* ಸಂಸ್ಥಾಪಕ ಜಾಕ್‌ ಡೋರ್ಸಿ ಬಲವಂತದ ಪದತ್ಯಾಗ* ಟ್ವಿಟರ್‌ಗೆ ಭಾರತೀಯ ಮೂಲದ ಪರಾಗ್‌ ಮುಖ್ಯಸ್ಥ, ಬದಲಾವಣೆ

ವಾಚಿಂಗ್ಟನ್(ನ.30): ಅಮೆರಿಕ ಮೂಲದ ಚುಟುಕು ಸಾಮಾಜಿಕ ಜಾಲತಾಣ ಟ್ವೀಟರ್‌ನ ನೂತನ ಸಿಇಒ (India-born Parag Agrawal) ಆಗಿ ಭಾರತೀಯ ಮೂಲದ ಪರಾಗ್‌ ಅಗರ್‌ವಾಲ್‌ ಆಯ್ಕೆಯಾಗಿದ್ದಾರೆ. ಟ್ವಿಟರ್‌ನ ಸಂಸ್ಥಾಪಕ ಮತ್ತು ಹಾಲಿ ಸಿಇಒ ಜಾಕ್‌ ಡೋರ್ಸ(Twitter CEO Parag Agarwal) ಪದತ್ಯಾಗದ ಹಿನ್ನೆಲೆಯಲ್ಲಿ ಪರಾಗ್‌ ಅವರನ್ನು ಹೊಸ ಹುದ್ದೆಗೆ ನೇಮಿಸಲಾಗಿದೆ. ಹಾಲಿ ಟ್ವಿಟರ್‌ನ ಸಿಟಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಪರಾಗ್‌, ಸೋಮವಾರದಿಂದಲೇ ಜಾರಿಗೆ ಬರುವಂತೆ ಹೊಸ ಹುದ್ದೆ ವಹಿಸಿಕೊಳ್ಳಲಿದ್ದಾರೆ. ಹೊಸ ಹೊಣೆಯ ಕುರಿತು ಪ್ರತಿಕ್ರಿಯಿಸಿರುವ ಪರಾಗ್‌, ‘ಇದು ನನಗೆ ಸಿಕ್ಕ ಗೌರವ, ಇದನ್ನ ನಾವು ವಿನಮ್ರನಾಗಿ ಸ್ವೀಕರಿಸುತ್ತೇನೆ. ಇದಕ್ಕಾಗಿ ಡೋರ್ಸಿಗೆ (Jack Dorsey) ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ. 2006ರಲ್ಲಿ ಆರಂಭವಾದ ಟ್ವಿಟರ್‌ 33 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದ್ದು ವಾರ್ಷಿಕ 28000 ಕೋಟಿ ರು. ಆದಾಯ ಹೊಂದಿದೆ.

ಡೋರ್ಸಿಗೆ ಗೇಟ್‌ಪಾಸ್‌?

ಟ್ವಿಟರ್‌ನ ಸಂಸ್ಥಾಪಕ, ಸಿಇಒ ಜಾಕ್‌ ಡೋರ್ಸಿ ಅವರನ್ನು ಹುದ್ದೆಯಿಂದ ಬಲವಂತವಾಗಿ ಕಿತ್ತುಹಾಕಲಾಗಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಡೋರ್ಸಿ, ಟ್ವಿಟರ್‌ (Twitter) ವಿಷಯದಲ್ಲಿ ಹೆಚ್ಚಿನ ಗಮನ ವಹಿಸುತ್ತಿದ್ದ ಎಂದು ಸಂಸ್ಥೆಯಲ್ಲಿನ ದೊಡ್ಡ ಹೂಡಿಕೆದಾರ ಸಂಸ್ಥೆಯಾದ ಎಲಿಯೋಟ್‌ ಮ್ಯಾನೇಜ್‌ಮೆಂಟ್‌ ಕಾಪ್‌ರ್‍ ಆರೋಪ ಮಾಡಿತ್ತು. ಅದೇ ಕಾರಣಕ್ಕಾಗಿ ಅವರನ್ನು ಇದೀಗ ಸಿಇಒ ಹುದ್ದೆಯಿಂದ ತೆಗೆದುಹಾಕಲಾಗಿದೆ ಎನ್ನಲಾಗಿದೆ. ಹುದ್ದೆಯಿಂದ ಕೆಳಗಿಳಿಯುತ್ತಿರುವ ಬಗ್ಗೆ ಸೋಮವಾರ ಪ್ರತಿಕ್ರಿಯೆ ನೀಡಿರುವ ಡೋರ್ಸಿ, 16 ವರ್ಷಗಳಿಂದ ಹುದ್ದೆ ನಿರ್ವಹಿಸಿದ ಬಳಿಕ ಇದೀಗ ಬೇರೆಯವರಿಗೆ ಹುದ್ದೆ ವರ್ಗಾಯಿಸುತ್ತಿದ್ದೇನೆ. ಸಂಸ್ಥಾಪಕರೇ ಕಂಪನಿಯನ್ನು ಮುನ್ನಡೆಸುವ ಮಹತ್ವದ ಬಗ್ಗೆ ಹಲವು ಚರ್ಚೆಗಳು ನಡೆದಿದ್ದವು. ಹೀಗಾಗಿ ಇದು ನಾನು ಹುದ್ದೆಯನ್ನು ತ್ಯಜಿಸುವ ಸಮಯ ಎಂಬ ನಿರ್ಧಾರಕ್ಕೆ ಬಂದೆ’ ಎಂದು ಹೇಳಿದ್ದಾರೆ.

ಯಾರು ಈ ಪರಾಗ್‌?

ಭಾರತದಲ್ಲಿ ಜನಿಸಿದ ಪರಾಗ್‌ ಅಗರವಾಲ್‌ ತಮ್ಮ ಆರಂಭಿಕ ಶಿಕ್ಷಣವನ್ನು ಭಾರತದಲ್ಲಿಯೇ ಮುಗಿಸಿದ್ದಾರೆ. ಬಾಂಬೆಯ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿ ಪಡೆದಿರುವ ಇವರು ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಪಿಎಚ್‌ಡಿ ಮಾಡುತ್ತಿದ್ದ ಸಮಯದಲ್ಲಿ ಮೈಕ್ರೋಸಾಫ್ಟ್‌, ಎಟಿಟಿ, ಯಾಹೂ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಪಡೆದಿದ್ದಾರೆ. 2011ರಲ್ಲಿ ಆ್ಯಡ್‌ ಇಂಜಿನಿಯರ್‌ ಆಗಿ ಟ್ವೀಟರ್‌ ಸೇರಿದ ಇವರು ನಂತರದ ವರ್ಷಗಳಲ್ಲಿ ಪ್ರೋಗ್ರಾಮ್‌ ಇಂಜಿನಿಯರ್‌ ಆಗಿ ಪದೋನ್ನತಿ ಪಡೆದಿದ್ದರು. 2018ರಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು. 2019ರಲ್ಲಿ ಟ್ವೀಟರ್‌ ಆರಂಭಿಸಿದ ಪ್ರಾಜೆಕ್ಟ್ ಬ್ಲೂ ಸ್ಕೈನ ಮುಖ್ಯಸ್ಥರಾಗಿಯೂ ಪರಾಗ್‌ ಸೇವೆ ಸಲ್ಲಿಸಿದ್ದಾರೆ.

ಜಾಗತಿಕ ಕಂಪನಿಗಳಿಗೆ ಭಾರತೀಯ ಸಿಇಒಗಳು

* ಸತ್ಯ ನಾದೆಳ್ಲಾ ಮೈಕ್ರೋಸಾಫ್ಟ್‌

* ಸುಂದರ್‌ ಪಿಚೈ ಗೂಗಲ್‌

* ಇಂದಿರಾ ನೂಯಿ ಪೆಪ್ಸಿಕೋ

* ಸಂಜಯ್‌ ಝಾ ಗ್ಲೋಬಲ್‌ ಫೌಂಡರೀಸ್‌

* ಅಜಯ್‌ಪಾಲ್‌ ಸಿಂಗ್‌ ಬಂಗ ಮಾಸ್ಟರ್‌ ಕಾರ್ಡ್‌

* ರಾಜೀವ್‌ ಸೂರಿ ನೋಕಿಯಾ

* ಶಂತನು ನಾರಾಯಣ್‌ ಅಡೋಬ್‌