ಲೇಡಿ ಎಲ್ಜಿನ್ ಹಡಗು ಮುಳುಗಿದ 164 ವರ್ಷಗಳ ನಂತರ, ಹಡಗಿನಲ್ಲಿದ್ದ ಬ್ರಿಟಿಷ್ ಪತ್ರಕರ್ತ ಹರ್ಬರ್ಟ್ ಇಂಗ್ರಾಮ್ ಅವರ ಚಿನ್ನದ ಪಾಕೆಟ್ ಗಡಿಯಾರ ಅವರ ಊರಿಗೆ ವಾಪಸ್ ಬಂದಿದೆ. 1860 ರಲ್ಲಿ ಮಿಚಿಗನ್ ಸರೋವರದಲ್ಲಿ ಸಂಭವಿಸಿದ ದುರಂತದಲ್ಲಿ ಹಡಗು ಮುಳುಗಿತ್ತು, ಸ್ಕೂಬಾ ಡೈವರ್‌ಗಳು ಗಡಿಯಾರ ಕಂಡುಹಿಡಿದರು.
ಲಂಡನ್: ಲೇಡಿ ಎಲ್ಜಿನ್ ಎಂಬ ಹಡಗು ಮಿಚಿಗನ್ ಸರೋವರದಲ್ಲಿ ಮುಳುಗಿದಾಗ ಕಳೆದುಹೋಗಿದ್ದ ಚಿನ್ನದ ಪಾಕೆಟ್ ಗಡಿಯಾರ 164 ವರ್ಷಗಳ ನಂತರ ಅದರ ಮಾಲೀಕರ ಊರಿಗೆ ವಾಪಸ್ ಬಂದಿದೆ. ಬ್ರಿಟಿಷ್ ಪತ್ರಕರ್ತ ಮತ್ತು ರಾಜಕಾರಣಿಯಾಗಿದ್ದ ಹರ್ಬರ್ಟ್ ಇಂಗ್ರಾಮ್ ಅವರ ಚಿನ್ನದ ಪಾಕೆಟ್ ಗಡಿಯಾರ ಮಿಚಿಗನ್ ಸರೋವರದ ತಳದಲ್ಲಿ ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲ ವಿಶ್ರಮಿಸಿದ ನಂತರ ಇಂಗ್ಲೆಂಡ್‌ನಲ್ಲಿರುವ ಅವರ ಊರಿಗೆ ಮರಳಿದೆ.
1860 ಸೆಪ್ಟೆಂಬರ್ 8 ರಂದು, ನೂರಾರು ಪ್ರಯಾಣಿಕರೊಂದಿಗೆ ಮಿಚಿಗನ್ ಸರೋವರದಲ್ಲಿ ಪ್ರಯಾಣಿಸುತ್ತಿದ್ದ ಲೇಡಿ ಎಲ್ಜಿನ್ ಹಡಗು ಇಲಿನಾಯ್ಸ್‌ನ ವಿನ್ನೆಟ್ಕ ಬಳಿ ಭಾರಿ ಬಿರುಗಾಳಿಗೆ ಸಿಲುಕಿತು. ಬಿರುಗಾಳಿಯ ಸಮಯದಲ್ಲಿ ಮತ್ತೊಂದು ಹಡಗಿನೊಂದಿಗೆ ಲೇಡಿ ಎಲ್ಜಿನ್ ಡಿಕ್ಕಿ ಹೊಡೆದು ಮಿಚಿಗನ್ ಸರೋವರದಲ್ಲಿ ಮುಳುಗಿತು. ಈ ದುರಂತದಲ್ಲಿ ಹರ್ಬರ್ಟ್ ಇಂಗ್ರಾಮ್ ಮತ್ತು ಅವರ ಮಗ ಸೇರಿದಂತೆ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ತಲುಪುವ ಮೊದಲೇ ಅವರು ಸಾವನ್ನಪ್ಪಿದ್ದರು. ಈ ಘಟನೆ ಈ ಪ್ರದೇಶದ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಸಮುದ್ರ ದುರಂತಗಳಲ್ಲಿ ಒಂದಾಗಿದೆ.
ಹಡಗಿನಲ್ಲಿದ್ದ ಹರ್ಬರ್ಟ್ ಇಂಗ್ರಾಮ್ ಸಾಮಾನ್ಯ ಪ್ರಯಾಣಿಕರಾಗಿರಲಿಲ್ಲ. 'ದಿ ಲಂಡನ್ ಇಲ್ಲಸ್ಟ್ರೇಟೆಡ್ ನ್ಯೂಸ್' ಪತ್ರಿಕೆಯ ಸ್ಥಾಪಕರಾಗಿ ಆಗಿನ ಕಾಲದ ಪ್ರಮುಖ ವ್ಯಕ್ತಿಯಾಗಿದ್ದರು. ಇವರು ಚಿತ್ರಗಳನ್ನು ಪ್ರಕಟಿಸುವ ಮೂಲಕ ಪತ್ರಿಕೋದ್ಯಮದಲ್ಲಿ ಕ್ರಾಂತಿಯನ್ನೇ ಮಾಡಿದವರು. ವಿಶ್ವದ ಮೊದಲ ಚಿತ್ರ ಪತ್ರಿಕೆಯನ್ನು ಸ್ಥಾಪಿಸಿದವರು. ಜೊತೆಗೆ ಸಂಸತ್ ಸದಸ್ಯರೂ ಆಗಿದ್ದರು. 19 ನೇ ಶತಮಾನದ ಬ್ರಿಟಿಷ್ ರಾಜಕೀಯ ಮತ್ತು ಮಾಧ್ಯಮಗಳ ಮೇಲೆ ಪ್ರಭಾವ ಬೀರಿದ ವ್ಯಕ್ತಿ ಇಂಗ್ರಾಮ್. ಅವರ ಕೆಲಸಗಳು ಅವರ ಊರಾದ ಲಿಂಕನ್‌ಶೈರ್‌ನ ಬೋಸ್ಟನ್‌ನಲ್ಲಿ ಅವರಿಗೆ ಖ್ಯಾತಿಯನ್ನು ತಂದುಕೊಟ್ಟವು. ಅಲ್ಲಿ ಅವರ ಸ್ಮಾರಕವಾಗಿ ಒಂದು ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಇನ್ನು ಇಂಗ್ರಾಮ್ ಅವರ ಬಳಿಯಿದ್ದ ಚಿನ್ನದ ಪಾಕೆಟ್ ಗಡಿಯಾರ ಕೇವಲ ಗಡಿಯಾರವಲ್ಲ, ಇತಿಹಾಸದ ಮೂಲಕ ಖಂಡಗಳನ್ನು ಸಂಪರ್ಕಿಸುವ ಮತ್ತು ನೆನಪುಗಳನ್ನು ಉಳಿಸಿಕೊಳ್ಳುವ ಸಂಕೇತವಾಗಿತ್ತು. ಆದರೆ, ಅವರು ಪ್ರಯಾಣ ಮಾಡುತ್ತಿದ್ದ ಲೇಡಿ ಎಲ್ಜಿನ್ ಹಡಗು ಮುಳುಗಿದ ಸ್ಥಳದಲ್ಲಿ ಒಂದು ಮೈಲಿ ಉದ್ದಕ್ಕೂ ಹರಡಿದ್ದ ಹಡಗಿನ ಅವಶೇಷಗಳನ್ನು ಪರಿಶೀಲಿಸುವಾಗ 1992ರಲ್ಲಿ ಸ್ಕೂಬಾ ಡೈವರ್‌ಗಳು ಚಿನ್ನದ ಪಾಕೆಟ್ ಗಡಿಯಾರವನ್ನು ಕಂಡುಹಿಡಿದರು. ಮಿಚಿಗನ್ ಹಡಗು ಧ್ವಂಸ ಸಂಶೋಧನಾ ಸಂಸ್ಥೆಯ ಸ್ಥಾಪಕಿ ಮತ್ತು ಸಮುದ್ರ ಇತಿಹಾಸಕಾರ ವ್ಯಾಲೆರಿ ವ್ಯಾನ್ ಹೀಸ್ಟ್ ಈ ಗಡಿಯಾರವನ್ನು 'ಅಸಾಮಾನ್ಯ ಆವಿಷ್ಕಾರ' ಎಂದು ಬಣ್ಣಿಸಿದರು. ಮಿಚಿಗನ್ ಸರೋವರದ ತಣ್ಣನೆಯ ಮತ್ತು ಆಮ್ಲಜನಕ ಕಡಿಮೆ ಇರುವ ಪರಿಸರದಲ್ಲಿ ಗಡಿಯಾರ ಮತ್ತು ಅದರ ಕವಚ 160 ವರ್ಷಗಳಿಗೂ ಹೆಚ್ಚು ಕಾಲ ಹಾನಿಯಾಗದೆ ಉಳಿದಿತ್ತು. ಇದರಿಂದ ಗಡಿಯಾರ ಇತಿಹಾಸದ ಅಮೂಲ್ಯ ಭಾಗವಾಯಿತು.
ಈ ಗಡಿಯಾರವನ್ನು ಅಮೆರಿಕದಲ್ಲಿ ಕಂಡುಹಿಡಿಯಲಾಯಿತಾದರೂ, 2025 ರ ಮೇ ತಿಂಗಳಲ್ಲಿ ಸಂಶೋಧನೆಗಾಗಿ ಒಬ್ಬ ಇತಿಹಾಸಕಾರರಿಗೆ ನೀಡುವವರೆಗೂ ದಶಕಗಳ ಕಾಲ ಸಾರ್ವಜನಿಕರಿಗೆ ಇದನ್ನು ನೋಡಲು ಸಾಧ್ಯವಾಗಿರಲಿಲ್ಲ. ಗಡಿಯಾರದ ಐತಿಹಾಸಿಕ ಮತ್ತು ಭಾವನಾತ್ಮಕ ಮಹತ್ವವನ್ನು ಅರಿತ ಜಾನ್ ವ್ಯಾನ್ ಫ್ಲೀಟ್, ಗಡಿಯಾರವನ್ನು ಖರೀದಿಸಿ ಬೋಸ್ಟನ್ ಗಿಲ್ಡ್‌ಹಾಲ್ ವಸ್ತುಸಂಗ್ರಹಾಲಯಕ್ಕೆ ದಾನ ಮಾಡಿದ್ದಾರೆ. ಹರ್ಬರ್ಟ್ ಇಂಗ್ರಾಮ್ ಅವರ ಸ್ಮರಣಾರ್ಥ ಪ್ರದರ್ಶನವನ್ನು ಏರ್ಪಡಿಸುತ್ತಿದ್ದ ವಸ್ತುಸಂಗ್ರಹಾಲಯಕ್ಕೆ ಈ ಉಡುಗೊರೆ ಬಹಳ ಅರ್ಥಪೂರ್ಣವಾಗಿದೆ. ಇಂಗ್ರಾಮ್ ಅವರ ಜೀವನ ಮತ್ತು ದುರಂತ ಹಡಗು ಮುಳುಗುವಿಕೆಯನ್ನು ವಿವರಿಸುವ ಪ್ರದರ್ಶನದಲ್ಲಿ ಅವರ ವೈಯಕ್ತಿಕ ವಸ್ತುವೊಂದು ಸೇರ್ಪಡೆಯಾಯಿತು.
ಬೋಸ್ಟನ್ ಜನರು ಗಡಿಯಾರದ ವಾಪಸಾತಿಯನ್ನು ಹಬ್ಬದಂತೆ ಆಚರಿಸಿದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. 2025 ರ ಮೇ 24ರಂದು ಇಂಗ್ರಾಮ್ ಅವರ ಜೀವನ ಮತ್ತು ಪರಂಪರೆಯನ್ನು ಆಚರಿಸುವ ಕಾರ್ಯಕ್ರಮಗಳನ್ನು ನಡೆಸಲಾಯಿತು. ಗಡಿಯಾರ ವಾಪಸ್ ಪಡೆದ ಭಾವನಾತ್ಮಕ ಮತ್ತು ಐತಿಹಾಸಿಕ ಮಹತ್ವವನ್ನು ಪರಿಗಣಿಸಿ ಕೌನ್ಸಿಲರ್ ಸಾರಾ ಶಾರ್ಪ್ ಈ ಘಟನೆಯನ್ನು 'ವಿಶೇಷ ಮತ್ತು ಮಹತ್ವದ ಘಟನೆ' ಎಂದು ಬಣ್ಣಿಸಿದರು. ಇಂಗ್ರಾಮ್ ಅವರ ಸಮಾಧಿ ಮತ್ತು ಸ್ಮಾರಕ ಪ್ರತಿಮೆ ಬಳಿ ನಡೆದ ಕಾರ್ಯಕ್ರಮಗಳು, ಅವರ ಸಾಧನೆಗಳು ಮತ್ತು ಲೇಡಿ ಎಲ್ಜಿನ್ ದುರಂತದಲ್ಲಿ ಸಂಭವಿಸಿದ ಜೀವಹಾನಿಯನ್ನು ಸ್ಮರಿಸುವ ಕಾರ್ಯಕ್ರಮಗಳನ್ನು ನಡೆಸಲಾಯಿತು.
