ವಾಷಿಂಗ್ಟನ್(ಏ.23): ಕೊರೋನಾ ನಿಗ್ರಹಕ್ಕೆ ಸದ್ಯದ ಮಟ್ಟಿಗೆ ರಾಮಬಾಣ ಎಂದೇ ಪರಿಗಣಿಸಿ, ಭಾರತದಿಂದ ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಂಡಿದ್ದ ಮಲೇರಿಯಾ ಮಾತ್ರೆ ಹೈಡ್ರಾಕ್ಸಿಕ್ಲೋರೋಕ್ವಿನ್‌, ಅಮೆರಿಕಕ್ಕೆ ಕೈಕೊಟ್ಟಿದೆ. ಅಮೆರಿಕದಲ್ಲಿ ಈ ಮಾತ್ರೆಯನ್ನು ಬಳಸಿದ ಹೊರತಾಗಿಯೂ ಹೆಚ್ಚಿನ ಮಂದಿ ಕೊರೊನಾ ವೈರಸ್‌ಗೆ ಬಲಿ ಆಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಕೊರೋನಾ ಚಿಕಿತ್ಸೆಗೆ ಹೈಡ್ರೋಕ್ಸಿಕ್ಲೋರೊಕ್ವಿನ್‌ ಮಾತ್ರೆಗಳ ಬಳಕೆಯನ್ನು ಬಲವಾಗಿ ಪ್ರತಿಪಾದಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ವರದಿಯನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.

ಕೊರೋನಾ ನಿರ್ವಹಣೆ: ಪಿಎಂ ಮೋದಿ ಕಾಳಜಿಗೆ ಬಿಲ್‌ಗೇಟ್ಸ್‌ ಮೆಚ್ಚುಗೆ!

ಅಮೆರಿಕ ಈಗಾಗಲೇ 3 ಕೋಟಿ ಹೈಡ್ರೋಕ್ಸಿಕ್ಲೋರೋಕ್ವಿನ್‌ ಮಾತ್ರೆಗಳನ್ನು ಆಮದು ಮಾಡಿಕೊಂಡಿದೆ. ಇದರಲ್ಲಿ ಹೆಚ್ಚಿನ ಮಾತ್ರೆಗಳನ್ನೂ ಭಾರತವೇ ಪೂರೈಕೆ ಮಾಡಿದೆ. ಆದರೆ, ಈ ಮಾತ್ರೆಗಳು ನಿರೀಕ್ಷಿಸಿದ ಮಟ್ಟದ ಫಲಿತಾಂಶ ನೀಡುತ್ತಿಲ್ಲ. ಈ ಮಾತ್ರೆ ಬಳಕೆ ಮಾಡಿದವರ ಪೈಕಿ ಕೊರೋನಾದಿಂದ ಸಾವಿಗೀಡಾದವರ ಸಂಖ್ಯೆ ಅಧಿಕವಾಗಿದೆ ಎಂದು ನ್ಯಾಷನಲ್‌ ಇನ್ಸಿಟಿಟ್ಯೂಟ್‌ ಆಫ್‌ ಹೆಲ್ತ್‌ನ ಅಧ್ಯಯನ ತಿಳಿಸಿದೆ.

ಇದೇ ವೇಳೆ ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಕಲ್‌ಗೆ ಸಲ್ಲಿಸಲಾದ ಅಧ್ಯಯನವೊಂದರ ಪ್ರಕಾರ, ಹೈಡ್ರೋಕ್ಸಿಕ್ಲೋರೊಕ್ವಿನ್‌ ಮಾತ್ರೆಗಳ ಬಳಕೆಯಿಂದ ಕೊರೋನಾ ವೈರಸ್‌ಗಾಗಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ವೆಂಟಿಲೇಟರ್‌ ಬಳಸುವ ಅಪಾಯವನ್ನು ಕಡಿಮೆ ಮಾಡಿಲ್ಲ ಎಂದು ತಿಳಿಸಲಾಗಿದೆ.

ವರ್ಷಾಂತ್ಯಕ್ಕೆ ಅಮೆರಿಕದಲ್ಲಿ ಇನ್ನೂ ಭೀಕರ ಕೊರೋನಾ ದಾಳಿ: ತಜ್ಞರ ಎಚ್ಚರಿಕೆ!

ಇದೇ ವೇಳೆ, ಹೈಡ್ರೋಕ್ಸಿಕ್ಲೋರೊಕ್ವಿನ್‌ ಮಾತ್ರೆಯನ್ನು ಕೊರೋನಾ ವೈರಸ್‌ ವಿರುದ್ಧದ ಚಿಕಿತ್ಸೆಗೆ ಶಿಫಾರಸು ಮಾಡಲು ಮತ್ತು ಅದರ ಬಳಕೆಯನ್ನು ವಿರೋಧಿಸಲು ಸೂಕ್ತವಾದ ವೈದ್ಯಕೀಯ ದತ್ತಾಂಶಗಳು ಇನ್ನೂ ಲಭ್ಯವಿಲ್ಲ ಎಂದು ಇನ್ನೊಂದು ವರದಿ ತಿಳಿಸಿದೆ.