ಸಿರಿಯಾ ಕಲಹದ ವೇಳೆ ಐಸಿಸ್‌ ಉಗ್ರರಿಗೆ ಫ್ರಾನ್ಸ್‌ ಸಿಮೆಂಟ್‌ ಕಂಪನಿ ಧನಸಹಾಯ ಮಾಡಿರುವುದಾಗಿ ಅಮೆರಿಕ ಕೋರ್ಟ್‌ ಮುಂದೆ ಲಫಾರ್ಗೆ ಹೇಳಿಕೆ ನೀಡಿದೆ. ಅಲ್ಲದೆ, ಈ ಸಂಬಂಧ 6300 ಕೋಟಿ ರೂ. ದಂಡ ಕಟ್ಟಲು ಒಪ್ಪಿಗೆ ನೀಡಿದೆ.  

ನ್ಯೂಯಾರ್ಕ್: ಫ್ರಾನ್ಸ್‌ನ (France) ದೊಡ್ಡ ಸಿಮೆಂಟ್‌ ತಯಾರಕ ಕಂಪನಿಯಾದ (Cement Company) ‘ಲಫಾರ್ಗೆ’ (Lafarge), ಇಸ್ಲಾಮಿಕ್‌ ಸ್ಟೇಟ್‌ (Islamic State) (ಐಸಿಸ್‌) (ISIS) ಸೇರಿದಂತೆ ಅಮೆರಿಕದಿಂದ ನಿಷೇಧಕ್ಕೆ ಒಳಗಾಗಿರುವ ಹಲವು ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ನೆರವು ನೀಡಿದ್ದಾಗಿ ಅಮೆರಿಕ ಕೋರ್ಚ್‌ ಒಂದರ ಮುಂದೆ ಒಪ್ಪಿಕೊಂಡಿದೆ. ಅಮೆರಿಕದಲ್ಲಿ ಕಂಪನಿಯೊಂದು ಉಗ್ರರಿಗೆ ನೆರವು ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದು ಇದೇ ಮೊದಲು. ಬ್ರೂಕ್ಲಿನ್‌ ಫೆಡರಲ್‌ ನ್ಯಾಯಾಲಯದಲ್ಲಿ ಕಂಪನಿಯು ಈ ಹೇಳಿಕೆ ನೀಡಿದೆ. ಇದರ ಜತೆಗೆ ತನ್ನ 687 ಡಾಲರ್‌ ಆಸ್ತಿ ಜಪ್ತಿ ಮಾಡಲು ಕೋರಿದೆ ಹಾಗೂ 90 ದಶಲಕ್ಷ ಡಾಲರ್‌ ದಂಡ ಕಟ್ಟಲೂ ಒಪ್ಪಿಕೊಂಡಿದೆ. ಅಂದರೆ ಒಟ್ಟಾರೆ 6300 ಕೋಟಿ ರೂ. ದಂಡವಾಗಿ ಕಟ್ಟಲು ಕಂಪನಿ ಸಮ್ಮತಿಸಿದೆ.

ಸಿರಿಯಾ ಕಲಹದ ವೇಳೆ ಉಗ್ರರಿಗೆ ಹಣಕಾಸು ನೆರವಿನ ತಪ್ಪೊಪ್ಪಿಗೆ
ಈ ಹಿಂದೆ, ಫ್ರಾನ್ಸ್‌ನ ಹೋಲ್ಸಿಂ (Holcim) ಕಂಪನಿ ಜತೆ ಒಡಂಬಡಿಕೆ ಮಾಡಿಕೊಂಡು ಸಿರಿಯಾದಲ್ಲಿ (Syria) ಲಫಾರ್ಗೆ ಸಿಮೆಂಟ್‌ ಘಟಕ ನಡೆಸುತ್ತಿತ್ತು. ಸಿರಿಯಾ ಅಂತಃಕಲಹದ ವೇಳೆ ಕಂಪನಿಯನ್ನು ಬಚಾವು ಮಾಡಿಕೊಳ್ಳಲು ಮಾನವತೆ ಮೇಲೆ ದೌರ್ಜನ್ಯ ಎಸಗಿದ ಆರೋಪವನ್ನು ಲಫಾರ್ಗೆ ಹೊತ್ತಿತ್ತು. ಆದರೆ ಈ ಆರೋಪ ನಿರಾಕರಿಸಿದ್ದ ಕಂಪನಿ, ತನ್ನ ಕಂಪನಿಯ ಸಿಬ್ಬಂದಿಯನ್ನು ರಕ್ಷಿಸಿಕೊಳ್ಳಲು ಮಾತ್ರ ಉಗ್ರರಿಗೆ ಹಣ ನೀಡಿದ್ದಾಗಿ ಒಪ್ಪಿಕೊಂಡಿತ್ತು. ಈ ರೀತಿ ಕಂಪನಿಯು ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿ ಹೇಳಿಕೊಂಡಿದ್ದು ಈಗ 2ನೇ ಸಲ.
2013ರ ಆಗಸ್ಟ್‌ನಿಂದ 2014ರ ನವೆಂಬರ್‌ವರೆಗೆ ತನ್ನ ಅಂದಿನ ಅಧಿಕಾರಿಗಳು ಸಿರಿಯಾದಲ್ಲಿನ ಹಲವಾರು ಉಗ್ರ ಸಂಘಟನೆಗಳಿಗೆ ಬೇಕೆಂದೇ ಹಣ ನೀಡಿದ್ದರು. ಆದರೆ 2017ರಲ್ಲೇ ಇವರೆಲ್ಲ ಕಂಪನಿ ಬಿಟ್ಟು ಹೋದರು ಎಂದು ಲಾಫಾರ್ಗೆ ಹೇಳಿದೆ. ಆದರೆ ಹೋಲ್ಸಿಂ ಕಂಪನಿ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದು, ‘ನಾವು ಇದರಲ್ಲಿ ಭಾಗಿ ಆಗಿಲ್ಲ. ನಮ್ಮಿಂದ ಎಲ್ಲ ವಿಷಯ ಮುಚ್ಚಿಟ್ಟು ಲಫಾರ್ಗೆ ಇಂಥ ವ್ಯವಹಾರ ನಡೆಸಿದೆ’ ಎಂದು ಹೇಳಿಕೊಂಡಿದೆ.

ಇದನ್ನು ಓದಿ: ಗುಜರಾತ್‌ ಚುನಾವಣೆಗೆ ಅಡ್ಡಿ ಮಾಡಲು ಐಸಿಸ್‌ನಿಂದ ಗಲಭೆ?

ಈ ಹಿಂದೆ ಫ್ರಾನ್ಸ್‌ನ ಮಾನವ ಹಕ್ಕು ಸಂಸ್ಥೆಯೊಂದು ಐಸಿಸ್‌ಗೆ ಲಫಾರ್ಗೆ, 13 ದಶಲಕ್ಷ ಡಾಲರ್‌ ನೀಡಿದ ಆರೋಪ ಹೊರಿಸಿತ್ತು.

ಇದನ್ನೂ ಓದಿ: ಬಿಜೆಪಿಯ ಪ್ರಮುಖ ರಾಜಕೀಯ ನಾಯಕನ ಹತ್ಯೆಗೆ ಸ್ಕೆಚ್‌: ರಷ್ಯಾದಲ್ಲಿ ಐಸಿಸ್‌ ಉಗ್ರ ವಶಕ್ಕೆ