ರೋಮ್(ಡಿ.,24)‌: ಜಗತ್ತನ್ನು ಆತಂಕಕ್ಕೆ ದೂಡುವ ವಿದ್ಯಮಾನವೊಂದರಲ್ಲಿ ಇದೇ ಮೊದಲ ಬಾರಿ ಮಾಸುಚೀಲ ಅಥವಾ ಹೊಕ್ಕುಳ ಬಳ್ಳಿ (ಪ್ಲೇಸೆಂಟಾ)ಯಲ್ಲಿ ಮೈಕ್ರೋಪ್ಲಾಸ್ಟಿಕ್‌ ಪತ್ತೆಯಾಗಿದೆ. ಇಟಲಿಯಲ್ಲಿ ನಡೆದ ಅಧ್ಯಯನವೊಂದರಲ್ಲಿ ಈ ಅಂಶ ಹೊರಬಿದ್ದಿದ್ದು, ಸರ್ವವ್ಯಾಪಿಯಾಗಿರುವ ಪ್ಲಾಸ್ಟಿಕ್‌ ಹೊಕ್ಕುಳ ಬಳ್ಳಿಗೆ ಪ್ರವೇಶಿಸಿದ್ದು ಹೇಗೆ ಎಂದು ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದಾರೆ.

ಮೈಕ್ರೋಪ್ಲಾಸ್ಟಿಕ್‌ ಅಂದರೆ ಪ್ಲಾಸ್ಟಿಕ್‌ನ 5 ಮಿ.ಮೀ.ಗಿಂತ ಸಣ್ಣ ಚೂರುಗಳು. ಹೊಕ್ಕುಳಬಳ್ಳಿಯು ಭ್ರೂಣಕ್ಕೆ ಆಹಾರ, ರಕ್ತ ಹಾಗೂ ಆಮ್ಲಜನಕ ಒದಗಿಸುವ ಮತ್ತು ಗರ್ಭಕೋಶದಿಂದ ತ್ಯಾಜ್ಯವನ್ನು ಹೊರಹಾಕುವ ಕೆಲಸ ಮಾಡುತ್ತದೆ. ಇಲ್ಲಿ ಮೈಕ್ರೋಪ್ಲಾಸ್ಟಿಕ್‌ ಪತ್ತೆಯಾಗಿದೆ ಅಂದರೆ ಅದು ಮಗುವಿನ ದೇಹಕ್ಕೂ ಹೋಗಿರುತ್ತದೆ. ಅಂದರೆ ಈಗ ಮಕ್ಕಳು ಸಂಪೂರ್ಣವಾಗಿ ಸಾವಯವ ಪದಾರ್ಥಗಳನ್ನು ಮಾತ್ರ ದೇಹದಲ್ಲಿಟ್ಟುಕೊಂಡು ಹುಟ್ಟುತ್ತಿಲ್ಲ, ಬದಲಿಗೆ ಅಸಾವಯವ ವಸ್ತುಗಳನ್ನೂ ದೇಹದಲ್ಲಿಟ್ಟುಕೊಂಡು ಹುಟ್ಟುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇಟಲಿಯಲ್ಲಿ ಹೊಕ್ಕುಳ ಬಳ್ಳಿಯನ್ನು ದಾನ ಮಾಡಲು ಮುಂದಾದ ಆರು ಮಹಿಳೆಯರ ಪೈಕಿ ನಾಲ್ಕು ಮಹಿಳೆಯರ ಹೊಕ್ಕುಳ ಬಳ್ಳಿಯಲ್ಲಿ ಮೈಕ್ರೋಪ್ಲಾಸ್ಟಿಕ್‌ ಪತ್ತೆಯಾಗಿದೆ. ಹೊಕ್ಕುಳ ಬಳ್ಳಿಗೆ ಪ್ಲಾಸ್ಟಿಕ್‌ ಹೋಗಬೇಕು ಅಂದರೆ ಅದು ಮಹಿಳೆಯ ರಕ್ತದಲ್ಲೇ ಸೇರಿರಬೇಕು. ಕೇವಲ ಹೊಟ್ಟೆಗೆ ಪ್ಲಾಸ್ಟಿಕ್‌ ಹೋಗಿದ್ದರೆ ಅದು ಮಲದಲ್ಲಿ ಹೊರಹೋಗುತ್ತದೆ. ಹೀಗಾಗಿ ರಕ್ತದ ಪ್ರವಾಹಕ್ಕೆ ಮೈಕ್ರೋಪ್ಲಾಸ್ಟಿಕ್‌ ಹೇಗೆ ಸೇರಿಕೊಂಡಿತು ಎಂಬ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಹೊಕ್ಕುಳ ಬಳ್ಳಿ ಅಥವಾ ಮಗುವಿನ ದೇಹದಲ್ಲಿ ಮೈಕ್ರೋಪ್ಲಾಸ್ಟಿಕ್‌ ಸೇರಿಕೊಂಡರೆ ಮುಂದೆ ಅದು ನಾನಾ ರೀತಿಯ ಅನಾರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಮಣ್ಣಿನಲ್ಲಿ ಪ್ಲಾಸ್ಟಿಕ್‌ ಎಷ್ಟುವರ್ಷವಾದರೂ ಕರಗುವುದಿಲ್ಲ, ಬದಲಿಗೆ ಸಣ್ಣ ಸಣ್ಣ ಚೂರಾಗುತ್ತದೆ. ಅದು ನೀರು, ಆಹಾರ, ಸಮುದ್ರ ಜೀವಿಗಳು, ಪ್ರಾಣಿ ಹಾಗೂ ಮನುಷ್ಯನ ದೇಹ ಸೇರಿ ಸಾಕಷ್ಟುಸಮಸ್ಯೆ ಉಂಟುಮಾಡುತ್ತಿದೆ. ಈಗ ಅದು ಹೊಕ್ಕುಳ ಬಳ್ಳಿಯಲ್ಲೂ ಪತ್ತೆಯಾಗಿರುವುದರಿಂದ ಪ್ಲಾಸ್ಟಿಕ್‌ನ ಮಾರಕತೆ ಇನ್ನೊಂದು ಮಜಲಿಗೆ ಏರಿದಂತಾಗಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.