'ಗಾಜಾ ಪಟ್ಟಿ ಯುದ್ಧೋನ್ಮಾದ ನಿಲ್ಲಿಸಿ' ವಿಶ್ವಸಂಸ್ಥೆಯಲ್ಲಿ ಭಾರತದ ಮಾತು
* ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ನಡುವಿನ ಘರ್ಷಣೆ
* ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿಯೂ ವಿಚಾರ ಚರ್ಚೆ
* ಯುದ್ಧದ ಉಲ್ಬಣ ವಾತಾವರಣ ನಿಲ್ಲಿಸಿ ಎಂದ ಭಾರತ
* ಎರಡೂ ಕಡೆಯಿಂದಲ್ಲೂ ಪ್ರತಿರೋಧ ವ್ಯಕ್ತವಾಗುತ್ತಲೆ ಇದೆ
ನವದೆಹಲಿ(ಮೇ 17) ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ನಡುವಿನ ಘರ್ಷಣೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ (ಮೇ 16 ) ಚರ್ಚೆಯಾಗಿದೆ. ಈ ಯುದ್ಧದ ವಾತಾವರಣವನ್ನು ತಕ್ಷಣ ನಿಲ್ಲಿಸಬೇಕು, ವಾತಾವರಣ ಉಲ್ಬಣಗೊಳ್ಳುತ್ತಿರುವುದನ್ನು ತಡೆಯಬೇಕು ಎಂದು ಭಾರತ ಹೇಳಿದೆ.
ಭಾರತದ ಖಾಯಂ ಪ್ರತಿನಿಧಿ ಮತ್ತು ಯುಎನ್ ರಾಯಭಾರಿ ಟಿ.ಎಸ್.ತಿರುಮೂರ್ತಿ ಮಾತನಾಡಿ, ಎರಡೂ ಕಡೆಯಿಂದಲೂ ತೀವ್ರ ಹೋರಾಟ ಕಂಡುಬರುತ್ತಿದೆ. ಜೆರುಸೆಲೆಮ್ ಭಾಗದಲ್ಲಿನ ಪರಿಸ್ಥಿತಿ ಆರೋಗ್ಯಕರವಾಗಿಲ್ಲ ಎಂದು ಹೇಳಿದ್ದಾರೆ.
ಯುಎಸ್ ಕೌನ್ಸಿಲ್ ಸದಸ್ಯರು ಈ ಮಾತನ್ನು ಬೆಂಬಲಿಸಿದ್ದಾರೆ. ಭದ್ರತಾ ಮಂಡಳಿಯು ಮೇ 7 ರಂದೇ ಈ ಸನ್ನಿವೇಶದ ಬಗ್ಗೆ ಮೊದಲ ಹಂತದಲ್ಲಿ ಮಾತುಕತೆ ನಡೆಸಿತ್ತು. ಆದರೆ ಕೆಲವೇ ದಿನದಲ್ಲಿ ಇಸ್ರೇಲ್ ತನ್ನ ಮಿತ್ರ ರಾಷ್ಟ್ರ ಯುಎಸ್‌ನ ಮಾತನ್ನು ಕೇಳಲು ಹಿಂದೇಟು ಹಾಕಿದ್ದು ಭದ್ರತಾ ಮಂಡಳಿ ಸಭೆಯ ಪ್ರಸ್ತಾಪ ತಿರಸ್ಕರಿಸಿದೆ. ಎರಡು ರಾಷ್ಟ್ರಗಳ ನಡುವೆ ಗಾಜಾ ಪಟ್ಟಿಯಲ್ಲಿ ಹೋರಾಟ ನಡೆಯುತ್ತಲೇ ಇದೆ. ವೈಮಾನಿಕ ದಾಳಿ ಸಾಮಾನ್ಯ ಎಂಬ ಪರಿಸ್ಥಿತಿ ನಿರ್ಮಾಣ ಆಗಿಹೋಗಿದೆ.
ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ ಇಸ್ರೇಲ್
ಇಷ್ಟುದಿನ ಹಮಾಸ್ ಉಗ್ರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸುತ್ತಿತ್ತು. ಶನಿವಾರ ಹಲವು ಪತ್ರಿಕಾ ಸಂಸ್ಥೆಗಳಿರುವ ದೊಡ್ಡ ಕಟ್ಟಡದ ನಿವಾಸಿಗಳಿಗೆ ಮುನ್ನೆಚ್ಚರಿಕೆ ಕೊಟ್ಟು ಬಳಿಕ ಧ್ವಂಸಗೊಳಿಸಿತು. ಆದರೆ, ಇದರ ಹೊರತಾಗಿಯೂ ಹಮಾಸ್ ಉಗ್ರರು ರಾಕೆಟ್ ದಾಳಿ ಮುಂದುರಿಸಿರುವ ಹಿನ್ನೆಲೆಯಲ್ಲಿ ಪ್ಯಾಲೆಸ್ಟೇನ್ ವಿರುದ್ಧ ಇಸ್ರೇಲ್ ಇನ್ನಷ್ಟುಕಠಿಣ ನಿಲುವು ತಳೆದಿದೆ.
ಇದುವರೆಗಿನ ದಾಳಿಯಲ್ಲಿ ಗಾಜಾದಲ್ಲಿ 181 ಮಂದಿ ಮೃತಪಟ್ಟಿದ್ದರೆ, ಇಸ್ರೇಲ್‌ನಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಹಮಾಸ್ ಅಂತಾರಾಷ್ಟ್ರೀಯ ಮಧ್ಯವರ್ತಿಗಳನ್ನು ಬಳಸಿಕೊಂಡು ಕದನ ವಿರಾಮಕ್ಕೆ ಯತ್ನಿಸುತ್ತಿದೆ. ಆದರೆ, ಇದಕ್ಕೆ ಇಸ್ರೇಲ್ ನಿರಾಕರಿಸಿದ್ದು, ಎಲ್ಲಿಯವರೆಗೂ ಅಗತ್ಯವಿದೆಯೋ ಅಲ್ಲಿಯವರೆಗೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.