ಕೈರೋ[ಫೆ.26]: ಈಜಿಪ್ಟ್‌ನ ಮಾಜಿ ಸರ್ವಾಧಿಕಾರಿ ಅಧ್ಯಕ್ಷ ಹೋಸ್ನಿ ಮುಬಾರಕ್‌ (91) ಮಂಗಳವಾರ ಮೃತ ಪಟ್ಟಿದ್ದಾರೆ.

1981ರಿಂದ 2011ರ ವರೆಗೆ ಈಜಿಪ್ಟ್‌ ಅಧ್ಯಕ್ಷರಾಗಿದ್ದ ಮುಬಾರಕ್‌, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಮೂವತ್ತು ವರ್ಷಗಳ ಕಾಲ ಈಜಿಪ್ಟ್‌ ಅಧ್ಯಕ್ಷರಾಗಿದ್ದ ಮುಬಾರಕ್‌, 2011ರಲ್ಲಿ ನಡೆದ ಈಜಿಪ್ಟ್‌ ಕ್ರಾಂತಿಯಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು. ಮುಬಾರಕ್‌ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತಿದ್ದ ಜನ ಅವರ ವಿರುದ್ದವೇ ದಂಗೆ ಎದ್ದು, ಬೀದಿಗೆ ಇಳಿದಿದ್ದರು. ಸರ್ಕಾರದ ವಿರುದ್ದವೇ ಅಸಹಕಾರ ಚಳುವಳಿ ನಡೆಸಿ ಮುಬಾರಕ್‌ ರಾಜೀನಾಮೆಗೆ ಆಗ್ರಹಿಸಿದ್ದರು.

ಸತತ 18 ದಿನಗಳ ಹಿಂಸಾತ್ಮಕ ಪ್ರತಿಭಟನೆಗೆ ಮಣಿದು ಮುಬಾರಕ್‌ ರಾಜೀನಾಮೆ ನೀಡಿದ್ದರು. ತಮ್ಮ ಅವಧಿಯಲ್ಲಿ ಅಮೆರಿಕ ಹಾಗೂ ಇಸ್ರೇಲ್‌ನೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದ ಅವರು, ಇಸ್ಲಾಮಿಕ್‌ ಉಗ್ರವಾದದ ವಿರುದ್ದ ಸಮರ ಸಾರಿದ್ದರು.

2012ರಲ್ಲಿ ಜೈಲು ಸೇರುವ ಮೂಲಕ ಕಂಬಿ ಎಣಿಸಿದ ಈಜಿಪ್ಟ್‌ನ ಮೊದಲ ಅಧ್ಯಕ್ಷ ಎಂಬ ಕಳಂಕವನ್ನು ಮೆತ್ತಿಕೊಂಡಿದ್ದರು. ಬಳಿಕ ಹಲವು ಪ್ರಕರಣಗಳಲ್ಲಿ ಜೈಲು ಸೇರಿ 2017ರಲ್ಲಿ ಖುಲಾಸೆಗೊಂಡು ಬಿಡುಗಡೆಗೊಂಡಿದ್ದರು. ಇದನ್ನು ವಿರೋಧಿಸಿ ಜನ ನ್ಯಾಯಲಯದ ವಿರುದ್ದವೇ ಬೀದಿಗೆ ಇಳಿದಿದ್ದರು.