ವಾಷಿಂಗ್ಟನ್‌[ಫೆ.22]: ಸೋಮವಾರದಿಂದ ಎರಡು ದಿನ ಭಾರತ ಪ್ರವಾಸ ಕೈಗೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ತಮ್ಮ ಭೇಟಿ ಸನ್ನಿಹಿತವಾಗಿರುವಾಗ ಭಾರತದ ವಿರುದ್ಧವೇ ಕಿಡಿಕಾರಿದ್ದಾರೆ. ದುಬಾರಿ ತೆರಿಗೆ ದರಗಳ ಮೂಲಕ ನಮ್ಮ ವ್ಯಾಪಾರಕ್ಕೆ ಭಾರತ ತುಂಬಾ ವರ್ಷಗಳಿಂದ ಹೊಡೆತ ನೀಡಿಕೊಂಡು ಬಂದಿದೆ. ಭಾರತದ ತೆರಿಗೆ ದರಗಳು ವಿಶ್ವದಲ್ಲೇ ದುಬಾರಿಯಾಗಿವೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ನನಗಿಷ್ಟ. ಅವರ ಜತೆಗಿನ ಮಾತುಕತೆ ವೇಳೆ ಅಮೆರಿಕ ಉತ್ಪನ್ನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತೇನೆ ಎಂದು ಕೊಲರಾಡೋದಲ್ಲಿ ನಡೆದ ‘ಕೀಪ್‌ ಅಮೆರಿಕ ಗ್ರೇಟ್‌’ ರಾರ‍ಯಲಿಯಲ್ಲಿ ಹೇಳಿದ್ದಾರೆ.

ಇದೇ ವೇಳೆ ಲಾಸ್‌ ವೇಗಸ್‌ನಲ್ಲಿ ಮಾತನಾಡಿದ ಅವರು, ‘ನಾವು ಭಾರತಕ್ಕೆ ಹೋಗುತ್ತಿದ್ದೇವೆ. ಪ್ರಚಂಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ’ ಎಂದು ಹೇಳಿದ್ದಾರೆ. ಜತೆಗೆ ಉತ್ತಮ ಒಪ್ಪಂದ ಅದಾಗದಿದ್ದರೆ ಆ ವಿಚಾರದಲ್ಲಿ ಮಂದಗತಿ ಅನುಸರಿಸುತ್ತೇವೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿದ ಬಳಿಕ ಆ ಬಗ್ಗೆ ಗಮನಹರಿಸುತ್ತೇವೆ. ಅಮೆರಿಕವೇ ಮೊದಲು ಎಂಬ ನೀತಿ ನಮ್ಮದು. ಅದಕ್ಕೆ ಬದ್ಧವಾಗಿದ್ದರೆ ಮಾತ್ರ ಒಪ್ಪಂದ. ಜನರು ಒಪ್ಪಲಿ, ಬಿಡಲಿ ನಾವು ಅಮೆರಿಕದ ಒಳಿತೇ ಮೊದಲಾಗಿರುತ್ತದೆ ಎಂದು ಅವರು ಸೂಚ್ಯವಾಗಿ ಹೇಳಿದ್ದಾರೆ.

ತಮ್ಮ ಪತ್ನಿ ಮೆಲಾನಿಯಾ ಅವರ ಜತೆ ಟ್ರಂಪ್‌ ಅವರು ಫೆ.24, 25ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಮೊದಲು ಅಹಮದಾಬಾದ್‌ಗೆ ತೆರಳಲಿರುವ ಅವರು, ನಂತರ ಆಗ್ರಾದ ವಿಶ್ವವಿಖ್ಯಾತ ಪ್ರೇಮಸೌಧ ತಾಜ್‌ಮಹಲ್‌ ವೀಕ್ಷಿಸಲಿದ್ದಾರೆ. ಬಳಿಕ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.