ಭಾರತ ಮೊದಲು ನೀತಿ: ಚೀನಾಕ್ಕೆ ಲಂಕಾ ಶಾಕ್| ಪುಟ್ಟರಾಷ್ಟ್ರಗಳ ಮೇಲೆ ಸ್ವಾಮ್ಯ ಸಾಧಿಸುವ ಚೀನಾ ಹುನ್ನಾರ ತಲೆಕೆಳಗು
ಕೊಲಂಬೋ(ಆ.27): ತೀರಾ ಇತ್ತೀಚಿನವರೆಗೂ ಭಾರತದ ವಿರುದ್ಧ ಕತ್ತಿ ಮಸೆಯುವ ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ನೆರೆಯ ಶ್ರೀಲಂಕಾ ಇದೀಗ ‘ಭಾರತಕ್ಕೆ ಮೊದಲ ಪ್ರಾಶಸ್ತ್ಯ’ ಎಂಬ ನೂತನ ನೀತಿ ಅಳವಡಿಸಿಕೊಳ್ಳಲು ಮುಂದಾಗಿದೆ. ಭಾರತದ ಭದ್ರತಾ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಈ ಹೊಸ ವಿದೇಶಿ ನೀತಿ ಪಾಲನೆಗೆ ಮುಂದಾಗಿರುವುದಾಗಿ ಶ್ರೀಲಂಕಾದ ವಿದೇಶಾಂಗ ಸಚಿವಾಲದಯ ಕಾರ್ಯದರ್ಶಿ ಜಯನಾಥ್ ಕೊಲಂಬೇಜ್ ಹೇಳಿದ್ದಾರೆ. ಲಂಕಾದ ಈ ನಿರ್ಧಾರವು ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಆ ರಾಷ್ಟ್ರಗಳ ಮೇಲೆ ನಿಯಂತ್ರಣಕ್ಕೆ ಯತ್ನಿಸುತ್ತಿದ್ದ ಹಾಗೂ ಆ ರಾಷ್ಟ್ರಗಳ ಮನಸ್ಥಿತಿಯಲ್ಲಿ ಭಾರತ ವಿರೋಧಿ ಧೋರಣೆ ಭಿತ್ತುತ್ತಿದ್ದ ಚೀನಾದ ಕುತಂತ್ರಕ್ಕೆ ಅಂಕುಶ ಬಿದ್ದಂತಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಆಗಸ್ಟ್ 14ರಂದು ಲಂಕಾದ ಅಧ್ಯಕ್ಷ ಗೋಟಬಾಯ ರಾಜಪಕ್ಸ ಅವರಿಂದ ವಿದೇಶಾಂಗ ಇಲಾಖೆ ವಹಿಸಿಕೊಂಡಿರುವ ಕೊಲಂಬೇಜ್ ಅವರು, ‘ಭಾರತಕ್ಕೆ ಮೊದಲ ಪ್ರಾಶಸ್ತ್ಯ ಎಂಬ ವಿದೇಶಿ ನೀತಿಯನ್ನು ಅಳವಡಿಸಿಕೊಳ್ಳುವ ಮೂಲಕ ಭಾರತದ ಭದ್ರತೆ ಸೇರಿದಂತೆ ಇನ್ನಿತರ ವ್ಯೂಹಾತ್ಮಕ ಹಿತಾಸಕ್ತಿಗೆ ವಿರುದ್ಧವಿರುವ ಯಾವುದೇ ನಿರ್ಣಯಗಳನ್ನು ಕೈಗೊಳ್ಳಲ್ಲ. ಅಲ್ಲದೆ, ಇನ್ನು ಮುಂದಿನ ದಿನಗಳಲ್ಲಿ ಮುಖ್ಯವಾಗಿ ಭಾರತ ಸೇರಿದಂತೆ ಯಾವುದೇ ರಾಷ್ಟ್ರಗಳಿಗೆ ತನ್ನ ನೆಲದ ಮೂಲಕ ಕೇಡು ಬಯಸುವುದನ್ನು ಲಂಕಾ ಸಹಿಸಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.
ಇನ್ನು ವ್ಯೂಹಾತ್ಮಕವಾಗಿ ಮಹತ್ವದ್ದೆನಿಸಿರುವ ಹಂಬನ್‌ತೋಟಾ ಬಂದರು ಪ್ರದೇಶದ ಅಭಿವೃದ್ಧಿಯಲ್ಲಿ ಚೀನಾ ಹೂಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೊಲಂಬೇಜ್, ಹಂಬನ್‌ತೋಟಾ ಅಭಿವೃದ್ಧಿಗೆ ಮೊದಲಿಗೆ ಭಾರತಕ್ಕೆ ಆಹ್ವಾನಿಸಲಾಗಿತ್ತು. ಆದರೆ, ಯಾವುದೋ ಕಾರಣಕ್ಕೆ ಭಾರತ ಮುಂದೆ ಬಾರದ ಹಿನ್ನೆಲೆಯಲ್ಲಿ ಅದು ಚೀನಾ ಪಾಲಾಯಿತು. ಅಲ್ಲದೆ, ಹಂಬನ್‌ತೋಟಾದಲ್ಲಿ ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತ್ರವೇ ಚೀನಾ ಬಳಕೆಗೆ ಅವಕಾಶ ಕಲ್ಪಿಸಲಾಗಿದೆಯೇ ಹೊರತು ಮಿಲಿಟರಿ ಬಳಕೆಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
