ಲಂಡನ್[ಡಿ.18]: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಬಂಗಾಳ ಬಾಷೆಯನ್ನು 2ನೇ ಅಧಿಕೃತ ಭಾಷೆಯಾಗಿ ಲಂಡನ್‌ ಘೋಷಿಸಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಗೆಟ್‌ಬೆಂಗಾಲ್‌ ಎಂಬ ಫೇಸ್‌ಬುಕ್‌ ಪೇಜ್‌ ತನ್ನದೇ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡ ಈ ಕುರಿತ ಲೇಖನವಿರುವ ಲಿಂಕನ್ನು ಶೇರ್‌ ಮಾಡಿದೆ. ಅದರಲ್ಲಿ ‘ಬ್ರೇಕಿಂಗ್‌! ಬಂಗಾಳಿ ಭಾಷೆಯನ್ನು ದೇಶದ 2ನೇ ಅಧಿಕೃತ ಭಾಷೆಯಾಗಿ ಲಂಡನ್‌ ಘೋಷಿಸಿದೆ. ಬಂಗಾಳಿ ನಂತರದಲ್ಲಿ ಟರ್ಕಿ ಭಾಷೆ ಇದೆ. ಬಂಗಾಳಿಗರೆಲ್ಲರೂ ಹೆಮ್ಮೆ ಪಡಬೇಕಾದ ವಿಷಯ ಇದೆ. ನಿಮ್ಮ ಮಾತೃ ಭಾಷೆಯ ಬಗ್ಗೆ ಹೆಮ್ಮೆ ಪಡಿ’ ಎಂದಿದೆ. ಅದರಲ್ಲಿ ಲಂಡನ್‌ನಲ್ಲಿ 71,609 ಜನರು ಬಂಗಾಳಿ ಭಾಷೆ ಮಾತನಾಡುತ್ತಾರೆ ಎಂದೂ ಇದೆ.

ಆದರೆ ಈ ಸುದ್ದಿ ನಿಜವೇ ಎಂದು ಇಂಡಿಯಾ ಟು ಡೇ ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಖಾಸಗಿ ಸಂಸ್ಥೆಯೊಂದು ಬಂಗಾಳಿ ಮಾತನಾಡುವ ಜನರು ಎಷ್ಟಿದ್ದಾರೆ ಎಂಬ ಬಗ್ಗೆ ಸಮೀಕ್ಷೆ ನಡೆಸಿತ್ತು. ಅದು ಲಂಡನ್‌ನಲ್ಲಿ ಇಂಗ್ಲಿಷ್‌ ನಂತರ ಅತಿ ಹೆಚ್ಚು ಜನರು ಮಾತನಾಡುವ ಭಾಷೆ ಬಂಗಾಳಿ ಎಂದಿತ್ತು.

ವೈರಲ್‌ ಆಗಿರುವ ಸಂದೇಶದಲ್ಲಿ ಈ ಸಮೀಕ್ಷೆ ಕುರಿತು ಉಲ್ಲೇಖಿಸಲಾಗಿದೆ. ಆದರೆ ಇದನ್ನೇ ಅಧಿಕೃತವಾಗಿ ಘೋಷಿಸಲಾಗಿದೆ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಅಲ್ಲದೆ ಈ ಬಗ್ಗೆ ಯಾವುದೇ ಮುಖ್ಯವಾಹಿನಿಯ ಮಾಧ್ಯಮಗಳೂ ವರದಿ ಮಾಡಿಲ್ಲ. ಅಲ್ಲಿಗೆ ಬಂಗಾಳಿ ಭಾಷೆ ಲಂಡನ್‌ನ 2ನೇ ಅಧಿಕೃತ ಭಾಷೆ ಎಂಬ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.