ವಾಷಿಂಗ್ಟನ್(ಅ.14): ತಮ್ಮ ಮೃಗಾಲಯದ ಹೆಣ್ಣು ನೀರಾನೆ ಕ್ಲಿಯೋಪಾತ್ರ 5 ಕೆಜಿ ತೂಕ ಹೊಂದಿರುವ ಪುಟ್ಟ ಗಂಡು ನೀರಾನೆಗೆ ಜನ್ಮ ನೀಡಿರುವುದಾಗಿ ಫ್ರ್ಯಾಂಕ್ಲಿನ್ ಪಾರ್ಕ್ ಜೂ ಘೋಷಿಸಿದೆ.

ಅನೇಕ ವರ್ಷಗಳಿಂದ ಕ್ಲಿಯೋಪಾತ್ರದ ಆರೈಕೆ ಮಾಡಿ, ಕಾಳಜಿ ತೋರಿ ಶ್ರಮಿಸಿದ ಸಿಬ್ಬಂದಿಗೆ ಇದೊಂದು ಅತ್ಯಂತ ಆನಂದದ ಕ್ಷಣವಾಗಿದೆ ಎಂದು ಮೃಗಾಲಯ ಹೊರಡಿಸಿರುವ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಲ್ಲದೇ ಕಳೆದ ಸೋಮವಾರ ಜನಿಸಿದ ಈ ಪುಟ್ಟ ನೀರಾನೆ ಮೃಗಾಲಯದಲ್ಲಿ ಜನಿಸಿದ ಮೊದಲ ಗಂಡು ನೀರಾನೆ ಎಂಬುವುದು ಮತ್ತಷ್ಟು ವಿಶೇಷ ಎಂದೂ ಇದರಲ್ಲಿ ತಿಳಿಸಲಾಗಿದೆ.

ಮೃಗಾಲಯಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿರುವ ಈ ಪುಟ್ಟ ನೀರಾನೆ ಸದ್ಯ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟಉ ಮೃಗಾಲಯದಲ್ಲಿ ಓಡಾಡುತ್ತಾ ಎಲ್ಲರನ್ನೂ ರಂಜಿಸುತ್ತಿದೆ. ಅಲ್ಲದೇ ಇದು ಸಿಕ್ಕಾಪಟ್ಟೆ ಆಕ್ಟಿವ್ ಆಗಿದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. 

ಮಾರ್ಚ್‌ನಲ್ಲಿ ಕ್ಲಿಯೋ ಗರ್ಭಿಣಿಯಾಗಿದ್ದಾಳೆಂದು ತಿಳಿದು ಬಂದಿದ್ದು, ಇದಾದ ಬಳಿಕ ಮರಿಯ ಬಳವಣಿಗೆಯ ಮೇಲೆ ನಿಗಾ ಇಡಲು ಪ್ರತಿ ದಿನ ಅಲ್ಟ್ರಾಸೌಂಡ್ ಮಾಡುತ್ತಿದ್ದೆವೆಂದೂ ವೈದ್ಯರು ತಿಳಿಸಿದ್ದಾರೆ.