ಲಂಡನ್(ಅ.19)‌: ಮಾಚ್‌ರ್‍ ಹಾಗೂ ಏಪ್ರಿಲ್‌ನಲ್ಲಿ ಕೊರೋನಾದಿಂದ ತತ್ತರಿಸಿ ಹೋಗಿ, ಬಳಿಕ ಸುಧಾರಣೆ ಕಂಡಿದ್ದ ಯುರೋಪಿಯನ್‌ ದೇಶಗಳಲ್ಲಿ ಕೊರೋನಾ ಅಬ್ಬರ ಮತ್ತೆ ತೀವ್ರಗೊಂಡಿದೆ. ಲಾಕ್‌ಡೌನ್‌ ನಿರ್ಬಂಧಗಳನ್ನು ತೆರವುಗೊಳಿಸಿದ್ದರಿಂದ ಜನರು ಮೈಮರೆತು ವರ್ತಿಸುತ್ತಿದ್ದು, ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಐರೋಪ್ಯ ದೇಶಗಳು ಮತ್ತೆ ಲಾಕ್‌ಡೌನ್‌ ಮೊರೆ ಹೋಗಿವೆ.

ಆದರೆ ಈ ಬಾರಿ ರಾಷ್ಟ್ರ ವ್ಯಾಪಿ ಲಾಕ್‌ಡೌನ್‌ ಬದಲಿಗೆ ಸೋಂಕು ಎಲ್ಲಿ ಅಧಿಕವಾಗಿವೆಯೋ ಅಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಗೆ ತರಲಾಗುತ್ತಿದೆ. ಗಮನಾರ್ಹ ಎಂದರೆ, ಸೋಂಕಿತರ ಸಂಖ್ಯೆ ಅಧಿಕವಾಗಿದ್ದರೂ ಸಾವಿನ ಸಂಖ್ಯೆ ಮಾಚ್‌ರ್‍, ಏಪ್ರಿಲ್‌ನಷ್ಟುಇಲ್ಲ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆಯಾದ್ದರಿಂದ ಹೆಚ್ಚಿನ ರೋಗಿಗಳನ್ನು ಗುಣಪಡಿಸುವ ಶಕ್ತಿ ವೃದ್ಧಿಸಿದೆ. ಹೀಗಾಗಿ ಸಾವು ಕಡಿಮೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಯುರೋಪ್‌ನಲ್ಲಿ 27 ದೇಶಗಳು ಇದ್ದು, ಇತ್ತೀಚೆಗೆ ಹೊರಬಂದ ಬ್ರಿಟನ್‌ ಅನ್ನು ಕೂಡ ಲೆಕ್ಕಕ್ಕೆ ತೆಗೆದುಕೊಂಡರೆ 28 ದೇಶಗಳಾಗುತ್ತವೆ. ಇದೀಗ ಈ 28 ದೇಶಗಳಲ್ಲಿ ನಿತ್ಯ ಸರಾಸರಿ 80 ಸಾವಿರ ಪ್ರಕರಣ ಕಂಡುಬರುತ್ತಿದ್ದು, ಇದು ಅಮೆರಿಕದ ದೈನಂದಿನ ಸೋಂಕಿಗಿಂತ ಅಧಿಕವಾಗಿರುವ ಹಿನ್ನೆಲೆಯಲ್ಲಿ ದೇಶಗಳು ಆತಂಕಕ್ಕೆ ಒಳಗಾಗಿವೆ.

ಫ್ರಾನ್ಸ್‌ನಲ್ಲಿ ರಾತ್ರಿ ಕಫ್ರ್ಯೂ:

ಫ್ರಾನ್ಸ್‌ನ 8 ನಗರಗಳಲ್ಲಿ ರಾತ್ರಿ ಕಫ್ರ್ಯೂವನ್ನು ಶನಿವಾರದಿಂದ ಜಾರಿಗೆ ತರಲಾಗಿದೆ. ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ತೀರಾ ಅನಿವಾರ್ಯವಲ್ಲದಿದ್ದರೆ ಯಾರೂ ಮನೆಯಿಂದ ಹೊರಬರುವಂತಿಲ್ಲ ಎಂದು ಘೋಷಿಸಲಾಗಿದೆ. ಇದರಿಂದ 2.2 ಕೋಟಿ ಮಂದಿ ಮೇಲೆ ಪರಿಣಾಮ ಬೀರಲಿದೆ. ಮನೆಯೊಳಗೆ ಹೆಚ್ಚೆಂದರೆ 6 ಜನರು ಸೇರಬಹುದು. ವಿವಾಹ, ಪಾರ್ಟಿಯಂತಹ ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ. ಇನ್ನಿತರೆ ಸಮಾರಂಭಗಳಿಗೆ 10 ಜನರ ಮಿತಿ ವಿಧಿಸಲಾಗಿದೆ. ಮಾಸ್ಕ್‌ ಕಡ್ಡಾಯ.

ಸ್ಪೇನ್‌ನಲ್ಲಿ 15 ದಿನ ತುರ್ತು ಸ್ಥಿತಿ

ಮ್ಯಾಡ್ರಿಡ್‌ ಹಾಗೂ ಅದರ ಸುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರದಿಂದ 15 ದಿನ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದರಿಂದಾಗಿ ಮ್ಯಾಡ್ರಿಡ್‌ನಿಂದ ಜನರು ಹೊರಹೋಗುವಂತಿಲ್ಲ, ಒಳಬರುವಂತಿಲ್ಲ. ಹೋಟೆಲ್‌, ರೆಸ್ಟೋರೆಂಟ್‌ಗಳು ಶೇ.50 ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬೇಕು. ರಾತ್ರಿ 11ಕ್ಕೆಲ್ಲಾ ಬಂದ್‌ ಆಗಬೇಕು. ಉದ್ದಿಮೆಗಳಲ್ಲಿ ಶೇ.50 ಜನರ ಮಿತಿ ಹೇರಿದ್ದು, ರಾತ್ರಿ 10ಕ್ಕೆ ಮುಚ್ಚಬೇಕು ಎಂದು ಸೂಚಿಸಲಾಗಿದೆ. ಕುಟುಂಬದ ಸಮಾರಂಭಗಳಿಗೆ 6ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ನಿರ್ದೇಶಿಸಲಾಗಿದೆ. ಈ ಕ್ರಮಗಳಿಂದಾಗಿ 50 ಲಕ್ಷ ಜನರ ಮೇಲೆ ಪರಿಣಾಮವಾಗಲಿದೆ.

ಹಾಲೆಂಡ್‌ 4 ವಾರ ಲಾಕ್‌ಡೌನ್‌:

ಹಾಲೆಂಡ್‌ನಲ್ಲಿ 4 ವಾರಗಳ ಕಾಲ ಹಲವು ನಿರ್ಬಂಧ ಜಾರಿಗೆ ತರಲಾಗಿದೆ. ಎಲ್ಲ ಬಾರ್‌, ರೆಸ್ಟೋರಂಟ್‌, ಕಾಫಿ ಶಾಪ್‌ ಬಂದ್‌ ಮಾಡಿಸಲಾಗಿದೆ. ರಾತ್ರಿ 10ರ ನಂತರ ಮದ್ಯ ಮಾರುವಂತಿಲ್ಲ. ಸಾರ್ವಜನಿಕವಾಗಿ ಮದ್ಯ ಸೇವಿಸುವಂತಿಲ್ಲ. ರಾತ್ರಿ 10ಕ್ಕೆ ಎಲ್ಲ ಅಂಗಡಿಗಳನ್ನು ಮುಚ್ಚಬೇಕು. ಜನರು ಮನೆಯಲ್ಲೇ ಇರಬೇಕು. ಸಾಧ್ಯವಾದಷ್ಟುಮನೆಯಿಂದಲೇ ಕೆಲಸ ಮಾಡಬೇಕು. ಒಂದು ಮನೆಗೆ ಗರಿಷ್ಠ 3ಕ್ಕಿಂತ ಹೆಚ್ಚು ಜನರು ಒಂದೇ ದಿನದಲ್ಲಿ ಭೇಟಿ ನೀಡುವಂತಿಲ್ಲ. ಬಯಲು ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ.

ಜರ್ಮನಿಯಲ್ಲಿ ಬಿಗಿ ಕ್ರಮ

ಕೊರೋನಾಪೀಡಿತ ದೇಶಗಳಿಂದ ಬರುವವರಿಗೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ಕಡ್ಡಾಯ. ಮಾಸ್ಕ್‌ ಧರಿಸದವರಿಗೆ 4300 ರು. ದಂಡ. ಸಾರ್ವಜನಿಕ ಸಮಾರಂಭಗಳಲ್ಲಿ 50 ಜನರಿಗೆ ಮಿತಿ. ಖಾಸಗಿ ಸಮಾರಂಭಗಳಲ್ಲಿ 25ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ರೆಸ್ಟೋರೆಂಟ್‌ ಹಾಗೂ ಬಾರ್‌ಗೆ ಭೇಟಿ ನೀಡಿದವರು ತಮ್ಮ ಮಾಹಿತಿ ನೀಡಿ ಹೋಗಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ.

ಇತರೆಡೆ:

ಬ್ರಿಟನ್‌ನಲ್ಲಿ ನೆರೆಹೊರೆಯವರು ಒಂದೆಡೆ ಸೇರಿ ಭೇಟಿ ಮಾಡುವುದನ್ನು ನಿಷೇಧಿಸಲಾಗಿದೆ. ಕೊರೋನಾಪೀಡಿತ ಪ್ರದೇಶಗಳಲ್ಲಿ ಉದ್ಯಮಗಳನ್ನು ಬಂದ್‌ ಮಾಡಲು ಸೂಚಿಸಲಾಗಿದೆ. ಇಟಲಿಯಲ್ಲಿ ಹೊರಾಂಗಣ ಹಾಗೂ ಒಳಾಂಗಣದಲ್ಲಿ ಮಾಸ್ಕ್‌ ಕಡ್ಡಾಯ ಮಾಡಲಾಗಿದೆ. ಪಾರ್ಟಿಗಳಿಗೆ ನಿಷೇಧ ಹೇರಲಾಗಿದೆ. ವಿವಾಹಕ್ಕೆ 30ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಜನರು ಬಾರ್‌ ಮುಂದೆ ಜಮಾಯಿಸುವಂತಿಲ್ಲ.

ಡೆನ್ಮಾರ್ಕ್ನಲ್ಲೂ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ರಾತ್ರಿ 10ರ ನಂತರ ವಿವಾಹ ಸಮಾರಂಭ, ಪಾರ್ಟಿಗಳು ನಡೆಯುವಂತಿಲ್ಲ. ರೆಸ್ಟೋರೆಂಟ್‌, ಬಾರ್‌, ಕೆಫೆಗಳಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ.

ಬೆಲ್ಜಿಯಂ ರಾಜಧಾನಿ ಬ್ರಸ್ಸೆಲ್ಸ್‌ನಲ್ಲಿ ಬಾರ್‌ ಹಾಗೂ ಕೆಫೆಗಳನ್ನು ಮುಚ್ಚಿಸಲಾಗಿದೆ. ಸಾರ್ವಜನಿಕವಾಗಿ ಮದ್ಯಪಾನ ನಿಷೇಧಿಸಲಾಗಿದೆ. ರಸ್ತೆ ತಿಂಡಿ ನಿಷೇಧಿಸಲಾಗಿದೆ. ನೈಟ್‌ ಕ್ಲಬ್‌ಗಳನ್ನು ಮುಚ್ಚಿಸಲಾಗಿದೆ. ಹಬ್ಬಗಳನ್ನು ರದ್ದುಗೊಳಿಸಲಾಗಿದೆ.

ಎಲ್ಲಿ ಏನು?

1. ಫ್ರಾನ್ಸ್‌ನ 8 ನಗರಗಳಲ್ಲಿ ರಾತ್ರಿ ಕಫä್ರ್ಯ ಜಾರಿ

2. ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ 15 ದಿನ ತುರ್ತು ಸ್ಥಿತಿ

3. ಹಾಲೆಂಡ್‌ನಲ್ಲಿ 4 ವಾರ ಭಾಗಶಃ ಲಾಕ್‌ಡೌನ್‌

4. ಜರ್ಮನಿಯಲ್ಲಿ ತಪಾಸಣೆ ಬಿಗಿ, ಹಲ ನಿರ್ಬಂಧ

5. ಬ್ರಿಟನ್‌, ಡೆನ್ಮಾರ್ಕ್, ಬೆಲ್ಜಿಯಂನಲ್ಲೂ ಕ್ರಮ