ಕೈರೋ(ಏ.15): ಕಳೆದ ತಿಂಗಳು ಸೂಯೆಜ್‌ ಕಾಲುವೆಯಲ್ಲಿ ಟ್ರಾಫಿಕ್‌ ಜಾಮ್‌ ಸೃಷ್ಟಿಸಿದ್ದ ಎವರ್‌ ಗ್ರೀನ್‌ ಸರಕು ಸಾಗಣೆ ಹಡಗಿನಿಂದ ಉಂಟಾದ ಆರ್ಥಿಕ ನಷ್ಟವನ್ನು ಯಾರು ತುಂಬಿಕೊಡಬೇಕು ಎಂಬ ಕುರಿತಾದ ವಿವಾದ ಸೃಷ್ಟಿಯಾಗಿದೆ. ಸೂಯೆಜ್‌ ಕಾಲುವೆಯಿಂದ ಹಡಗನ್ನು ತೆರವುಗೊಳಿಸಿ ಎರಡು ವಾರಗಳು ಕಳೆದಿದ್ದರೂ ಸಮಸ್ಯೆ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಈಜಿಪ್ಟ್‌ ಅಧಿಕಾರಿಗಳು ಹಡಗನ್ನು ಜಪ್ತಿ ಮಾಡಿದ್ದಾರೆ. ಹಡಗಿನಲ್ಲಿದ್ದ 20ಕ್ಕೂ ಹೆಚ್ಚು ಭಾರತೀಯ ಸಿಬ್ಬಂದಿಗಳೂ ಇದೀಗ ಈಜಿಪ್ಟ್‌ ಅಧಿಕಾರಿಗಳ ವಶದಲ್ಲಿದ್ದಾರೆ.

ಇದೇ ವೇಳೆ ಹಡಗಿನ ಮಾಲಿಕರಾದ ಜಪಾನ್‌ ಮೂಲದ ಶೋಯಿ ಕಿಸೆನ್‌ ಕೈಶಾ ಕಂಪನಿಯ ಮುಖ್ಯಸ್ಥರಿಗೆ ಈಜಿಪ್ಟ್‌ ಬರೋಬ್ಬರಿ 6,750 ಕೋಟಿ ರು. ದಂಡ ಪಾವತಿ ಮಾಡುವಂತೆ ಸೂಚಿಸಿದೆ. ಇದರಲ್ಲಿ ನಿರ್ವಹಣಾ ವೆಚ್ಚ, ಕಾಲುವೆ ಬಳಕೆ ವೆಚ್ಚ, ಅಂತಾರಾಷ್ಟ್ರೀಯ ರಕ್ಷಣಾ ಕಾರ್ಯಾಚರಣೆಯ ವೆಚ್ಚವೂ ಸೇರಿದೆ. ಆದರೆ, ಭಾರೀ ಪ್ರಮಾಣದ ಪರಿಹಾರ ನೀಡಿರುವುದಕ್ಕೆ ವಿಮಾ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಬಿಲ್‌ ಪಾವತಿ ವಿಳಂಬ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಹಡಗನ್ನು ಈ ಈಜಿಪ್ಟ್‌ ಸರ್ಕಾರ ಜಪ್ತಿ ಮಾಡಿದೆ. ಈ ಮಧ್ಯೆ ಬಿಲ್‌ ಪಾವತಿಗೆ ವಿಮಾ ಕಂಪನಿಗಳು ಮತ್ತು ವಕೀಲರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹಡಗಿನ ಮಾಲಿಕರು ತಿಳಿಸಿದ್ದಾರೆ.

ಒಂದು ವಾರಗಳ ಕಾಲ ಸೂಯೆಜ್‌ ಕಾಲುವೆಗೆ ಅಡ್ಡಲಾಗಿ ನಿಂತಿದ್ದ ಹಡಗನ್ನು ಮಾ.29ರಂದು ತೆರವುಗೊಳಿಸಿ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಂಡಲಾಗಿತ್ತು. ಸೂಯೆಜ್‌ ಕಾಲುವೆಯ ಸ್ಥಗಿತಗೊಂಡಿದ್ದರಿಂದ ಎರಡೂ ಕಡೆಗಳಲ್ಲಿ 400ಕ್ಕೂ ಹೆಚ್ಚು ಹಡಗುಗಳು ನಿಂತಲ್ಲೇ ನಿಂತಿದ್ದವು.