ಟ್ವಿಟರ್‌ನಿಂದ ಬಹಿಷ್ಕಾರ: ತನ್ನದೇ ಹೊಸ ಸಾಮಾಜಿಕ ಜಾಲತಾಣ ಪ್ರಾರಂಭಿಸಲಿದ್ದಾರೆ ಟ್ರಂಪ್!
-TRUTH social ಎಂಬ ಸಾಮಾಜಿಕ ಜಾಲತಾಣ ತೆರೆಯಲಿರುವ ಟ್ರಂಪ್
-ಸಾಮಾಜಿಕ ಜಾಲತಾಣದ ದೈತ್ಯ ಕಂಪನಿಗಳ ದಬ್ಬಾಳಿಕೆ ವಿರುದ್ಧ ಅಮೆರಿಕಾದ ಮಾಜಿ ಅಧ್ಯಕ್ಷರ ಸಮರ
- ಟ್ವಿಟರ್ ತಾಲಿಬಾನಿಗಳಿಂದಲೇ ತುಂಬಿ ತುಳುಕುತ್ತಿದೆ ಎಂದ ಡೊನಾಲ್ಡ್ ಟ್ರಂಪ್!
ಯುಎಸ್‌ಎ(ಅ. 21 ) : ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮದೇ ಹೊಸ ಸಾಮಾಜಿಕ ಜಾಲತಾಣವನ್ನು (Social Media) ಆರಂಭಿಸುವುದಾಗಿ ತಿಳಿಸಿದ್ದಾರೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರಿಂದ ಇತ್ತೀಚೆಗೆ ಡೊನಾಲ್ಡ್ ಟ್ರಂಪ್‌ರ ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂ ಖಾತೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ಟ್ರಂಪ್ ಮೀಡಿಯಾ ಆ್ಯಂಡ್ ಟೆಕ್ನಾಲಜಿ ಗ್ರೂಪ್ (Trump Media and Technology) ಒಡೆತನದಲ್ಲಿ ʼTRUTH socialʼ ಎಂಬ ಸಾಮಾಜಿಕ ಜಾಲತಾಣ ಕೆಲಸ ಮಾಡಲಿದೆ. ಮುಂದಿನ ತಿಂಗಳು ಇದರ ಬೀಟಾ (Beta) ವರ್ಷನ್ ಬಿಡುಗಡೆಯಾಗಲಿದ್ದು ಆರಂಭದಲ್ಲಿ ಆಯ್ದ ಗ್ರಾಹಕರಿಗೆ ಮಾತ್ರ ಬಳಕೆಗೆ ಲಭ್ಯವಿರಲಿದೆ. ಆ್ಯಪಲ್ ಸ್ಟೋರ್‌ನಲ್ಲಿ (Apple store) ಈಗಾಗಲೇ ಈ ಆ್ಯಪ್ ಮುಂಗಡ ಬುಕ್ ಮಾಡಲು ಸಿದ್ಧವಿದೆ ಎಂದು ಕಂಪನಿ ತಿಳಿಸಿದೆ. ಅಲ್ಲದೇ TMTG ಒಡೆತನದಲ್ಲಿ ಯಾವುದೇ ವರ್ಣಭೇದವಿಲ್ಲದ (Non-Woke) ಮನರಂಜನಾ ಕಾರ್ಯಕ್ರಮಗಳ ಸಬ್‌ಸ್ಕ್ರಿಪ್ಷನ್ ವಿಡಿಯೋ ಆನ್- ಡಿಮ್ಯಾಂಡ್ (Subscription, Video on-demand) ಸೇವೆಯನ್ನು ಕೂಡ ಪ್ರಾರಂಭಿಸಲಾಗುವುದು ಎಂದು ತಿಳಿಸಿದೆ.
'Facebook' ಇನ್ನು ನೆನಪು ಮಾತ್ರ? 17 ವರ್ಷದ ಬಳಿಕ ಯಾಕೆ ಈ ನಿರ್ಧಾರ?
ಸಾಮಾಜಿಕ ಜಾಲತಾಣದ ದೈತ್ಯ ಕಂಪನಿಗಳ ದಬ್ಬಾಳಿಕೆ ವಿರುದ್ಧ ಸಮರ!
ʼಸಾಮಾಜಿಕ ಜಾಲತಾಣದ ದೈತ್ಯ ಕಂಪನಿಗಳ ದಬ್ಬಾಳಿಕೆ ವಿರುದ್ಧ ಸಮರ ಸಾರಲು ನಾನು ಟ್ರುತ್ ಸೋಷಿಯಲ್ಲ್ ಆರಂಭ ಮಾಡುತ್ತಿದ್ದೇನೆʼ ಎಂದು ಟ್ರಂಪ್ ಹೇಳಿದ್ದಾರೆ. ಕ್ಯಾಪಿಟಲ್ ಹಿಲ್ ಗಲಭೆ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷೇಧಿಸಲಾಗಿತ್ತು. ಇದಾದ ಬಳಿಕ ಸೊಸೆಯ ಫೇಸ್‌ಬುಕ್ ಪೇಜ್‌ನಲ್ಲಿ ಕಾಣಿಸಿಕೊಂಡ ಟ್ರಂಪ್‌ಗೆ ಮತ್ತೆ ನಿರ್ಬಂಧ ಹೇರಲಾಗಿತ್ತು. ಇಷ್ಟೇ ಅಲ್ಲ ಸೊಸೆಗೆ ನೊಟೀಸ್ ನೀಡುವ ಮೂಲಕ ಟ್ರಂಪ್ ವಿರುದ್ಧದ ನಿಲುವನ್ನು ಮತ್ತಷ್ಟು ಕಠಿಣಗೊಳಿಸಿತ್ತು. ʼತಾಲಿಬಾನಿಗಳಿಂದಲೇ ತುಂಬಿ ತುಳುಕುತ್ತಿರುವ ಟ್ವೀಟರ್‌ಅನ್ನು ನಾವು ಬಳಸುತ್ತಿದ್ದೇವೆ. ಇದರ ಹೊರತಾಗಿಯು ನಮ್ಮ ಅಮೆರಿಕಾದ ಅಧ್ಯಕ್ಷರು ಸುಮ್ಮನಿದ್ದಾರೆ. ಇದು ಸ್ವೀಕಾರಾರ್ಹವಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ತನ್ನದೇ ಹೊಸ ಬ್ಲಾಗ್ ಆರಂಭಿಸಿದ್ದ ಟ್ರಂಪ್!
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವೀಟರ್ ಗಳಿಂದ ಟ್ರಂಪ್ ಖಾತೆಗಳು ಸ್ಥಗಿತಗೊಂಡ ನಂತರ , ಈ ಜಾಲತಾಣಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪ್ರಯತ್ನಸಿದ್ದರು. ಮೇ ತಿಂಗಳಲ್ಲಿ ʼFrom the Desk of Donald J. Trumpʼ ಎಂಬ ತಮ್ಮದೇ ಆದ ಬ್ಲಾಗ್‌ವೊಂದನ್ನು (Blog) ಆರಂಭ ಮಾಡಿದ್ದರು ಟ್ರಂಪ್. ಆದರೆ ತಿಂಗಳ ಬಳಿಕ ಅದರಿಂದ ಹಿಂದೆ ಸರಿದಿದ್ದರು. ಇದಾದ ನಂತರ ಡೊನಾಲ್ಡ್ ಟ್ರಂಪ್ ಆಪ್ತ ಸಲಹೆಗಾರ ಜೇಸನ್ ಮಿಲ್ಲರ್ (Jason Miller) ಗೆಟ್ಟರ್ (Gettr) ಎಂಬ ಸಾಮಾಜಿಕ ಜಾಲತಾಣವನ್ನು ಆರಂಭ ಮಾಡಿದ್ದರು. ಈಗ TRUTH social ಘೋಷಣೆಯಾಗುತ್ತಿದ್ದಂತೆಯೇ ಸಲಹೆಗಾರ ಮಿಲ್ಲರ್ ಡೊನಾಲ್ಡ್ ಟ್ರಂಪ್‌ರಿಗೆ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಫೇಸ್‌ಬುಕ್(facebook) ಮತ್ತು ಇನ್ಸ್ಟಾಗ್ರಾಮ್ (instagram) ತನ್ನ ಗ್ರಾಹಕರನ್ನು ಕಳೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ಕ್ಯಾಪಿಟಲ್ ಹಿಲ್ ಮೇಲಿನ ದಾಳಿ ವೇಳೆ ನಡೆದ ಪ್ರತಿಭಟನೆ ಹಾಗೂ ಹಿಂಸೆಯನ್ನು ಪ್ರಚೋದಿಸುವ ಟ್ವೀಟ್ ಹಾಗೂ ಫೇಸ್‌ಬುಕ್ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಟ್ವಿಟರ್, ಫೇಸ್‌ಬುಕ್ ಟ್ರಂಪ್ ಖಾತೆಯನ್ನು ಬ್ಲಾಕ್ ಮಾಡಿತ್ತು. ಗಲಭೆ, ಹಿಂಸಾಚಾರ ಬಳಿಕ ಅಮೆರಿಕದ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ಟ್ರಂಪ್ ಸಾಮಾಜಿಕ ಜಾಲತಾಣದಿಂದ ಅನಿವಾರ್ಯವಾಗಿ ದೂರ ಉಳಿಯಬೇಕಾಯಿತು. ಇದಾದ ಬಳಿಕ ಸೊಸೆ ಫೇಸ್‌ಬುಕ್ ಪೇಜ್‌ನಲ್ಲಿ ಕಾಣಿಸಿಕೊಂಡು ಮತ್ತೆ ಮುಖಭಂಗಕ್ಕೆ ಈಡಾಗಿದ್ದರು. ಟ್ರಂಪ್ ಪುತ್ರ ಎರಿಕ್ ಪತ್ನಿ ಲಾರಾ ಟ್ರಂಪ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಡೊನಾಲ್ಡ್ ಟ್ರಂಪ್ ಸಂದರ್ಶನದ ವಿಡಿಯೋ ತುಣುಕನ್ನು ಪೋಸ್ಟ್ ಮಾಡಿದ್ದರು.
ಸೊಸೆ ಫೇಸ್‌ಬುಕ್ ಪೇಜ್‌ನಲ್ಲಿ ಕಾಣಿಸಿಕೊಂಡ ಡೋನಾಲ್ಡ್ ಟ್ರಂಪ್‌ಗೆ ಮತ್ತೆ ನಿಷೇಧ!