ನವದೆಹಲಿ[ನ.30]: 3 ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಶ್ರೀಲಂಕಾದ ನೂತನ ಅಧ್ಯಕ್ಷ ಗೊಟಬಯ ರಾಜಪಕ್ಸ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಮಾತುಕತೆ ಫಲಪ್ರದವಾದ ಬೆನ್ನಲ್ಲೇ, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕಾಗಿ 50 ಮಿಲಿಯನ್‌ ಡಾಲರ್‌(300 ಕೋಟಿ ರು.) ಸೇರಿದಂತೆ ಶ್ರೀಲಂಕಾದ ಒಟ್ಟಾರೆ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾಕ್ಕೆ 450 ಮಿಲಿಯನ್‌ ಡಾಲರ್‌(3230 ಕೋಟಿ ರು.) ಆರ್ಥಿಕ ನೆರವನ್ನು ಘೋಷಣೆ ಮಾಡಿದ್ದಾರೆ.

ಶ್ರೀಲಂಕಾ ಅಧ್ಯಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಶುಕ್ರವಾರದ ಸಭೆ ವೇಳೆ ಶ್ರೀಲಂಕಾದಲ್ಲಿರುವ ತಮಿಳು ಸಮುದಾಯದ ಆಕಾಂಕ್ಷೆಗಳ ಈಡೇರಿಕೆ, ಉಭಯ ರಾಷ್ಟ್ರಗಳ ಭದ್ರತೆ ಮತ್ತು ವ್ಯಾಪಾರ ವಹಿವಾಟು ವೃದ್ಧಿ ಹಾಗೂ ಮೀನುಗಾರರ ಬಗ್ಗೆಯೂ ಪ್ರಧಾನವಾಗಿ ಚರ್ಚೆಯಾಗಿದೆ.

ಸಭೆ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಭಯೋತ್ಪಾದನೆ ವಿರುದ್ಧದ ಹೋರಾಟಕ್ಕಾಗಿ ಉಭಯ ರಾಷ್ಟ್ರಗಳ ಸಹಕಾರ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಚರ್ಚಿಸಿದ್ದೇವೆ’ ಎಂದು ಹೇಳಿದರು. ಏತನ್ಮಧ್ಯೆ, ಭಾರತದ ಪ್ರವಾಸದ ಕುರಿತು ಪ್ರತಿಕ್ರಿಯಿಸಿದ ಲಂಕಾದ ನೂತನ ಅಧ್ಯಕ್ಷ ಗೊಟಬಾಯ, ‘ದೇಶದ ಆರ್ಥಿಕ ಬೆಳವಣಿಗೆ ಕುರಿತಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತನಾಡಿದ್ದೇನೆ. ಅಲ್ಲದೆ, ನನ್ನ ಆಡಳಿತಾವಧಿಯಲ್ಲಿ ಐತಿಹಾಸಿಕವಾಗಿ ದೀರ್ಘಾಕಾಲೀನ ಬಾಂಧವ್ಯದ ಹೊಂದಿದ ಭಾರತ-ಶ್ರೀಲಂಕಾದ ಸಂಬಂಧವನ್ನು ಅತೀ ಎತ್ತರದ ಸ್ತರಕ್ಕೆ ಕೊಂಡೊಯ್ಯಬೇಕು ಎಂಬ ಆಕಾಂಕ್ಷೆ ಹೊಂದಿದ್ದೇನೆ’ ಎಂದು ಹೇಳಿದ್ದಾರೆ.