* ಡಬ್ಲ್ಯುಟಿಒ ಒಪ್ಪಿಗೆ ನೀಡಿದರೆ ಈಗಿನಿಂದಲೇ ಪೂರೈಕೆಗೆ ಸಿದ್ಧ: ಪ್ರಧಾನಿ- ಕೋವಿಡ್‌ ಸಮಯದಲ್ಲಿ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಣೆ* ಅನ್ನಪೂರ್ಣ ಧಾಮ ಹಾಸ್ಟೆಲ್‌, ಶಾಲಾ ಕಟ್ಟಡ ಉದ್ಘಾಟಿಸಿ ಭಾಷಣ

ಅಹಮದಾಬಾದ್‌(ಏ.13): ವಿಶ್ವ ವ್ಯಾಪಾರ ಸಂಸ್ಥೆ ಒಪ್ಪಿಗೆ ನೀಡಿದರೆ ಇಡೀ ವಿಶ್ವಕ್ಕೆ ಆಹಾರ ಪೂರೈಕೆ ಮಾಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ಗುಜರಾತ್‌ನ ಅದಾಲಾಜ್‌ನಲ್ಲಿರುವ ಅನ್ನಪೂರ್ಣ ಧಾಮದ ಬಾಲಕರ ವಿದ್ಯಾರ್ಥಿನಿಲಯ ಮತ್ತು ಶೈಕ್ಷಣಿಕ ಕಾಂಪ್ಲೆಕ್ಸ್‌ ಉದ್ಘಾಟನೆ ಮಾಡಿ ಮಾತನಾಡಿದ ಅವರು, ‘ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಭಾರತ ಸುಮಾರು 80 ಕೋಟಿ ಜನರಿಗೆ 2 ವರ್ಷಗಳ ಕಾಲ ಉಚಿತವಾಗಿ ಆಹಾರ ಧಾನ್ಯ ಪೂರೈಕೆ ಮಾಡಿದೆ. ಇದನ್ನು ನೋಡಿ ಇಡೀ ಜಗತ್ತು ಬೆರಗಾಗಿದೆ. ಈಗ ಉಕ್ರೇನ್‌-ರಷ್ಯಾ ಯುದ್ಧ ನಡೆಯುತ್ತಿರುವುದರಿಂದ ಜಗತ್ತು ಆಹಾರದ ಅಭಾವವನ್ನು ಎದುರಿಸುತ್ತಿದೆ. ಹಾಗಾಗಿ ವಿಶ್ವ ವ್ಯಾಪಾರ ಸಂಸ್ಥೆ ಒಪ್ಪಿಕೊಂಡರೆ ಇಡೀ ವಿಶ್ವಕ್ಕೆ ಆಹಾರ ಪೂರೈಕೆ ಮಾಡಲು ಭಾರತ ಸಿದ್ಧವಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರ ಜೊತೆಗಿನ ಮಾತುಕತೆಯ ವೇಳೆ ತಿಳಿಸಿದ್ದೇನೆ’ ಹೇಳಿದರು.

‘ಜಗತ್ತು ಈಗ ಅನಿಶ್ಚಿತ ಸಮಸ್ಯೆಗಳನ್ನು ಎದುರಿಸುತ್ತಿದೆ. ಆಹಾರದ ದಾಸ್ತಾನು ಕರಗುತ್ತಿದೆ. ನಾವು ನಮ್ಮ ಜನರಿಗೆ ಬೇಕಾದ ಆಹಾರವನ್ನು ದಾಸ್ತಾನು ಮಾಡಿಕೊಂಡಿದ್ದೇವೆ. ಇಡೀ ವಿಶ್ವಕ್ಕೆ ಆಹಾರ ಪೂರೈಸಲು ನಮ್ಮ ರೈತರು ಸಿದ್ಧವಾಗಿದ್ದಾರೆ. ಈಗಿನಿಂದಲೇ ಆಹಾರ ಪೂರೈಕೆಗೆ ನಾವು ಸಿದ್ಧ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಯಾವಾಗ ಒಪ್ಪಿಗೆ ನೀಡುತ್ತದೆ ಎಂಬುದು ತಿಳಿದಿಲ್ಲ’ ಎಂದು ಅವರು ಹೇಳಿದರು.