ಮಿಲಿಟರಿ ಪರಮಾಣು ಯೋಜನೆ ಕೈಬಿಡುವಂತೆ ಇರಾನ್‌ ಮೇಲೆ ಒತ್ತಡ ಹೇರುತ್ತಿರುವ ಅಮೆರಿಕ ಸೀಮಿತ ದಾಳಿಯ ಸುಳಿವು ನೀಡಿದೆ. ಟ್ರಂಪ್‌, ‘ಪರಮಾಣು ಒಪ್ಪಂದಕ್ಕೆ ಸಹಿ ಹಾಕುವಂತೆ ಒತ್ತಡ ಹೇರುವ ನಿಟ್ಟಿನಲ್ಲಿ ಸೀಮಿತ ದಾಳಿಯ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಟೆಹ್ರಾನ್: ಮಿಲಿಟರಿ ಪರಮಾಣು ಯೋಜನೆ ಕೈಬಿಡುವಂತೆ ಇರಾನ್‌ ಮೇಲೆ ಒತ್ತಡ ಹೇರುತ್ತಿರುವ ಅಮೆರಿಕ ಇದರ ಭಾಗವಾಗಿ ಸೀಮಿತ ದಾಳಿಯ ಸುಳಿವು ನೀಡಿದೆ.

Add Asianetnews Kannada as a Preferred SourcegooglePreferred

ಶುಕ್ರವಾರ ಈ ಕುರಿತು ಸಣ್ಣ ಸುಳಿವು ನೀಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಪರಮಾಣು ಒಪ್ಪಂದಕ್ಕೆ ಸಹಿ ಹಾಕುವಂತೆ ಒತ್ತಡ ಹೇರುವ ನಿಟ್ಟಿನಲ್ಲಿ ನಾವು ಸೀಮಿತ ದಾಳಿಯ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ. ಆದರೆ ದಾಳಿಯ ಸಮಯದ ಕುರಿತು ಅವರು ಯಾವುದೇ ಸುಳಿವು ನೀಡಿಲ್ಲ

ನೌಕೆ, ವಿಮಾನ:

ಇರಾನ್ ಮೇಲೆ ಒತ್ತಡ ಹೇರಲು ಅಮೆರಿಕ ಈಗಾಗಲೇ ಎಫ್‌-35 ಸೇರಿ 50ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಿಕೊಟ್ಟಿದೆ. 2003ರ ಇರಾಕ್‌ ಯುದ್ಧದ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ಯುದ್ಧವಿಮಾನವನ್ನು ಮಧ್ಯಪ್ರಾಚ್ಯದಲ್ಲಿ ನಿಯೋಜಿಸುತ್ತಿರುವುದು ಇದೇ ಮೊದಲು .ಯುಎಸ್‌ಎಸ್‌ ಅಬ್ರಹಾಂ ಲಿಂಕನ್‌, ಯುಎಸ್‌ಎಸ್‌ ಗೆರಾಲ್ಡ್‌ ಆರ್‌.ಫೋರ್ಡ್‌ ಸೇರಿ 13 ನೌಕೆಗಳನ್ನು ನೌಕಾಸೇನೆ ನಿಯೋಜಿಸಿದೆ.

ಇರಾನ್‌ ಮೇಲೆ ದಾಳಿಗೆ ಬ್ರಿಟನ್‌ ನೆಲೆ ಬಳಕೆಗೆ ಅಮೆರಿಕಕ್ಕಿಲ್ಲ ಚಾನ್ಸ್‌

ವಾಷಿಂಗ್ಟನ್‌: ಇರಾನ್‌ ಮೇಲೆ ದಾಳಿ ಮಾಡಲು ಸರ್ವಸಿದ್ಧತೆ ಮಾಡಿಕೊಳ್ಳುತ್ತಿರುವ ಅಮೆರಿಕಕ್ಕೆ ಬ್ರಿಟನ್‌ ಬಿಗ್‌ ಶಾಕ್‌ ನೀಡಿದೆ. ಸ್ವೀಡನ್‌ ಬಳಿಯಿರುವ ಆರ್‌ಎಎಫ್‌ ಫೇರ್ಫೋರ್ಡ್ ಸೇರಿದಂತೆ ತನ್ನ ಯಾವುದೇ ವಾಯುನೆಲೆಗಳಿಂದ ಆಕ್ರಮಣ ಮಾಡಲು ಅಮೆರಿಕಕ್ಕೆ ಅನುಮತಿ ನೀಡಲು ಬ್ರಿಟನ್‌ ನಿರಾಕರಿಸಿದೆ.ಒಪ್ಪಂದದ ಪ್ರಕಾರ, ಬ್ರಿಟನ್‌ ನೆಲೆಗಳನ್ನು ಅಮೆರಿಕ ಅನುಮತಿ ಕೇಳಿ ಬಳಸಬಹುದು. ಅದರಂತೆ ಟ್ರಂಪ್‌, ‘ಅಸ್ಥಿರ ಮತ್ತು ಅಪಾಯಕಾರಿ ದೇಶದಿಂದ (ಇರಾನ್‌) ಸಂಭಾವ್ಯ ದಾಳಿಯನ್ನು ತಡೆಯಲು ನಮಗೆ ಡಿಯಾಗೋ ಗಾರ್ಸಿಯಾ ಮತ್ತು ಆರ್‌ಎಎಫ್‌ ನೆಲೆಯನ್ನು ಬಳಸಲು ಅನುಮತಿಸಬೇಕು’ ಎಂದು ಅಮೆರಿಕ ಅನುಮತಿ ಕೇಳಿತ್ತು. ಆದರೆ ಇದರಕ್ಕೆ ಒಪ್ಪಿದರೆ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿ ಕಾರ್ಯಾಚರಣೆಯಲ್ಲಿ ಭಾಗಿಯಾದ ಅಪವಾದ ಬರಬಹುದು ಎಂಬುದನ್ನು ಮನಗಂಡು ಬ್ರಿಟನ್‌ ಅದನ್ನು ನಿರಾಕರಿಸಿದೆ.

ಕಾನೂನಾತ್ಮಕವಾಗಿ ಡಿಯಾಗೋ ಗಾರ್ಸಿಯಾ ದ್ವೀಪ ಮಾರಿಷಸ್‌ಗೆ ಸೇರಿದ್ದಾದರೂ, ತನ್ನ ಹಾಗೂ ಅಮೆರಿಕದ ಸೇನಾ ನೆಲೆಯಿರುವ ಅದನ್ನು ಬ್ರಿಟನ್‌ 100 ವರ್ಷಗಳ ಕಾಲ ಭೋಗ್ಯಕ್ಕೆ ಪಡೆದಿದೆ. ಅತ್ತ ಆರ್‌ಎಎಫ್‌ನಲ್ಲಿ ಅಮೆರಿಕದ ಯುದ್ಧವಿಮಾನ ಮತ್ತು ಬೃಹತ್‌ ಬಾಂಬರ್‌ಗಳಿವೆ.

ಖಮೇನಿ ಎಚ್ಚರಿಕೆ:

ಅಮೆರಿಕ ತನ್ನನ್ನು ಯುದ್ಧನೌಕೆ ಮತ್ತು ವಿಮಾನಗಳಿಂದ ಸುತ್ತುವರೆಯುತ್ತಿರುವುದು ದೊಡ್ಡ ಪ್ರಮಾಣದ ದಾಳಿಯ ಮುನ್ಸೂಚನೆ ಎಂದರಿತಿರುವ ಇರಾನ್‌ ಸರ್ವೋಚ್ಚ ನಾಯಕ ಅಲಿ ಖಮೇನಿ, ‘ನಾವು ದಾಳಿ ಆರಂಭಿಸುವುದಿಲ್ಲ. ಆದರೆ ಆಕ್ರಮಣ ನಡೆದರೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಮಧ್ಯಪ್ರಾಚ್ಯದಲ್ಲಿರುವ ಎಲ್ಲಾ ಸೇನಾನೆಲೆಗಳು ನಮ್ಮ ಗುರಿಯಾಗಲಿವೆ. ಇದಕ್ಕೆ ಅಮೆರಿಕವೇ ಹೊಣೆ’ ಎಂದಿದ್ದಾರೆ.