ಆ್ಯಮ್‌ಸ್ಟ್ರಾಡಾಂ(ಡಿ.21): ಕೊರೋನಾ ವೈರಸ್ ವಿರುದ್ಧ ಹೋರಾಡಲು ಹಲವು ದೇಶಗಳು ಇದೀಗ ತುರ್ತು ಲಸಿಕೆಗೆ ಅನುಮತಿ ನೀಡಿದೆ. ಒಂದೆಡೆ ಕೊರೋನಾ ಹೆಚ್ಚಾಗುತ್ತಿದ್ದು, ಮತ್ತೊಂದೆಡೆ ನಿಯಂತ್ರಣಕ್ಕಾಗಿ ಲಸಿಕೆ ಮೇಲಿನ ಅವಲಂಬಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಕೆಲ ಪ್ರಮುಖ ದೇಶಗಳು ತುರ್ತು ನಿಬಂದನೆ ಅಡಿ ಕೊರೋನಾ ಲಸಿಕೆಗೆ ಅನುಮತಿ ನೀಡಿದೆ. ಇದೀಗ ಯೂರೋಪಿಯನ್ ಒಕ್ಕೂಟ ಎರಡು ಕೊರೋನಾ ಲಸಿಕೆಗೆ ಅನುಮತಿ ನೀಡಿದೆ.

ಬಯೋNಟೆಕ್, ಫೈಜರ್ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆ ಬಳಸಲು ಯೂರೋಪಿಯನ್ ಮೆಡಿಕಲ್ ಎಜೆನ್ಸಿ ಷರತ್ತುಬದ್ಧ ಅನುಮತಿ ನೀಡಿದೆ. ಬ್ರಿಟೀಷ್ ಹಾಗೂ ಅಮೆರಿಕದ ತುರ್ತು ಪರಿಸ್ಥಿತಿಗೆ ಅನುಗುಣವಾಗಿ ಅನುಮತಿ ನೀಡಲಾಗಿದೆ ಎಂದು ಯೂರೋಪಿಯನ್ ಮೆಡಿಕಲ್ ಎಜೆನ್ಸಿ ಹೇಳಿದೆ.

ಮಹತ್ವದ ಸಭೆ ಬಳಿಕ ಯೂರೋಪಿಯನ್ ಒಕ್ಕೂಟದ ಡ್ರಗ್ ರೆಗ್ಯೂಲೇಟರ್ 16 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲು ಅನುಮತಿ ನೀಡಿದೆ.  ಲಸಿಕೆ ನೀಡಿದ ಬಳಿಕ ಸೋಂಕಿತರ ಆರೋಗ್ಯ, ಕೊರೋನಾ ವಿರುದ್ಧ ಹೋರಾಡಬಲ್ಲ ಶಕ್ತಿ ಸೇರಿದಂತ ಲಸಿಕೆ ಕುರಿತ ಸಂಪೂರ್ಣ ವಿವರವನ್ನು ಮುಂದಿನ ವರ್ಷ ಸಲ್ಲಿಕೆ ಮಾಡಲು ಸೂಚಿಸಿದೆ.

ಕೊರೋನಾ ವೈರಸ್ ವಿರುದ್ಧ ಹೋರಾಡಲು ಯೂರೋಪಿಯನ್ ಮೆಡಿಕಲ್ ಎಜೆನ್ಸಿ ತೆಗೆದುಕೊಂಡ ಐತಿಹಾಸಿಕ ನಿರ್ಧರವಾಗಿದೆ ಎಂದು ಎಜೆನ್ಸಿ ಮುಖ್ಯಸ್ಥ ಎಮರ್ ಕೂಕ್ ಹೇಳಿದ್ದಾರೆ.

ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಯೂರೋಪಿನ್ ಮೆಡಿಕಲ್ ಏಜೆನ್ಸಿ ಅನುಮೋದನೆ "ಯುರೋಪಿಯನ್ನರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳನ್ನು ತಲುಪಿಸುವ ನಮ್ಮ ಪ್ರಯತ್ನಗಳಲ್ಲಿ ಒಂದು ನಿರ್ಣಾಯಕ ಕ್ಷಣವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.