ವಾಷಿಂಗ್ಟನ್‌(ಡಿ.16): ಕೊರೋನಾ ವೈರಸ್‌ ಸೋಂಕಿಗೆ ತುತ್ತಾಗಿ, ಚೇತರಿಸಿಕೊಂಡು ಮನೆಗೆ ಮರಳುವ ಕೊರೋನಾ ರೋಗಿಗಳಿಗೆ ಮೊದಲ 10 ದಿನ ಅತ್ಯಂತ ಅಪಾಯಕಾರಿ ಎಂದು ಅಮೆರಿಕದಲ್ಲಿ ನಡೆದ ಅಧ್ಯಯನವೊಂದು ಎಚ್ಚರಿಕೆ ನೀಡಿದೆ. ಈ 10 ದಿನಗಳ ಅವಧಿಯಲ್ಲಿ ಕೊರೋನಾ ಗೆದ್ದವರು ಮತ್ತೆ ಆಸ್ಪತ್ರೆಗೆ ಸೇರಬಹುದು, ಪರಿಸ್ಥಿತಿ ಕೈ ಮೀರಿದರೆ ಸಾವೂ ಸಂಭವಿಸಬಹುದು ಎಂಬುದು ಈ ವರದಿಯ ಸಾರ.

ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ರೋಗಿಗಳ ಪೈಕಿ ಮೊದಲ 10 ದಿನದಲ್ಲಿ ಶೇ.40ರಿಂದ ಶೇ.60ರಷ್ಟುಮಂದಿ ಮತ್ತೆ ಆಸ್ಪತ್ರೆಗೆ ಸೇರಬೇಕಾಗಬಹುದು. ಹೃದಯ ವೈಫಲ್ಯ ಅಥವಾ ನ್ಯುಮೋನಿಯಾಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಗೆ ಹೋಲಿಸಿದರೆ ಆಸ್ಪತ್ರೆ ಸೇರುವ ಕೊರೋನಾ ರೋಗಿಗಳಿಗೆ ಅಪಾಯ ಹೆಚ್ಚಿದೆ ಎಂಬ ವರದಿ ‘ಜಾಮಾ’ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಆದರೆ ಆಸ್ಪತ್ರೆ ವಾಸ ಮುಗಿದ 60 ದಿನಗಳ ಬಳಿಕ ನ್ಯುಮೋನಿಯಾ ಅಥವಾ ಹೃದ್ರೋಗಿಗಳಿಗೆ ಹೋಲಿಸಿದರೆ ಕೊರೋನಾ ಸೋಂಕಿತರು ಮತ್ತೊಮ್ಮೆ ಆಸ್ಪತ್ರೆ ಸೇರುವ ಅಥವಾ ಸಾವನ್ನಪ್ಪುವ ಸಾಧ್ಯತೆ ಕಡಿಮೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 2200 ಕೊರೋನಾ ಪೀಡಿತರು, 1800 ಕೊರೋನಾ ರಹಿತ ನ್ಯುಮೋನಿಯಾಪೀಡಿತರು ಹಾಗೂ 3500 ಹೃದಯ ಸಮಸ್ಯೆ ಉಳ್ಳವರನ್ನು ಪರಿಶೀಲಿಸಿ ಈ ಅಧ್ಯಯನ ಸಿದ್ಧಪಡಿಸಲಾಗಿದೆ.