ಬರ್ಲಿನ್(ಜ.25): ವಿಶ್ವವೇ ಕೊರೋನಾ ಹೊಡೆತಕ್ಕೆ ಬಳಲಿದೆ. ಇದೀಗ ಲಸಿಕೆ ಲಭ್ಯವಾಗಿರುವುದರಿಂದ ವಿತರಣೆ ಕಾರ್ಯಗಳು ನಡೆಯುತ್ತಿದೆ. ಇದೀಗ ಜರ್ಮನಿಯಲ್ಲಿ ಕೊರೋನಾ ಕುರಿತು ಮಹತ್ವದ ವಿಡಿಯೋ ಮೀಟಿಂಗ್‌ನಲ್ಲಿ ಜನಪ್ರತಿನಿಧಿ ಕ್ಯಾಂಡಿ ಕ್ರಶ್ ಗೇಮ್ ಆಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಾರ್ವಜನಿಕವಾಗಿ ಕೊರೋನಾಗೆ ವಾಮಾಚಾರ ಮದ್ದು ಎಂದಿದ್ದ ಆರೋಗ್ಯ ಸಚಿವೆಗೆ ಪಾಸಿಟೀವ್!.

ಜರ್ಮನಿ ಚಾನ್ಸೆಲರ್ ಎಂಜೆಲ್ ಮಾರ್ಕೆಲ್ ಕೊರೋನಾ ನಿಯಂತ್ರಣ ಕುರಿತು ತೆಗೆದುಕೊಳ್ಳಬೇಕಾದ ಕಟ್ಟು ನಿಟ್ಟಿನ ಕ್ರಮ, ಕೊರೋನಾ ಲಸಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ವಿಡಿಯೋ ಮೀಟಿಂಗ್ ಆಯೋಜಿಸಿದ್ದರು. ಈ ವೇಳೆ ಈಸ್ಟರ್ನ್ ಥರಿಂಗಿಯಾ ಸ್ಟೇಟ್ ನಾಯಕ, ಡೈ ಲಿಂಕೆ ಎಡಪಕ್ಷದ ಮುಖಂಡ ಬೊಡೊ ರಮೆಲೊ ತಮ್ಮ ಮೊಬೈಲ್ ಮೂಲಕ ಕ್ಯಾಂಡಿ ಕ್ರಶ್ ಆಡಿದ್ದಾರೆ.

ಈ ವಿಚಾರವನ್ನು ತಾವೇ ಬಹಿರಂಗ ಪಡಿಸಿದ್ದಾರೆ ಎಂದು ಜರ್ಮನಿ ಮಾಧ್ಯಮಗಳು ವರದಿ ಮಾಡಿದೆ. ವಿಡಿಯೋ ಮೀಟಿಂಗ್‌ನಲ್ಲಿ ಹಲವು ನಾಯಕರು ವಿಡಿಯೋ ಆಫ್ ಮಾಡಿ ಚೆಸ್, ಸುಡೊಕೋ ಸೇರಿದಂತೆ ಹಲವು ಗೇಮ್ ಆಡುತ್ತಾರೆ. ನಾನು ಕ್ಯಾಂಡಿ ಕ್ರಶ್ ಆಡುತ್ತೇನೆ ಎಂದಿದ್ದಾರೆ. 

ಈ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ರಮೆಲೊ ಕ್ಷಮೆ ಯಾಚಿಸಿದ್ದಾರೆ. ಇತ್ತ ಚಾನ್ಸೆಲರ್ ಎಂಜೆಲ್ ಮಾರ್ಕೆಲ್ ಆಕ್ರೋಶ ವ್ಯಕ್ತಪಡಿಸಿದ್ದು, ಜನರ ನೋವಿಗೆ ಸ್ಪಂದಿಸಬೇಕಾಗಿರುವುದು ಜನ ನಾಯಕರ ಕರ್ತವ್ಯ. ಮಹತ್ವದ ಸಭೆಯಲ್ಲಿ ಈ ರೀತಿ ಗೇಮ್ ಆಡುವುದು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದಿದ್ದರು.