Pakistan Missile ಗುರಿ ತಲುಪಲು ವಿಫಲವಾದ ಪಾಕಿಸ್ತಾನದ ಮಿಸೈಲ್, ನೋ ಕಾಮೆಂಟ್ಸ್ ಎಂದ ಪಾಕ್ ರಕ್ಷಣಾ ಇಲಾಖೆ!
ಜಮ್ಶೋರೊ ಪಾಕಿಸ್ತಾನದಿಂದ ಪರೀಕ್ಷಾರ್ಥ ಕ್ಷಿಪಣಿ ಪ್ರಯೋಗ
ಗುರಿ ತಲುಪಲು ವಿಫಲವಾದ ಕ್ಷಿಪಣಿ
ಸಿಂಧ್ ಪ್ರಾಂತ್ಯದಲ್ಲಿ ಬಿದ್ದ ಪಾಕಿಸ್ತಾನದ ಕ್ಷಿಪಣಿ
ನವದೆಹಲಿ (ಮಾ. 18): ಕೆಲ ದಿನಗಳ ಹಿಂದೆ ಭಾರತ (India) ಆಕಸ್ಮಿಕವಾಗಿ ಬ್ರಹ್ಮೋಸ್ (Bramhos) ಕ್ಷಿಪಣಿಯೊಂದನ್ನು(Missile) ಪಾಕಿಸ್ತಾನದ (Pakistan ) ಪ್ರದೇಶಕ್ಕೆ ಉಡಾವಣೆ ಮಾಡಿತ್ತು. ಸಿಡಿತಲೆ (Warhead) ಹೊಂದಿರದ ಕ್ಷಿಪಣಿ ಆಗಿದ್ದರೂ ಪಾಕಿಸ್ತಾನ ಪ್ರದೇಶದ 125 ಕಿಲೋಮೀಟರ್ ದೂರಕ್ಕೆ ಹೋಗಿ ಬಿದ್ದ ಕ್ಷಿಪಣಿಯ ಕುರಿತಾಗಿ ಭಾರತ ವಿಷಾದ ವ್ಯಕ್ತಪಡಿಸಿ ಈ ಕುರಿತು ತನಿಖೆಯನ್ನೂ ನಡೆಸಿತ್ತು. ಇದಾದ ಕೆಲ ದಿನಗಳ ಬಳಿಕ ಪಾಕಿಸ್ತಾನದ ಸೇನೆ (Pakistan Army), ಶುಕ್ರವಾರ ಜಮ್ಶೋರೊ (Jamshoro ) ಪ್ರಾಂತ್ಯದಿಂದ ಪರೀಕ್ಷಾರ್ಥ ಕ್ಷಿಪಣಿಯೊಂದನ್ನು ಉಡಾವಣೆ ಮಾಡಿದ್ದು, ಇದು ಗುರಿ ತಲುಪಲು ವಿಫಲವಾಗಿದೆ. ಪಾಕಿಸ್ತಾನದ ಸಿಂಧ್ (Sindh)ಪ್ರಾಂತ್ಯದಲ್ಲಿಯೇ ಇದು ಉರುಳಿಬಿದ್ದಿದೆ ಎಂದು ಸ್ಥಳೀಯರು ವರದಿ ಮಾಡಿದ್ದಾರೆ.
ಈವರೆಗೂ ಕಂಡಿಲ್ಲದ ಹಾರುವ ವಸ್ತುವೊಂದು ಆಕಾಶದಿಂದ ಬೀಳುತ್ತಿರುವುದು ಕಂಡುಬಂದಿದ್ದನ್ನು ಸ್ಥಳೀಯ ನಾಗರೀಕರು ವಿಡಿಯೋ ಮಾಡಿ ಟ್ವೀಟ್ ಮಾಡಿದ್ದಾರೆ. ಇದನ್ನು ಪರಿಶೀಲಿಸಿರುವ ರಕ್ಷಣಾ ಸಂಶೋಧಕರು ಇದು ಕ್ಷಿಪಣಿಯಾಗಿದ್ದು, ಪರೀಕ್ಷಾ ಪ್ರಯತ್ನ ವಿಫಲವಾಗಿದೆ ಎಂದು ಊಹೆ ಮಾಡಿದ್ದಾರೆ. ಭಾರತ ಕೆಲ ದಿನಗಳ ಹಿಂದೆ ಉಡಾವಣೆ ಮಾಡಿದ್ದ ಕ್ಷಿಪಣಿಗೆ ಉತ್ತರವಾಗಿ ಪಾಕಿಸ್ತಾನ ಈ ಕ್ಷಿಪಣಿಯನ್ನು ಉಡಾಯಿಸಿತ್ತು ಎಂದು ಹೇಳಲಾಗಿದೆ. ಆದರೆ, ಪಾಕಿಸ್ತಾನದ ರಕ್ಷಣಾ ಇಲಾಖೆ ಇದರ ಬಗ್ಗೆ ಯಾವುದೇ ಕಾಮೆಂಟ್ ನೀಡಲು ನಿರಾಕರಿಸಿದೆ.
ಪಾಕಿಸ್ತಾನದ ಸಿಂಧ್ ರಾಜ್ಯದ ಜಮ್‌ಶೋರೊದ ಅಲಿಯಾಬಾದ್‌ನಲ್ಲಿ ವಾಸಿಸುತ್ತಿದ್ದ ಜನರು ಆಕಾಶದಿಂದ ಹಾರುತ್ತಿರುವ ಅಪರಿಚಿತ ವಸ್ತುವನ್ನು ಕಂಡು ಭಯಭೀತರಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣವೇ ಅದೇ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತು. ಬಿಳಿ ಹೊಗೆಯ ಬಾಲವನ್ನು ಹೊಂದಿರುವ ವಸ್ತುವು ಆಕಾಶದಲ್ಲಿ ಹಾರುವುದನ್ನು ತೋರಿಸುತ್ತದೆ ಮತ್ತು ನಂತರ ನೇರವಾಗಿ ನೆಲಕ್ಕೆ ಬೀಳುತ್ತದೆ. ಅಪರಿಚಿತ ವಸ್ತುವೊಂದು ಆಕಾಶದಿಂದ ಬಿದ್ದಿದೆ ಎಂದು ಪಾಕಿಸ್ತಾನಿ ಸುದ್ದಿ ವಾಹಿನಿ ಎಆರ್ ಐ ನ್ಯೂಸ್ ವರದಿ ಮಾಡಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಯಾವುದೇ ಸ್ಫೋಟದ ಸದ್ದು ಕೇಳಿಬಂದಿಲ್ಲ ಎಂದು ತಿಳಿಸಿದ್ದಾರೆ.
ಭಾರತ ಅಚಾನಕ್ ಆಗಿ ಉಡಾಯಿಸಿದ್ದ ಕ್ಷಿಪಣಿಗೆ ಪ್ರತಿಯಾಗಿ ಪಾಕಿಸ್ತಾನವು ಕ್ಷಿಪಣಿ ಪರೀಕ್ಷೆಯನ್ನು ನಡೆಸಿರಬಹುದು ಎಂದು ಊಹಿಸಲಾಗಿದೆ. ಪಾಕಿಸ್ತಾನಿ ಸುದ್ದಿ ಸಂಸ್ಥೆ ಕಾನ್ಫ್ಲಿಕ್ಟ್ ನ್ಯೂಸ್ ಪಾಕಿಸ್ತಾನವು ಇದು ಅಂತಹ ಪರೀಕ್ಷಾ ಪ್ರಯೋಗವಾಗಿರುವ ಸಾಧ್ಯತೆ ಹೆಚ್ಚಿದ್ದು, ಆದರೆ ಇದು ವಿಫಲವಾಗಿದೆ ಎಂದು ಟ್ವೀಟ್ ಮಾಡಿದೆ. “ಜಮ್ಶೋರೋ, ಪಾಕಿಸ್ತಾನವು ಭಾರತದ ಬ್ರಹ್ಮೋಸ್ ಕ್ಷಿಪಣಿಗೆ ಪ್ರತಿಯಾಗಿ ಕ್ಷಿಪಣಿಯನ್ನು ಪರೀಕ್ಷಿಸಿದೆ. ಪಾಕಿಸ್ತಾನದ ಕ್ಷಿಪಣಿ ತನ್ನ ಗುರಿಯನ್ನು ತಲುಪಲು ವಿಫಲವಾಗಿದ್ದು, ಇದು ಸ್ಥಳೀಯ ಪ್ರದೇಶದಲ್ಲಿ ಬಿದ್ದಿದೆ' ಎಂದು ಟ್ವೀಟ್ ಮಾಡಿದೆ.
ಕ್ಷಿಪಣಿ ಪರೀಕ್ಷಾ ಶ್ರೇಣಿಯು ಜಮ್ಶೊರೊ ಬಳಿಯ ಪ್ರದೇಶದಲ್ಲಿ ನೆಲೆಗೊಂಡಿರುವುದು ತಿಳಿದುಬಂದಿದೆ. ಬಹುಶಃ ಪಾಕಿಸ್ತಾನವು ಇಂದು ಆಂಟಿ ಏರ್ ಕ್ರಾಫ್ಟ್ ಶಸ್ತ್ರಾಸ್ತ್ರವನ್ನು ಪರೀಕ್ಷೆ ಮಾಡಿದ್ದು, ರಾಕೆಟ್ ವಿಫಲವಾಗಿರುವ ಕಾರಣ ಕ್ಷಿಪಣಿಯು ನೆಲಕ್ಕೆ ಬಿದ್ದಿದೆ ಎನ್ನಲಾಗಿದೆ.
Indian missile ಪಾಕ್ ಭೂಭಾಗ ಧ್ವಂಸಗೊಳಿಸಿದ ಭಾರತದ ಕ್ಷಿಪಣಿ, ಘಟನೆಗೆ ವಿಷಾದ ವ್ಯಕ್ತಪಡಿಸಿ ತನಿಖೆಗೆ ಆದೇಶ!
ಈ ನಡುವೆ ಏರೋಸಿಂಟ್ (AEROSINT ) ಡಿವಿಷನ್ ಪಿಎಸ್ ಎಫ್ (PSF) ಎಂಬ ಪಾಕಿಸ್ತಾನಿ ರಕ್ಷಣಾ ವಿಶ್ಲೇಷಕ ಖಾತೆಯು ತನ್ನ ಟ್ವಿಟರ್ ಹ್ಯಾಂಡಲ್‌ನಿಂದ ಸಿಂಧ್‌ನಲ್ಲಿ ಕಂಡುಬಂದ, ಈ ಅಪರಿಚಿತ ಹಾರುವ ವಸ್ತುವು ಪಾಕಿಸ್ತಾನಿ ಸೇನೆ ತನ್ನ ಕ್ಷಿಪಣಿಯ ಶ್ರೇಣಿ ಪರೀಕ್ಷಿಸುತ್ತಿದೆಯೇ ಹೊರತು ಬೇರೇನೂ ಅಲ್ಲ ಎಂದು ಪೋಸ್ಟ್ ಮಾಡಿದೆ. “ಅಲಿಯಾಬಾದ್, ಜಮ್ಶೋರೊ, ಸಿಂಧ್. ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾದ ವೀಡಿಯೊಗೆ ಸಂಬಂಧಿಸಿದಂತೆ, ಈ ಪಟ್ಟಣದ ಸಮೀಪವಿರುವ ಸ್ವಂತ ಪಡೆಗಳ ಪರೀಕ್ಷಾ ವ್ಯಾಪ್ತಿಯು ಸಕ್ರಿಯವಾಗಿದೆ. ಭಯಕ್ಕೆ ಯಾವುದೇ ಕಾರಣವಿಲ್ಲ. ” ಎಂದು ಹೇಳಿದೆ.
ಇರಾಕ್‌ನ ಅಮೆರಿಕ ರಾಯಭಾರ ಕಚೇರಿ ಬಳಿ ಇರಾನ್ ಕ್ಷಿಪಣಿ ದಾಳಿ... ಮತ್ತೊಂದು ಯುದ್ಧದ ಸೂಚನೆಯೇ!
ಪರೀಕ್ಷಾ ಪ್ರದೇಶದಲ್ಲಿನೋ ಫ್ಲೈ ಝೋನ್ ಘೋಷಿಸಿದ ಪೂರ್ವ ಸೂಚನೆಯನ್ನು ಈಗಾಗಲೇ ನೀಡಲಾಗಿದೆ ಎಂದು ಇನ್ನೊಂದು ಟ್ವೀಟ್ ನಲ್ಲಿ ಹಂಚಿಕೊಂಡಿದೆ. "ಒಂದು NOTAM ಅನ್ನು ಈಗಾಗಲೇ ನೀಡಲಾಗಿದೆ" ಎಂದು ಟ್ವೀಟ್ ಮಾಡಿದ್ದು, ವಿಮಾನಯಾನ ಸಂಸ್ಥೆಗಳಿಗೆ ನೀಡಿರುವ ಈ ಸೂಚನೆಯನ್ನೂ ಲಗತ್ತಿಸಿದ್ದಾರೆ. ಇದರಿಂದಾಗ ಪಾಕಿಸ್ತಾನ ವಿಫಲ ಕ್ಷಿಪಣಿ ಪ್ರಯೋಗ ನಡೆಸಿದ್ದು ಖಚಿತಗೊಂಡಿದೆ.