How Brazil's Bolsonaro Fled To US: ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುಂಡ ಬಲಪಂಥೀಯ ನಾಯಕ ಫ್ಲಾವಿಯೊ ಬೊಲ್ಸೊನಾರೋ ಸುಪ್ರೀಂ ಆದೇಶ ಲೆಕ್ಕಿಸದೆ ಅಮೆರಿಕಕ್ಕೆ ತೆರಳಿದ್ದಾರೆ. ಇಟಾಲಿಯನ್ ಪಾಸ್‌ಪೋರ್ಟ್ ಹಾಗೂ ಖಾಸಗಿ ಜೆಟ್ ಬಳಸಿ ಅವರು ರಹಸ್ಯವಾಗಿ ಮಿಯಾಮಿ ತಲುಪಿದ್ದಾರೆ ಎಂದು ವರದಿಯಾಗಿದೆ.

ವಾಷಿಂಗ್ಟನ್‌ (ಅ.30): ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಬಲಪಂಥೀಯ ನಾಯಕ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತ ಫ್ಲಾವಿಯೊ ಬೊಲ್ಸೊನಾರೋ(Flávio Bolsonaro) ಸೋಲುಂಡ ಬೆನ್ನಲ್ಲೇ, ಅಮೆರಿಕಕ್ಕೆ ಪರಾರಿಯಾಗಿದ್ದಾರೆ. ಚುನಾವಣೆ ಮುಗಿದ ಕೆಲವೇ ಗಂಟೆಗಳಲ್ಲಿ ಅವರು ಸುಪ್ರೀಂ ಕೋರ್ಟ್‌ ಆದೇಶವನ್ನೂ ಲೆಕ್ಕಿಸದೆ ದೇಶ ತೊರೆದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬ್ರೆಜಿಲ್‌ನಲ್ಲಿ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ಸೇರಿದಂತೆ ಹಲವು ಗಂಭೀರ ಆರೋಪಗಳ ತನಿಖೆಯನ್ನು ಎದುರಿಸುತ್ತಿರುವ ಬೊಲ್ಸೊನಾರೊ ದೇಶ ಬಿಟ್ಟುಹೋಗದಂತೆ ಸುಪ್ರೀಂ ಕಟ್ಟುನಿಟ್ಟಿನ ಆದೇಶ ವಿಧಿಸಿತ್ತು.

ಇಟಾಲಿಯನ್ ಪಾಸ್‌ಪೋರ್ಟ್ ಬಳಸಿ ಪರಾರಿ

ಈ ಕಾನೂನು ನಿರ್ಬಂಧಗಳನ್ನು ಮೀರಲು ಅವರು ನಕಲಿ ವ್ಯಕ್ತಿಗಳ ಮೊರೆಹೋಗಿದ್ದಾರೆ. ಇಟಾಲಿಯನ್ ಪಾಸ್‌ಪೋರ್ಟ್ ಬಳಸಿ ಮತ್ತು ಖಾಸಗಿ ಜೆಟ್ ವಿಮಾನದ ಮೂಲಕ ರಹಸ್ಯವಾಗಿ ಅಮೆರಿಕದ ಮಿಯಾಮಿ ತಲುಪಿದ್ದಾರೆ ಎಂದು ವರದಿಯಾಗಿದೆ.

ಪಲಾಯನ ಆರೋಪ ನಿರಾಕರಿಸಿದ ಫ್ಲೇವಿಯೊ ಬೋಲ್ಸನಾರೊ

ಭಾನುವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ನಂತರ ಮಿಯಾಮಿಗೆ ಬಂದಿಳಿದ ಬ್ರೆಜಿಲ್ ಸೆನೆಟರ್ ಫ್ಲೇವಿಯೊ ಬೋಲ್ಸನಾರೊ 'ನನ್ನ ತಾಯ್ನಾಡನ್ನು ತೊರೆಯುವ ಉದ್ದೇಶ ಎಂದಿಗೂ ಇರಲಿಲ್ಲ' ಎಂದು ಹೇಳಿದ್ದಾರೆ.

ನಾನು ಬ್ರೆಜಿಲ್‌ನಿಂದ ಪಲಾಯನ ಮಾಡಲಿಲ್ಲ. ದೇಶಕ್ಕಾಗಿ ನಾನು ಹೊರಡಬೇಕಾಯ್ತು ಎಂದು ಅಮೆರಿಕಕ್ಕೆ ತೆರಳಿದ ಬಳಿಕ ಈ ಹೇಳಿಕೆ ನೀಡಿದ್ದಾರೆ. ಆ ಮೂಲಕ ಚುನಾವಣೆಯಲ್ಲಿ ಸೋತ ಬಳಿಕ ಪರಾರಿಯಾಗಿದ್ದಾರೆ ಎಂಬ ಆರೋಪ ತಳ್ಳಿಹಾಕಿದ್ದಾರೆ.

ಬ್ರೆಜಿಲ್‌ನಲ್ಲಿ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ಸೇರಿದಂತೆ ಹಲವು ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ತನಿಖೆ ದೃಷ್ಟಿಯಿಂದ ಬ್ರೆಜಿಲ್ ಅವರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಿತ್ತು. ಆದರೆ ನಂತರ ಅಮೆರಿಕ ಅವರಿಗೆ, ಅವರ ಕುಟುಂಬಕ್ಕೆ ವೀಸಾಗಳನ್ನು ನೀಡಿತು. 'ಬೋಲ್ಸನಾರೊ ಯಾವುದೇ ತಪ್ಪು ಮಾಡಿಲ್ಲ. ಹೀಗಾಗ ನಾವು ಅವರಿಗೆ ಅಮೆರಿಕಕ್ಕೆ ಬರಲು ಪಾಸ್‌ಪೋರ್ಟ್ ನೀಡಿದ್ದೇವೆ' ಎಂದು ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಸಮರ್ಥಿಸಿಕೊಂಡಿದ್ದರು.

ಸದ್ಯ ಹೊಸದಾಗಿ ಪುನರಾಯ್ಕೆಯಾದ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ಬೋಲ್ಸನಾರೊ ದೇಶದಿಂದ ಕಳ್ಳ ಮಾರ್ಗದ ಮೂಲಕ ಪರಾರಿಯಾಗಿರುವುದನ್ನು ಟೀಕಿಸಿದ್ದಾರೆ. ತಪ್ಪು ಮಾಡದಿದ್ದರೆ ಪಲಾಯನ ಮಾಡಬೇಕಿರಲಿಲ್ಲ, ಯಾರಿಗೂ ಭಯ ಪಡಬೇಕಿರಲಿಲ್ಲ ಎಂದು ಟೀಕಿಸಿದ್ದಾರೆ.

ಬೊಲ್ಸನಾರೋ ಪರಾರಿಯಾಗಿದ್ದು ಹೇಗೆ?

ಬೋಲ್ಸನಾರೊ ಕಳ್ಳ ಮಾರ್ಗದ ಮೂಲಕ ಮೊದಲಿಗೆ ಅರ್ಜೆಂಟೀನಾಕ್ಕೆ ಪ್ರಯಾಣಿಸಿದ್ದಾರೆಂದು ವರದಿಯಾಯ್ತು. ಬಳಿಕ ಮಂಗಳವಾರ ಅಮೆರಿಕವನ್ನು ಪ್ರವೇಶಿಸಿದ್ದಾರೆಂದು ತಿಳಿದುಬಂತು. ಅದರ ನಂತರ ಬೋಲ್ಸನಾರೊ ಫ್ಲೋರಿಡಾಗೆ ಬಂದಿಳಿದಿದ್ದಾರೆ ಎನ್ನಲಾಗಿದೆ. ಆದರೆ ಖಚಿತವಾಗಿ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಹಲವು ದಿನಗಳ ಗೊಂದಲ ಕೊನೆಗೊಂಡಿದೆ. ಅವರು ಅಮೆರಿಕಕ್ಕೆ ಪರಾರಿಯಾಗಿರುವುದು ಖಚಿತವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬೋಲ್ಸನಾರೋ ಒಂದು ಹೇಳಿಕೆಯಲ್ಲಿ, ಅರ್ಜೆಂಟೀನಾ ಮತ್ತು ಅಮೆರಿಕ ಅಧ್ಯಕ್ಷರು ನನ್ನ ಸ್ವಂತ ದೇಶದ ಒಳ್ಳೆಯ ಜನರಂತೆ ಇದ್ದಾರೆ. ಅವರೊಂದಿಗೆ ನಾನು ಪ್ರಾಮಾಣಿಕವಾಗಿರುವೆ ಎಂದು ಅಮೆರಿಕನ್ ನಾಗರಿಕರಿಗೆ ಧನ್ಯವಾದಗಳನ್ನ ಹೇಳಿದ್ದಾರೆ.