ವಾಷಿಂಗ್ಟನ್‌(ಅ.21): ಅಮೆರಿಕ ಉಪಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸುತ್ತಿರುವ ಡೆಮಾಕ್ರೆಟಿಕ್‌ ಪಕ್ಷದ ನಾಯಕಿ, ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅವರನ್ನು ‘ದುರ್ಗಾದೇವಿ’ಗೆ ಹೋಲಿಸಿದ್ದ ಚಿತ್ರವು ಈಗ ವಿವಾದಕ್ಕೀಡಾಗಿದೆ. ಈ ಚಿತ್ರವನ್ನು ಟ್ವೀಟ್‌ ಮಾಡಿದ್ದ ಕಮಲಾ ಅವರ ಸೋದರ ಸೊಸೆ, ವಕೀಲೆ ಮೀನಾ ಹ್ಯಾರಿಸ್‌ ಅವರು ವಿವಾದ ಸೃಷ್ಟಿಯಾದ ಬಳಿಕ ಟ್ವೀಟ್‌ ಅಳಿಸಿಹಾಕಿದ್ದಾರೆ.

ಈ ಚಿತ್ರದಲ್ಲಿ ದುರ್ಗಾದೇವಿಯ ದೇಹಕ್ಕೆ ಕಮಲಾ ಮುಖ ಹಾಗೂ ದುರ್ಗೆ ಕುಳಿತ ಸಿಂಹಕ್ಕೆ ಡೆಮಾಕ್ರೆಟಿಕ್‌ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್‌ ಮುಖ ಅಂಟಿಸಲಾಗಿತ್ತು. ಇನ್ನು ರಾಕ್ಷಸ ‘ಮಹಿಷಾಸುರ’ನ ದೇಹಕ್ಕೆ ಬೈಡನ್‌ ವಿರುದ್ಧ ಸ್ಪರ್ಧಿಸಿರುವ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಖ ಅಂಟಿಸಲಾಗಿತ್ತು. ರಾಕ್ಷಸನನ್ನು (ಟ್ರಂಪ್‌) ದುರ್ಗೆ (ಕಮಲಾ) ಸಂಹರಿಸುವ ಕಥಾವಸ್ತುವನ್ನು ಅದು ಹೊಂದಿತ್ತು. ಕಮಲಾ ಮಾಡಿದ ಟ್ವೀಟ್‌ಗೆ ಅಮೆರಿಕದ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

‘ಕಮಲಾ ಅವರ ಮುಖವನ್ನು ದುರ್ಗಾದೇವಿಯ ದೇಹಕ್ಕೆ ಅಂಟಿಸಿ ಟ್ವೀಟ್‌ ಮಾಡಿದ್ದೀರಿ. ಇದರಿಂದ ಜಗತ್ತಿನ ಹಲವಾರು ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ’ ಎಂದು ಹಿಂದೂ ಅಮೆರಿಕ ಪ್ರತಿಷ್ಠಾನದ ಸುಹಾಗ್‌ ಶುಕ್ಲಾ ಕಿಡಿಕಾರಿದ್ದಾರೆ.

ಹಿಂದೂ ಅಮೆರಿಕನ್‌ ರಾಜಕೀಯ ಕ್ರಿಯಾ ಸಮಿತಿಯ ರಿಷಿ ಭುಟಾಡಾ ಪ್ರತಿಕ್ರಿಯಿಸಿ, ‘ಈ ಚಿತ್ರವನ್ನು ಮೀನಾ ಸೃಷ್ಟಿಸಿಲ್ಲ. ವಾಟ್ಸಪ್‌ನಲ್ಲಿ ಹರಿದಾಡುತ್ತಿದ್ದ ಚಿತ್ರವನ್ನು ಅವರು ಹಾಕಿದ್ದರು ಎಂದು ತಿಳಿದುಬಂದಿದೆ. ಟ್ವೀಟನ್ನು ಅವರು ಅಳಿಸಿದ್ದಾರೆ. ಆದರೂ ಮೀನಾ ಕ್ಷಮೆ ಕೋರಬೇಕು. ರಾಜಕೀಯದಲ್ಲಿ ಧರ್ಮ ಬಳಕೆ ಆಗಬಾರದು’ ಎಂದಿದ್ದಾರೆ.