* ಹಲವಾರು ಸುಲಿಗೆ ಕೇಸಲ್ಲಿ ಬೇಕಾಗಿದ್ದ ಆರೋಪಿ* ಕರ್ನಾಟಕ ಮೂಲದ ಗ್ಯಾಂಗ್‌ಸ್ಟರ್ ಸುರೇಶ್ ಫಿಲಿಪ್ಪೀನ್ಸಿಂದ ಗಡೀಪಾರು
ಮುಂಬೈ(ಡಿ.16): ಹಲವಾರು ಸುಲಿಗೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ, ಕರ್ನಾಟಕ ಮೂಲದ ಗ್ಯಾಂಗ್‌ಸ್ಟರ್ ಸುರೇಶ್ ಪೂಜಾರಿಯನ್ನು ಬುಧವಾರ ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಈತನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ವಶಕ್ಕೆ ಪಡೆದುಕೊಂಡಿದೆ. 15 ವರ್ಷಗಳ ಹಿಂದೆ ಪರಾರಾಯಾಗಿದ್ದ ಈತನನ್ನು ಕಳೆದ ಅಕ್ಟೋಬರ್‌ನಲ್ಲಿ ಫಿಲಿಪ್ಪೀನ್ಸ್ ಪೊಲೀಸರು ಬಂಧಿಸಿದ್ದರು.
ಸುರೇಶ್ ಪೂಜಾರಿಯ ವಿರುದ್ಧ ಮುಂಬೈ, ಥಾಣೆ, ಕಲ್ಯಾಣ್, ಉಲ್ಲಾಸ್‌ನಗರ್ ಮತ್ತು ದೋಂಬಿವಿಲಿ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಫಿಲಿಪ್ಪೀನ್‌ನಿಂದ ಗಡೀಪಾರು ಮಾಡಿದ ನಂತರ ಐಬಿ ಮತ್ತು ಸಿಬಿಐ ಅಧಿಕಾರಿಗಳು ದೆಹಲಿಯಲ್ಲಿ ಸುರೇಶ್‌ನನ್ನು ವಶಕ್ಕೆ ಪಡೆದಿದ್ದರು. ನಂತರ ಥಾಣೆ ಕೋರ್ಟಿನ ಎದುರು ಹಾಜರುಪಡಿಸಿ 10 ದಿನಗಳ ಕಾಲ ಕಸ್ಟಡಿಗೆ ಪಡೆದು ಮುಂಬೈ ಎಟಿಎಸ್‌ಗೆ ವರ್ಗಾಯಿಸಲಾಯಿತು. ಈತನ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಮುಂಬೈ ಎಟಿಸ್ ತನಿಖೆ ನಡೆಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರವಿ ಪೂಜಾರಿ ಮತ್ತು ಛೋಟಾ ರಾಜನ್‌ನೊಂದಿಗೆ ಕೆಲಸ ಮಾಡುತ್ತಿದ್ದ ಸುರೇಶ್ ಪೂಜಾರಿ ನಂತರ ತನ್ನದೇ ಗ್ಯಾಂಗ್ ಕಟ್ಟಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ. ಈತನ ವಿರುದ್ಧ 2017 ಮತ್ತು 2018ರಲ್ಲಿ ಮುಂಬೈ ಮತ್ತು ಥಾಣೆ ಪೊಲೀಸರು ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ್ದರು.
