮ್‌ ಹೌಸ್‌ ಎಂಬ ಚಿಂತಕರ ಚಾವಡಿ ‘ಗ್ಲೋಬಲ್‌ ಬ್ರಿಟನ್‌, ಗ್ಲೋಬಲ್‌ ಬ್ರೋಕರ್‌’ ಎಂಬ ವರದಿಯೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ‘ಜನಸಂಖ್ಯೆಯಲ್ಲಿ ಶೀಘ್ರವೇ ವಿಶ್ವದ ನಂ.1 ಹಾದಿಯಲ್ಲಿರುವ, ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತಿರುವ, ರಕ್ಷಣಾ ಬಜೆಟ್‌ನಲ್ಲಿ ಮೊದಲಿಗನಾಗಿ ಹೊರಹೊಮ್ಮತ್ತಿರುವ ಭಾರತ, ಬ್ರಿಟನ್‌ ಪಾಲಿಗೆ ಅತ್ಯಂತ ಮಹತ್ವದ ದೇಶದ ಎಂಬುದನ್ನು ಒಪ್ಪಿಕೊಳ್ಳಲೇ ಇರಲಾಗದು. ಆದರೆ ಭಾರತದೊಂದಿಗಿನ ನೇರ ಸಂಬಂಧದಿಂದ ದೇಶಕ್ಕೆ ಆರ್ಥಿಕವಾಗಲೀ, ರಾಜತಾಂತ್ರಿಕವಾಗಲೀ ಬ್ರಿಟನ್‌ಗೆ ಲಾಭದ ಸಾಧ್ಯತೆ ಕಡಿಮೆ’ ಎಂದು ವರದಿ ಹೇಳಿದೆ. ಅಲ್ಲದೆ ಇಂಥದ್ದೇ ಹಿನ್ನೆಲೆ ಹೊಂದಿರುವ ಚೀನಾ, ಸೌದಿ ಅರೇಬಿಯಾ ಮತ್ತು ಟರ್ಕಿ ದೇಶಗಳ ಸಾಲಿಗೆ ಭಾರತವನ್ನೂ ಸೇರಿಸಲಾಗಿದೆ.

ಜಾನ್ಸನ್‌ ಸರ್ಕಾರ, ಭಾರತದೊಂದಿಗೆ ಹೆಚ್ಚಿನ ಆಳವಾದ ಸಂಬಂಧ ಹೊಂದುವ ಬಗ್ಗೆ ಹೆಚ್ಚು ವಾಸ್ತವಿಕವಾಗಿ ಚಿಂತಿಸಬೇಕು. ವಾಣಿಜ್ಯ ಉದ್ದೇಶದಲ್ಲಿ ಭಾರತ, ಬ್ರಿಟನ್‌ಗೆ ಮಹತ್ವದ್ದಿರಬಹುದು. ಆದರೆ ಆ ದೇಶ ನಮಗೆ ಪ್ರತಿಸ್ಪರ್ಧಿ ಕೂಡಾ ಹೌದು. ಹಲವು ಜಾಗತಿಕ ಗುರಿಗಳನ್ನು ಸಾಧಿಸುವ ಹಾದಿಯಲ್ಲಿ ಬ್ರಿಟನ್‌ ಪಾಲಿಗೆ ಭಾರತ ತೊಡಕಿನ ಪ್ರತಿಸ್ಪರ್ಧಿ ಕೂಡಾ ಹೌದು ಎಂದು ವರದಿ ಎಚ್ಚರಿಸಿದೆ.

ಭಾರತದ ಆಂತರಿಕ ರಾಜಕೀಯ ಅತ್ಯಂತ ಕ್ಲಿಷ್ಟವಾಗಿದ್ದು, ಮುಕ್ತ ಮಾರುಕಟ್ಟೆಮತ್ತು ವಿದೇಶಿ ಹೂಡಿಕೆಗೆ ತಡೆ ಒಡ್ಡುವ ಇತಿಹಾಸ ಹೊಂದಿದೆ. ಅಲ್ಲದೆ ಭಾರತದಲ್ಲಿ ಮಾನವ ಹಕ್ಕು ಮತ್ತು ನಾಗರಿಕ ಹಕ್ಕು ಸಂಘಟನೆಗಳ ದಮನ ನಡೆಯುತ್ತಿದೆ ಎಂದೆಲ್ಲಾ ವರದಿ ಹೇಳಿದೆ.