ಸಂಶೋಧನೆ ಹೆಸರಲ್ಲಿ ಚೀನಾ ವಿದ್ಯಾರ್ಥಿಗಳ ಗೂಢಚರ್ಯೆ?
ಸಂಶೋಧನೆ ಹೆಸರಲ್ಲಿ ಚೀನಾ ವಿದ್ಯಾರ್ಥಿಗಳ ಗೂಢಚರ್ಯೆ?| ಬಂಧಿತರು, ಸಂಶೋಧನಾ ವಿದ್ಯಾರ್ಥಿಗಳ ರೂಪದಲ್ಲಿ ಅಮೆರಿಕಕ್ಕೆ ಆಗಮಿಸಿದ್ದರು| ಈ ತಂಡದ ಇನ್ನೊಬ್ಬ ಪರಾರಿ
ವಾಷಿಂಗ್ಟನ್(ಜು.26): ಕೊರೋನಾ ಲಸಿಕೆ ಸಂಶೋಧನೆ ಕುರಿತ ತನ್ನ ದೇಶದ ಸಂಶೋಧನಾ ಮಾಹಿತಿಯನ್ನು ಚೀನಾ ಕದಿಯುತ್ತಿದೆ ಎಂದು ಆರೋಪಿಸಿದ್ದ ಅಮೆರಿಕ, ಇದೀಗ ಗೂಢಚರ್ಯೆ ಆರೋಪದ ಮೇಲೆ ಚೀನಾದ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿದೆ. ಬಂಧಿತರು, ಸಂಶೋಧನಾ ವಿದ್ಯಾರ್ಥಿಗಳ ರೂಪದಲ್ಲಿ ಅಮೆರಿಕಕ್ಕೆ ಆಗಮಿಸಿ ಇಲ್ಲಿ ಚೀನಾ ಸೇನೆಯ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದರು. ಈ ತಂಡದ ಇನ್ನೊಬ್ಬ ಪರಾರಿಯಾಗಿದ್ದು, ಆತನಿಗೆ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿನ ಚೀನಾ ರಾಯಭಾರ ಕಚೇರಿಯಲ್ಲಿ ಆಶ್ರಯ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇದೇ ರೀತಿಯ ಸಂಶಯ ಹೊಂದಿರುವ ನೂರಾರು ವಿದ್ಯಾರ್ಥಿಗಳ ಮೇಲೆ ಅಮೆರಿಕ ಕಣ್ಗಾವಲು ಇಟ್ಟಿದೆ. 25ಕ್ಕೂ ಹೆಚ್ಚು ನಗರಗಳಲ್ಲಿನ ಅನುಮಾನಾಸ್ಪದ ವಿದ್ಯಾರ್ಥಿಗಳನ್ನು ಅಮೆರಿಕದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುವ ಮೂಲಕ, ಗೂಢಚಾರಿಕೆ ಜಾಲವನ್ನು ಬಯಲಿಗೆಳೆಯುವ ಯತ್ನ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಚೀನಾ ಸೇನೆ, ಅಮೆರಿಕದಲ್ಲಿನ ತನ್ನ ದೇಶದ ವಿದ್ಯಾರ್ಥಿಗಳನ್ನು ಗೂಢಚಾರಿಕೆಗೆ ಬಳಸಿಕೊಳ್ಳುತ್ತಿದೆ ಎಂಬ ಗಂಭೀರ ಆರೋಪವಿದೆ.