*ರಷ್ಯಾಧ್ಯಕ್ಷ ಪುಟಿನ್ ಬುದ್ಧಿವಂತ, ಬೈಡೆನ್ ಪೆದ್ದ*ಉಕ್ರೇನ್ ಯುದ್ಧಕ್ಕೆ ದುರ್ಬಲ ಬೈಡೆನ್ ಕಾರಣ*ಒಂದು ವರ್ಷದ ಬಳಿಕ ಮಾಜಿ ಅಧ್ಯಕ್ಷ ಪ್ರತ್ಯಕ್ಷ
ವಾಷಿಂಗ್ಟನ್ (ಫೆ. 28): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ತೆರೆಮರೆಗೆ ಸರಿದಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪ್ರತ್ಯಕ್ಷರಾಗಿದ್ದು, ಉಕ್ರೇನ್ ಯುದ್ಧವನ್ನು ಮುಂದಿಟ್ಟುಕೊಂಡು ಹಾಲಿ ಅಧ್ಯಕ್ಷ ಜೋ ಬೈಡೆನ್ ವಿರುದ್ಧ ಹಿಗ್ಗಾಮುಗ್ಗಾ ವಾಕ್ ಪ್ರಹಾರ ನಡೆಸಿದ್ದಾರೆ. ನಾನು ಸ್ಪರ್ಧಿಸಿದ್ದ ಚುನಾವಣೆಯಲ್ಲಿ ಅಕ್ರಮ ನಡೆಯದೆ ಹೋಗಿದ್ದರೆ ಉಕ್ರೇನ್‌ನಲ್ಲಿ ನಡೆಯುತ್ತಿರುವ ಭಯಾನಕ ದುರ್ಘಟನೆ ಎಂದಿಗೂ ಘಟಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಫ್ಲೋರಿಡಾದ ಒರ್ಲಾಂಡೋದಲ್ಲಿ ಶನಿವಾರ ನಡೆದ ರಿಪಬ್ಲಿಕನ್ ಪಕ್ಷದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದಕ್ಕೆ ಜೋ ಬೈಡೆನ್ ನಾಯಕತ್ವ ದುರ್ಬಲವಾಗಿರುವುದೇ ಕಾರಣ ಎಂದರು.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುದ್ಧಿವಂತ. ಅದು ಸಮಸ್ಯೆ ಅಲ್ಲ. ಆದರೆ ಸಮಸ್ಯೆ ಇರುವುದು ನಮ್ಮ ನಾಯಕರು ಪೆದ್ದರಾಗಿರುವುದರಿಂದ. ರಷ್ಯಾವನ್ನು ಕಡೆ ಪಕ್ಷ ಮಾನಸಿಕವಾಗಿಯಾದರೂ ತುಂಡು ತುಂಡು ಮಾಡುವ ಬದಲಿಗೆ ನ್ಯಾಟೋ ಪಡೆಗಳು ಬುದ್ಧಿವಂತನ ಎದುರಿಗಿರುವ ವ್ಯಕ್ತಿಯತ್ತ ನೋಡಿ ನಿರ್ಬಂಧಗಳನ್ನು ಹೇರುತ್ತಿವೆ ಎಂದು ಲೇವಡಿ ಮಾಡಿದರು. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರನ್ನು ಧೈರ್ಯಶಾಲಿ ವ್ಯಕ್ತಿ ಎಂದು ಬಣ್ಣಿಸಿದರು.
ಇದನ್ನೂ ಓದಿ:Russia Ukraine Crisis: ಗನ್ ಕೈಗೆತ್ತಿಕೊಂಡ ಮಿಸ್ ಉಕ್ರೇನ್ ಅನಸ್ತಾಸೀಯಾ ಲೆನ್ನಾ!
ರಷ್ಯಾ ಮೇಲೆ ಮತ್ತಷ್ಟುಆರ್ಥಿಕ ನಿರ್ಬಂಧಕ್ಕೆ ಸಿದ್ಧತೆ: ಉಕ್ರೇನ್ ಮೇಲೆ ಅಪ್ರಚೋದಿತ ದಾಳಿ ನಡೆಸಿರುವ ರಷ್ಯಾದ ಹಣಕಾಸು ವ್ಯವಸ್ಥೆಗೆ ದೊಡ್ಡ ಮಟ್ಟಿನ ಹೊಡೆತ ನೀಡಲು, ಜಾಗತಿಕ ಸಮುದಾಯ ಸಮ್ಮತಿ ಸೂಚಿಸಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ರಷ್ಯಾದ ಕೇಂದ್ರೀಯ ಬ್ಯಾಂಕ್ ಮತ್ತು ಈಗಾಗಲೇ ನಿರ್ಬಂಧಕ್ಕೆ ಒಳಗಾಗಿರುವ ಹಲವು ಬ್ಯಾಂಕ್‌ಗಳು ದೊಡ್ಡ ಸಮಸ್ಯೆ ಎದುರಿಸಬೇಕಾಗಿ ಬರಲಿದೆ. ಅಲ್ಲದೆ ಈ ಬೆಳವಣಿಗೆ ರಷ್ಯಾದ ಆಮದು ಮತ್ತು ರಫ್ತು ವಲಯಕ್ಕೂ ಭಾರೀ ಪೆಟ್ಟು ನೀಡಲಿದೆ ಎನ್ನಲಾಗಿದೆ.
ಸ್ವಿಫ್ಟ್ ಶಾಕ್: ಭಾರತ ಸೇರಿದಂತೆ ವಿಶ್ವದ 200 ದೇಶಗಳ 11000ಕ್ಕೂ ಹೆಚ್ಚು ಬ್ಯಾಂಕ್‌ಗಳು ಸ್ವಿಫ್ಟ್ (ಸೊಸೈಟಿ ಫಾರ್ ವಲ್ಡ್‌ರ್‍ವೈಡ್ ಇಂಟರ್‌ಬ್ಯಾಂಕ್ ಪೈನಾನ್ಷಿಯಲ್ ಟೆಲಿಕಮ್ಯುನಿಕೇಷನ್) ಎಂಬ ಹಣಕಾಸು ವ್ಯವಸ್ಥೆಯನ್ನು ಬಳಸುತ್ತಿವೆ. ಈ ವ್ಯವಸ್ಥೆಯು ಎಲ್ಲಾ ಬ್ಯಾಂಕ್‌ಗಳಿಗೆ ದೇಶದಿಂದ ದೇಶಕ್ಕೆ ಹಣ ವರ್ಗಾವಣೆ ಕುರಿತು ತ್ವರಿತ ಸಂದೇಶ ನೀಡುವ ಮೂಲಕ, ಹಣ ವರ್ಗಾವಣೆ ಪ್ರಕ್ರಿಯೆ ಸುಲಲಿತವಾಗಿರುವಂತೆ ನೋಡಿಕೊಳ್ಳುತ್ತದೆ.
ಇದನ್ನೂ ಓದಿ: ರಷ್ಯಾ ಉಕ್ರೇನ್ ಸಂಕಟದ ನಡುವೆ ಅಧ್ಯಕ್ಷ ಝೆಲೆನ್ಸ್ಕಿ ಡಾನ್ಸ್ ವಿಡಿಯೋ ವೈರಲ್!
ಇದೀಗ ಈ ವ್ಯವಸ್ಥೆಯಿಂದ ರಷ್ಯಾದ ಆಯ್ದ ಬ್ಯಾಂಕ್‌ಗಳನ್ನು ಹೊರಗಿಡಲು ಅಮೆರಿಕ, ಯುರೋಪಿಯನ್ ಒಕ್ಕೂಟ, ಕೆನಡಾ, ಜರ್ಮನಿ, ಫ್ರಾನ್ಸ್, ಇಟಲಿ ನಿರ್ಧರಿಸಿವೆ. ರಷ್ಯಾದ ಬಹುತೇಕ ಬ್ಯಾಂಕ್‌ಗಳು ಇದೇ ವ್ಯವಸ್ಥೆಯ ಮೇಲೆ ಅವಲಂಬಿತವಾಗಿರುವ ಕಾರಣ, ಅವುಗಳಿಗೆ ದೊಡ್ಡ ಹೊಡೆತ ಬೀಳಲಿದೆ.
ಅದರಲ್ಲೂ ತೈಲ ಮತ್ತು ಅನಿಲ ರಫ್ತು ವಹಿವಾಟು ನಡೆಸುವವರ ಮೇಲೆ ಇದು ಮಾರಕ ಪರಿಣಾಮ ಬೀರಲಿದೆ ಎನ್ನಲಾಗಿದೆ. ಜೊತೆಗೆ ವಿದೇಶಗಳಿಂದ ಮಾಡಿಕೊಂಡ ಆಮದಿಗೆ ಹಣ ನೀಡಿಕೆ ಪ್ರಕ್ರಿಯೆಯಲ್ಲಿನ ವ್ಯತ್ಯಯ, ಆಮದಿಗೂ ಹೊಡೆತ ನೀಡಲಿದೆ ಎನ್ನಲಾಗಿದೆ.
ಕೇಂದ್ರೀಯ ಬ್ಯಾಂಕ್‌ಗೂ ನಿರ್ಬಂಧ: ಇನ್ನು ಸ್ವಿಫ್ಟ್ ಶಾಕ್‌ನ ಜೊತೆಜೊತೆಗೇ ರಷ್ಯಾದ ಕೇಂದ್ರೀಯ ಬ್ಯಾಂಕ್‌ನ ಅಂತಾರಾಷ್ಟ್ರೀಯ ಮೀಸಲು ಮೇಲೆ ನಿರ್ಬಂಧ ಹೇರಲು ಈ ದೇಶಗಳು ಸಮ್ಮತಿಸಿವೆ.
ಕಠಿಣ ಕ್ರಮ: ಉಕ್ರೇನ್ ಯುದ್ಧಕ್ಕೆ ನೆರವು ನೀಡುತ್ತಿರುವ ಮತ್ತು ರಷ್ಯಾದ ಯತ್ನವನ್ನು ಬೆಂಬಲಿಸುತ್ತಿರುವ ವ್ಯಕ್ತಿಗಳಿಗೆ ಪೌರತ್ವ ನೀಡದಿರುವ, ನೀಡಿದ್ದರೆ ಅದನ್ನು ರದ್ದುಪಡಿಸುವ ವಿಷಯದಲ್ಲೂ ಮೇಲ್ಕಂಡ ದೇಶಗಳು ಸಮ್ಮತಿ ವ್ಯಕ್ತಪಡಿಸಿವೆ. ಅಲ್ಲದೆ ಇಂಥ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಆಸ್ತಿ ಪತ್ತೆ ಮಾಡಿ, ಅದನ್ನು ಮುಟ್ಟುಗೋಲು ಹಾಕಿಕೊಳ್ಳಲೂ ನಿರ್ಧರಿಸಲಾಗಿದೆ. ಜೊತೆಗೆ ಇಂಥ ಆಸ್ತಿ ಪತ್ತೆಗೆ ವಿಶೇಷ ಕಾರ್ಯಪಡೆ ರಚನೆಗೂ ನಿರ್ಧರಿಸಲಾಗಿದೆ.
