ಫ್ರಾನ್ಸ್ ಹಿಂಸಾಚಾರ ಕಂಡು ಕೇಳರಿಯದ ಮಟ್ಟಕ್ಕೆ ತಲುಪಿದೆ. ಸಿಕ್ಕ ಸಿಕ್ಕ ಕಡೆ ದಾಳಿಯಾಗುತ್ತಿದೆ. ಕಟ್ಟಡಗಳು ಬೆಂಕಿಗೆ ಆಹುತಿಯಾಗಿದೆ. ವಸ್ತುಗಳು, ವಾಹನಗಳು ಕಳುವಾಗುತ್ತಿದೆ. ಗಲಭೆಕೋರರು ಪೆಟ್ರೋಲ್ ಬಾಂಬ್, ಕಲ್ಲು, ಬಡಿಗೆ ಮೂಲಕ ದಾಳಿ ಮಾಡುತ್ತಿದ್ದಾರೆ. ಇತ್ತ ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸುತ್ತಿದೆ. ಇದರ ನಡುವೆ ವ್ಯಕ್ತಿಯೊಬ್ಬರು ಯಾವುದೇ ಆತಂಕ, ದುಗುಡವಿಲ್ಲದೆ ಸ್ಯಾಂಡ್‌ವಿಚ್ ತಿನ್ನುತ್ತಾ ಕುಳಿತಿರುವ ವಿಡಿಯೋ ವೈರಲ್ ಆಗಿದೆ. 

ಫ್ರಾನ್ಸ್(ಜು.03) ಫ್ರಾನ್ಸ್ ಹಿಂಸಾಚಾರಕ್ಕೆ ದೇಶದ ಪ್ರಮುಖ ಭಾಗಗಳು ಸುಟ್ಟು ಭಸ್ಮವಾಗಿದೆ. ಕಲ್ಲು ತೂರಾಟ, ಬೆಂಕಿ, ದಾಳಿ, ಗುಂಡಿನ ಚಕಮಕಿಗಳು ನಡೆಯುತ್ತಿದೆ. ಗಲಭೆಕೋರರು ಸಿಕ್ಕ ಸಿಕ್ಕ ಶಾಪಿಂಗ್ ಮಾಲ್‌ ಮೇಲೆ ದಾಳಿ ಮಾಡಿ ವಸ್ತುಗಳು, ವಾಹನಗಳನ್ನು ಕದ್ದೊಯ್ಯುತ್ತಿದ್ದಾರೆ. ಹಿಂಸಾಚಾರ, ಗಲಭೆ ಹತ್ತಿಕ್ಕಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಇದೀಗ ಗಲಭೆಕೋರರು ಭದ್ರತಾ ಪಡೆ ಮೇಲೆ ದಾಳಿ ಮಾಡುತ್ತಿದ್ದಾರೆ. ಹೀಗಾಗಿ ಭದ್ರತಾ ಪಡೆ ಮೇಲೆ ದಾಳಿಗೆ ಮುಂದಾಗ ಗಲಭೆಕೋರರತ್ತ ಗುಂಡಿನ ದಾಳಿ ನಡೆಸಿದೆ. ಇತ್ತ ಗಲಭೆಕೋರರು ಪ್ರತಿದಾಳಿ ನಡೆಸಿದ್ದಾರೆ. ಆದರೆ ಭೀಕರ ಕಾಳಗ ನಡೆಯುತ್ತಿರುವ ಮಧ್ಯದಲ್ಲೇ ವ್ಯಕ್ತಿಯೊಬ್ಬ ಸ್ಯಾಂಡ್‌ವಿಚ್ ತಿನ್ನುತ್ತಾ ಕುಳಿತಿರುವ ವಿಡಿಯೋ ವೈರಲ್ ಆಗಿದೆ.

ಕಟ್ಟಡಗಳ ಬಳಿ ಭದ್ರತಾ ಪಡೆಗಳು ನಿಂತಿದೆ. ವಿರುದ್ಧವಾಗಿ ರಸ್ತೆಯಲ್ಲಿ ಗಲಭೆಕೋರರು ಕಲ್ಲು ತೂರಾಟ ನಡೆಸುತ್ತಿದ್ದಾರೆ. ಕೆಲವರು ಪಿಸ್ತೂಲ್ ಮೂಲಕವೂ ದಾಳಿ ಮಾಡುತ್ತಿದ್ದಾರೆ. ಗಲಭೆಕೋರರು ಒಂದೊಂದೆ ಹೆಜ್ಜೆ ಮುಂದಿಡುತ್ತಾ ದಾಳಿ ಮಾಡುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆ ಗುಂಡಿನ ದಾಳಿ ನಡೆಸಿದೆ. ಈ ಭದ್ರತಾ ಪಡೆ ಹಾಗೂ ಗಲಭೆಕೋರರ ನಡುವೆ ದಾರಿಯಲ್ಲಿ ಸಣ್ಣ ಕಂಟೈನರ್ ರೀತಿಯ ವಸ್ತುವಿದೆ. ಇದರ ಕಟ್ಟೆಯ ಮೇಲೆ ಭದ್ರತಾ ಪಡೆಗೆ ಮುಖ ಮಾಡಿ ಕುಳಿತ ವ್ಯಕ್ತಿ ಯಾವುದೇ ಆತಂಕ ವಿಲ್ಲದ ಹಾಯಾಗಿ ಸ್ಯಾಂಡ್‌ವಿಚ್ ಸವಿದಿದ್ದಾನೆ.

Scroll to load tweet…

ಸ್ವಿಜರ್ಲೆಂಡ್‌ಗೂ ಹಬ್ಬಿದ ಹಿಂಸಾಜ್ವಾಲೆ: ಫ್ರಾನ್ಸ್‌ನಲ್ಲಿ ನಿಲ್ಲದ ಕಿಚ್ಚು, ಸಾಮಾಜಿಕ ಜಾಲತಾಣ ಮೂಲಕ ಹೋರಾಟದ ಬೆಂಕಿಗೆ ತುಪ್ಪ

ಒಂದಡೆ ಗುಂಡಿನ ಶಬ್ದಗಳು, ಪ್ರತಿದಾಳಿಗಳು ಕೇಳಿಸುತ್ತಿದೆ. ಆದರೆ ಈ ವ್ಯಕ್ತಿ ಮಾತ್ರ ಯಾವುದೇ ಅಂಜಿಕೆ ಇಲ್ಲದೆ ಆಹಾರ ಸವಿದಿದ್ದಾನೆ. ಪಕ್ಕದ ಕಟ್ಟದ ಮೇಲಿನಿಂದ ಈ ವಿಡಿಯೋ ಮಾಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಹಲವು ಪ್ರತಿಕ್ರಿಯೆಗಳು ಬಂದಿದೆ. ಇದು ಹಸಿವೋ ಅಥವಾ ಭಂಡ ಧೈರ್ಯವೋ ಎಂದು ಕೆಲವರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಫ್ರಾನ್ಸ್‌ನಲ್ಲಿ ಎಲ್ಲಿ ನೋಡಿದರೂ ಗಲಭೆ, ಮನೆಯೊಳಗೆ ಕುಳಿತರೂ ದಾಳಿಯಾಗುತ್ತಿದೆ. ಹೀಗಾಗಿ ಪ್ರತಿ ದಿನ ಗಲಭೆ ನೋಡುತ್ತಿರುವ ವ್ಯಕ್ತಿಗೆ ಹಿಂಸಾಚಾರ ಸಾಮಾನ್ಯವಾಗಿ ಬಿಟ್ಟಿದೆ. ಹೀಗಾಗಿ ಎಲ್ಲಾದರೂ ಸರಿ ಹಸಿವು ನೀಗಿಸಿಕೊಂಡರೆ ಸಾಕು ಅಷ್ಟೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮುಸ್ಲಿಂ ಯುವಕನ ಶೂಟೌಟ್‌ ಬಳಿಕ ಫ್ರಾನ್ಸ್‌ ಧಗಧಗ: 4 ದಿನಗಳಿಂದ ಗಲಭೆ; 2500 ಕಾರು, ಕಟ್ಟಡಕ್ಕೆ ಬೆಂಕಿ, 2400 ಜನರ ಸೆರೆ

ಈ ನಡುವೆ, ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಬೇಡಿ ಎಂಬ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರೋನ್‌ ಅವರು ಮನವಿ ಮಾಡುತ್ತಿದ್ದರೂ, ಯುವ ಪ್ರತಿಭಟನಾಕಾರರು ಪೊಲೀಸರ ಜತೆ ಸಂಘರ್ಷಕ್ಕೆ ಇಳಿಯುತ್ತಿದ್ದಾರೆ. ದೇಶಾದ್ಯಂತ ಹಿಂಸಾಚಾರ ನಿಯಂತ್ರಣಕ್ಕೆ 40000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.ಪೊಲೀಸರ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯ ವೇಳೆ ಮಾರ್ಸೆಯಲ್ಲಿರುವ ಅತಿದೊಡ್ಡ ಸಾರ್ವಜನಿಕ ಗ್ರಂಥಾಲಯಕ್ಕೆ ಬೆಂಕಿ ಹಚ್ಚಲಾಗಿದೆ. ಲೈಬ್ರರಿ ಹೊತ್ತಿ ಉರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಇದರಿಂದಾಗಿ ಸಂಸ್ಕೃತಿ, ಜ್ಞಾನ ಮತ್ತು ಸಂಪನ್ಮೂಲಗಳು ನಾಶವಾಗಿದೆ ಎಂದು ಫ್ರಾನ್ಸ್‌ ಆಡಳಿತ ಹೇಳಿದೆ.