ಬೀಜಿಂಗ್[ಫೆ.13]: ಚೀನಾದಲ್ಲಿ ಕೊರೋನಾ ವೈರಸ್‌ ದಿನದಿಂದ ದಿನಕ್ಕೆ ಭೀಕರವಾಗುತ್ತಿದೆ. ಈಗಾಗಲೇ ಕೊರೋನಾ ವೈರಸ್‌ ಸೋಂಕು ತಗುಲಿ ಚೀನಾ ಸಾವನ್ನಪ್ಪಿದವರ ಸಂಖ್ಯೆ ಸಾವಿರಕ್ಕೆ ತಲುಪಿದೆ. ನೆರೆಯ ಭಾರತ ಸೇರಿದಂತೆ 25 ರಾಷ್ಟ್ರಗಳಲ್ಲಿ ಕೊರೋನಾ ಸೋಂಕು ಹರಡಿಸುವ ಬಗ್ಗೆ ವರದಿಯಾಗುತ್ತಿದೆ. ಇತ್ತ ಈ ಕುರಿತಂತೆ ಅನೇಕ ಸುಳ್ಳುಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ವೈರಲ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸದ್ಯ ಚೀನಾದಲ್ಲಿ ಸೋಂಕಿಕೆ ಹೆಸರಿರುವ ಜನರು ನಡು ರಸ್ತೆಯಲ್ಲೇ ಬೀಳುತ್ತಿದ್ದಾರೆ ಎಂದು ಹೇಳಲಾದ ಸಂದೇಶ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನೂರಾರು ಹಕ್ಕಿಗಳು ಸತ್ತು ಬಿದ್ದಂತೆ ಕಿರಿದಾಗಿ ಮನುಷ್ಯರು ನೆಲದ ಮೇಲೆ ಬಿದ್ದಿರುವ ಫೋಟೋ ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ. ಆದರೆ ನಿಜಕ್ಕೂ ಚೀನಾದಲ್ಲಿ ಸೋಂಕಿತರು ನಡುರಸ್ತೆಯಲ್ಲಿ ಬೀಳುತ್ತಿದ್ದಾರೆಯೇ ಎಂದು ಆಲ್ಟ್‌ನ್ಯೂಸ್‌ ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ.

ರಿವರ್ಸ್‌ ಇಮೇಜ್‌ನಲ್ಲಿ ವೈರಲ್‌ ಆದ ಫೋಟೋಗೆ ಸಾಮ್ಯತೆ ಇರುವ ಫೋಟೋವೊಂದು ಸುದ್ದಿಸಂಸ್ಥೆಯೊಂದರಲ್ಲಿ 2014ರಲ್ಲಿ ಪ್ರಕಟವಾಗಿದ್ದು ಪತ್ತೆಯಾಗಿದೆ. ಆ ವರದಿಯಲ್ಲಿ ನಾಝಿ ಸೆರೆಯಲ್ಲಿ ಬಲಿಯಾದ 528 ಜನರ ಸ್ಮರಣಾರ್ಥವಾಗಿ ಜನರು ಫ್ರಾಂಕ್‌ಫರ್ಟ್‌ನ ಪೆಡೆಸ್ಟ್ರಿಯಲ್‌ ಝೋನ್‌ನಲ್ಲಿ ನೆಲದ ಮೇಲೆ ಬಿದ್ದಿದ್ದರು ಎಂದು ಹೇಳಲಾಗಿದೆ. ಇದರ ಜಾಡು ಹಿಡಿದು ಪರಿಶೀಲಿಸಿದಾಗ ಲಭ್ಯವಾದ ಎಲ್ಲಾ ವರದಿಗಳಲ್ಲಿ ಈ ಫೋಟೋ ಪ್ರಾಂಕ್‌ಫರ್ಟ್‌ನದ್ದು ಎಂದೇ ಹೇಳಲಾಗಿದೆ. ಅಲ್ಲಿಗೆ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿರುವ ಫೋಟೋ 6 ವರ್ಷ ಹಳೆಯದ್ದು ಎಂಬುದು ಸ್ಪಷ್ಟ.