ಶುಕ್ರವಾರ ಇರಾನ್‌ ಮೇಲೆ ದಾಳಿ ನಡೆಸಿದ್ದ ಇಸ್ರೇಲ್‌, ಈ ದಾಳಿಯನ್ನು ಇರಾನ್‌ನೊಳಗಿಂದಲೇ ಸಂಘಟಿಸಿತ್ತು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಟೆಲ್‌ ಅವೀವ್‌: ಶುಕ್ರವಾರ ಇರಾನ್‌ ಮೇಲೆ ದಾಳಿ ನಡೆಸಿದ್ದ ಇಸ್ರೇಲ್‌, ಈ ದಾಳಿಯನ್ನು ಇರಾನ್‌ನೊಳಗಿಂದಲೇ ಸಂಘಟಿಸಿತ್ತು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಇದು ಶತ್ರು ದೇಶದೊಳಗೆ ನುಗ್ಗಿ ದಾಳಿ ನಡೆಸುವ ಇಸ್ರೇಲ್‌, ಅದರ ಸೇನೆ ಮತ್ತು ಅದರ ಗುಪ್ತಚರ ಸಂಸ್ಥೆ ಮೊಸಾದ್‌ನ ಸಾಮರ್ಥ್ಯವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಇಟ್ಟಿದೆ.

ಭದ್ರತಾ ಪಡೆಯ ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಈ ಕುರಿತು ವರದಿ ಪ್ರಕಟಿಸಿರುವ ‘ದ ಟೈಮ್ಸ್‌ ಆಫ್‌ ಇಸ್ರೇಲ್‌’ ಪತ್ರಿಕೆ, ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್‌, ಇಸ್ರೇಲ್‌ನ ರಕ್ಷಣಾ ಪಡೆಗಳ ನಿಕಟ ಸಹಯೋಗದೊಂದಿಗೆ ಇರಾನ್‌ನಲ್ಲೇ ರಹಸ್ಯವಾಗಿ ದಾಳಿ ನೆಲೆ ಸ್ಥಾಪಿಸಿ, ಅಲ್ಲಿಗೇ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಸಾಗಿಸಿ ದಾಳಿ ನಡೆಸಿತ್ತು ಎಂದು ಹೇಳಿದೆ.

ವರದಿಯಲ್ಲೇನಿದೆ?:

ಇರಾನ್‌ನೊಳಗೇ ರಹಸ್ಯವಾಗಿ ಸ್ಥಾಪಿಸಿದ್ದ ಕ್ಷಿಪಣಿ, ಡ್ರೋನ್‌ ಉಡ್ಡಯನ ನೆಲೆಗಳನ್ನು ಇಸ್ರೇಲಿ ಯೋಧರು ರಾತ್ರೋರಾತ್ರಿ ಸಕ್ರಿಯಗೊಳಿಸಿದರು.

ಮತ್ತೊಂದೆಡೆ ಇಸ್ರೇಲ್‌ನ ಇತರೆ ಶಸ್ತ್ರಾಸ್ತ್ರಗಳು ಇರಾನ್‌ನ ವಾಯುರಕ್ಷಣಾ ಪಡೆಯನ್ನು ಧ್ವಂಸಗೊಳಿಸುವ ಕೆಲಸ ಮಾಡಿದವು. ಇದು ಇಸ್ರೇಲ್‌ನ ಯುದ್ಧ ವಿಮಾನಗಳು ತಮ್ಮ ದಾಳಿಯನ್ನು ಸುಗಮವಾಗಿ ನಡೆಸಲು ಅನುವು ಮಾಡಿಕೊಟ್ಟಿತು. ಈ ಹಂತದಲ್ಲೇ ಇರಾನ್‌ನೊಳಗೆ ಪ್ರವೇಶಿಸಿದ್ದ ಮೊಸಾದ್ ಕಮಾಂಡೋಗಳು ಇರಾನ್‌ನೊಳಗಿನಿಂದಲೇ ಇರಾನ್‌ನ ವಾಯುರಕ್ಷಣಾ ವ್ಯವಸ್ಥೆ ಮತ್ತು ಕ್ಷಿಪಣಿ ಉಡ್ಡಯನ ಕೇಂದ್ರಗಳನ್ನು ಧ್ವಂಸಗೊಳಿಸುವ ಕೆಲಸ ಮಾಡಿದರು.

ಹೀಗೆ ಏಕಕಾಲಕ್ಕೆ ಇರಾನ್‌ನೊಳಗೆ ಮತ್ತು ಹೊರಗಿನಿಂದಲೂ ಇರಾನ್‌ ಮೇಲೆ ನಡೆಸಿದ ದಾಳಿ, ಇರಾನ್‌ ಸೇನಾಪಡೆಗಳನ್ನು ಸಂಪೂರ್ಣ ವಿಚಲಿತಗೊಳಿಸಿತು ಎಂದು ವರದಿ ತಿಳಿಸಿದೆ.

ಹಿಜ್ಬುಲ್ಲಾದಿಂದ ಏಕಪಕ್ಷೀಯ ದಾಳಿ ಇಲ್ಲ: ರಾಯಿಟರ್ಸ್

ಇರಾನ್‌ಗೆ ಬೆಂಬಲಿತ ಲೆಬನಾನ್‌ನ ಸಶಸ್ತ್ರ ಗುಂಪು ಹಿಜ್ಬುಲ್ಲಾ, ಇಸ್ರೇಲ್ ವಿರುದ್ಧ ಏಕಪಕ್ಷೀಯ ದಾಳಿಗಳನ್ನು ನಡೆಸುವುದಿಲ್ಲ ಎಂದು ಶುಕ್ರವಾರ ಹಿಜ್ಬುಲ್ಲಾ ಅಧಿಕಾರಿಯೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಇದು ಇರಾನ್‌ನ ಪ್ರಾಕ್ಸಿ ಶಕ್ತಿಗಳಾದ ಹಿಜ್ಬುಲ್ಲಾ, ಹಮಾಸ್, ಮತ್ತು ಯೆಮೆನ್‌ನ ಹೌತಿಗಳ ಸಾಮರ್ಥ್ಯ ಕ್ಷೀಣಿಸಿರುವುದನ್ನು ಸೂಚಿಸುತ್ತದೆ.

ತೀವ್ರಗೊಳ್ಳುತ್ತಿರುವ ಸಂಘರ್ಷ:

ಇಸ್ರೇಲ್‌ನ ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಇರಾನ್‌ನಿಂದ ಉಡಾಯಿಸಲಾದ ಹಲವಾರು ಕ್ಷಿಪಣಿಗಳನ್ನು ತಡೆಗಟ್ಟಿದೆ, ಆದರೆ ಕೆಲವು ಕ್ಷಿಪಣಿಗಳು ಟೆಲ್ ಅವಿವ್‌ನಲ್ಲಿ ಗುರಿಯನ್ನು ತಲುಪಿವೆ, ಇದರಿಂದ ಕಟ್ಟಡವೊಂದು ಧ್ವಂಸಗೊಂಡಿದೆ. ಇಸ್ರೇಲ್‌ನ ಎಲ್ಲಾ ನಾಗರಿಕರಿಗೆ ಬಾಂಬ್ ಶೆಲ್ಟರ್‌ಗಳಲ್ಲಿ ಆಶ್ರಯ ಪಡೆಯಲು ಸೂಚನೆ ನೀಡಲಾಗಿದೆ.

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ತನ್ನ ದಾಳಿಗಳನ್ನು ನಿಲ್ಲಿಸಲು ಮತ್ತು ಪರಮಾಣು ಕಾರ್ಯಕ್ರಮದ ಕುರಿತು ಒಪ್ಪಂದಕ್ಕೆ ಬರಲು ಹೇಳಿದೆ. ಯುಎಸ್ ಇಸ್ರೇಲ್‌ಗೆ ಗುಪ್ತಚರ ಮಾಹಿತಿಯನ್ನು ಒದಗಿಸಿದೆ ಆದರೆ ದಾಳಿಯಲ್ಲಿ ನೇರವಾಗಿ ಭಾಗವಹಿಸಿಲ್ಲ ಎಂದು ಯುಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.