ನವದೆಹಲಿ(ಮೇ.18): ಕೊರೋನಾ ವೈರಸ್‌ ವಿಷಯದಲ್ಲಿ ಚೀನಾ ನಡೆದುಕೊಂಡ ರೀತಿಯ ಬಗ್ಗೆ ಜಗತ್ತಿನಾದ್ಯಂತ ಆಕ್ಷೇಪ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮುಂದಿನ ವಾರ ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ಭಾರತ ಅಲಂಕರಿಸುತ್ತಿದೆ. ಹೀಗಾಗಿ ತನ್ನ ಸಾಂಪ್ರದಾಯಿಕ ಶತ್ರು ರಾಷ್ಟ್ರವಾದ ಚೀನಾ ವಿರುದ್ಧ ಭಾರತ ತನಿಖೆಗೆ ಆದೇಶಿಸುತ್ತದೆಯೇ ಎಂಬ ಕುತೂಹಲ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಮೂಡಿದೆ.

‘ಕೊರೋನಾ ವೈರಸ್ಸನ್ನು ಚೀನಾ ದೇಶವೇ ಉತ್ಪಾದನೆ ಮಾಡಿ ಹರಿಬಿಟ್ಟಿದೆ. ಈ ವೈರಸ್‌ ಪತ್ತೆಯಾದಾಗ ಅದರ ಬಗ್ಗೆ ಚೀನಾ ಸರ್ಕಾರ ತ್ವರಿತವಾಗಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ತಿಳಿಸಿಲ್ಲ. ಕೊರೋನಾ ಸೋಂಕನ್ನು ಚೀನಾ ಮುಚ್ಚಿಟ್ಟಿತ್ತು’ ಎಂಬುದೂ ಸೇರಿದಂತೆ ಆ ದೇಶದ ಮೇಲೆ ನಾನಾ ಆರೋಪಗಳು ಕೇಳಿಬಂದಿವೆ. ಅಮೆರಿಕ, ಆಸ್ಪ್ರೇಲಿಯಾ, ಕೆನಡಾ, ಫ್ರಾನ್ಸ್‌ ಹಾಗೂ ಜರ್ಮನಿಯಂತಹ ಪ್ರಮುಖ ದೇಶಗಳು ಚೀನಾ ವಿರುದ್ಧ ಈಗಾಗಲೇ ತನಿಖೆಗೆ ಆಗ್ರಹಿಸಿವೆ.

ಕೊರೋನಾ ಸೋಂಕಿನಲ್ಲಿ ಚೀನಾ ಹಿಂದಿಕ್ಕಿದ ಭಾರತ, ಆದ್ರೆ ಸಾವಿನ ಸಂಖ್ಯೆ ಕಡಿಮೆ!

ಆದರೆ, ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ಧನಸಹಾಯ ನೀಡುವುದನ್ನು ನಿಲ್ಲಿಸಿದ ಬಳಿಕ ಚೀನಾ ತನ್ನ ಧನಸಹಾಯವನ್ನು ಹೆಚ್ಚಿಸಿದೆ. ಈ ಸೂಕ್ಷ್ಮ ಸಂದರ್ಭಗಳ ಹೊತ್ತಿನಲ್ಲೇ ಮುಂದಿನ ವಾರ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಸಭೆ ನಡೆಯುತ್ತಿದ್ದು, ಸದ್ಯ ಜಪಾನ್‌ ಬಳಿಯಿರುವ ಅಧ್ಯಕ್ಷ ಸ್ಥಾನ ಭಾರತಕ್ಕೆ ಒಲಿಯಲಿದೆ. ನೈಋುತ್ಯ ಏಷ್ಯಾ ದೇಶಗಳು ಭಾರತವನ್ನು ಅವಿರೋಧವಾಗಿ ಈ ಹುದ್ದೆಗೆ ಶಿಫಾರಸು ಮಾಡಿವೆ. ಹೀಗಾಗಿ ಅಧ್ಯಕ್ಷ ಸ್ಥಾನ ಅಲಂಕರಿಸಿದ ಮೇಲೆ ಚೀನಾ ವಿರುದ್ಧ ಭಾರತ ಯಾವ ಕ್ರಮ ಕೈಗೊಳ್ಳಲಿದೆ ಎಂದು ಎಲ್ಲ ದೇಶಗಳೂ ಕಾಯುತ್ತಿವೆ.

ಈ ನಡುವೆ, ಕೊರೋನಾ ವಿಷಯದಲ್ಲಿ ಚೀನಾದ ವಿರುದ್ಧ ಕಳೆದ ವಾರವಷ್ಟೇ ಭಾರತದಿಂದ ಮೊದಲ ಅಧಿಕೃತ ಹೇಳಿಕೆಯೊಂದು ಹೊರಬಿದ್ದಿರುವುದು ಕೂಡ ಕುತೂಹಲ ಮೂಡಿಸಿದೆ. ಕೇಂದ್ರ ಸಚಿವ ನಿತಿನ್‌ ಗಡ್ಕರಿ ‘ಇದು ನೈಸರ್ಗಿಕ ವೈರಸ್‌ ಅಲ್ಲ, ಇದನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಲಾಗಿದೆ’ ಎಂದು ಹೇಳಿದ್ದಾರೆ. ಭಾರತದ ಮಿತ್ರ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಪದೇಪದೇ ಚೀನಾ ವಿರುದ್ಧ ಹರಿಹಾಯುತ್ತಿದ್ದಾರೆ.