ಅಮೆರಿಕದಲ್ಲಿ ಮತ್ತೆ ಟ್ರಂಪ್ ಆಡಳಿತ ಆರಂಭಗೊಂಡಿದೆ. ಅಮೆರಿಕದ 47ನೇ ಅಧ್ಯಕ್ಷರಾಗಿ ಟ್ರಂಪ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆಡಳಿತದ ಮೊದಲ ದಿನವೇ ಟ್ರಂಪ್ ಹೊಸ ದಾಖಲೆ ಬರೆಯಲಿದ್ದಾರೆ. 

ವಾಶಿಂಗ್ಟನ್ ಡಿಸಿ(ಜ.20) ಅಮೆರಿಕದಲ್ಲಿ ಹೊಸ ಆಡಳಿತ. ಜೋ ಬೈಡೆನ್ ಕಳೆದ ವರ್ಷಗಳ ಆಡಳಿತ ಅಂತ್ಯಗೊಂಡಿದೆ. ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಡೋನಾಲ್ಡ್ ಟ್ರಂಪ್ ಇದೀಗ ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮೆರಿಕ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ನ್ಯಾ। ಜಾನ್‌ ರಾಬರ್ಟ್ಸ್, ನೂತನ ಅಧ್ಯಕ್ಷ ಟ್ರಂಪ್‌ಗೆ ಪ್ರಮಾಣವಚನ ಬೋಧಿಸಿದ್ದಾರೆ. 40 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಪ್ರಮಾಣವಚನ ಸ್ವೀಕಾರ ಸಮಾರಂಭ ಕ್ಯಾಪಿಟಲ್‌ ರೊಟುಂಡಾ ಒಳಾಂಗಣ ಸಭಾಂಗಣದಲ್ಲಿ ನಡೆದಿದೆ.

ಡೋನಾಲ್ಡ್ ಟ್ರಂಪ್ 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ಬಳಿಕ ಅಮೆರಿಕವನ್ನುದ್ದೇಶಿ ಮೊದಲ ಭಾಷಣ ಮಾಡಿದ ಟ್ರಂಪ್, ಇದು ಅಮೆರಿಕದ ಸ್ವರ್ಣ ಯುಗ ಎಂದು ಬಣ್ಣಿಸಿದ್ದಾರೆ. ಹಲವು ಸವಾಲುಗಳು ನಮ್ಮ ಮುಂದಿದೆ. ಆದರೆ ಯುನೈಟೆಡ್ ಸ್ಟೇಟ್ಸ್ ಸಮರ್ಥವಾಗಿದೆ. ಹೀಗಾಗಿ ಇದು ಸುವರ್ಣಯುಗದ ಆರಂಭ ಎಂದು ಟ್ರಂಪ್ ಹೇಳಿದ್ದಾರೆ. ಮೊದಲ ಭಾಷಣದಲ್ಲಿ ನುಸುಳುಕೋರರಿಗೆ ಟ್ರಂಪ್ ವಾರ್ನಿಂಗ್ ನೀಡಿದ್ದಾರೆ. ಅಮೆರಿಕವನ್ನು ಸುರಕ್ಷಿತ ತಾಣವಾಗಿ ಮಾಡುವುದು ಗುರಿಯಾಗಿದೆ. ನುಸುಳುಕೋರರಿಗೆ ಅಮೆರಿಕದಲ್ಲಿ ಅವಕಾಶವಿಲ್ಲ ಎಂದು ಖಡಕ್ ಸೂಚನೆ ನೀಡಿದ್ದಾರೆ.

ಅಮೆರಿಕದಲ್ಲಿ ಕಾಂಚಿಪುರಂ ಸೀರೆಯುಟ್ಟು ಭಾರತದ ಸಂಪ್ರದಾಯ ಮೆರೆಸಿದ ನೀತಾ ಅಂಬಾನಿ!

ಡೋನಾಲ್ಡ್ ಟ್ರಂಪ್ ಪ್ರಮಾಣವಚನದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶುಭಕೋರಿದ್ದಾರೆ. ಅಮೆರಿದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ನನ್ನ ಆತ್ಮೀಯ ಗೆಳೆಯ ಡೋನಾಲ್ಡ್ ಟ್ರಂಪ್‌ಗೆ ಶುಭಾಶಯಗಳು. ಮತ್ತೊಮ್ಮೆ ಟ್ರಂಪ್ ಅಧ್ಯಕ್ಷತೆಯ ಅಮೆರಿಕ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಇದು ಉಭಯ ದೇಶಗಳಿಗೆ ನೆರವಾಗಲಿದೆ. ಜೊತೆಗೆ ಉಭಯ ದೇಶಗಳ ಭವಿಷ್ಯಕ್ಕೆ ಪೂರಕವಾಗಿ ಕೆಲಸ ಮಾಡಲು ಸಂತೋಷಪಡುತ್ತೇನೆ. ಯಶಸ್ವಿ ಅವಧಿಗೆ ಶುಭಾಶಯಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಅಮೆರಿಕ ನೂತನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪ್ರಮಾಣ ವಚನ ಸಮಾರಂಭಕ್ಕೆ ಭಾರತದ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪಾಲ್ಗೊಂಡಿದ್ದಾರೆ. ಪ್ರಧಾನಿ ಮೋದಿ ನೀಡಿದ ಸಂದೇಶವನ್ನು ಡೋನಾಲ್ಡ್ ಟ್ರಂಪ್‌ಗೆ ತಲುಪಿಸಿದ್ದಾರೆ. ಇನ್ನು ಟ್ರಂಪ್ ಪ್ರಮಾಣವಚನ ಸಮಾರಂಭಕ್ಕೆ ಭಾರತದ ಉದ್ಯಮಿ ಮುಕೇಶ್ ಅಂಬಾನಿ, ನೀತಾ ಅಂಬಾನಿ ಕೂಡ ಹಾಜರಾಗಿದ್ದಾರೆ. ಟ್ರಂಪ್ ವಿಶೇಷ ಆಹ್ವಾನದ ಮೇರೆಗೆ ಅಂಬಾನಿ ದಂಪತಿಗಳು ಹಾಜರಾಗಿದ್ದಾರೆ. ಟ್ರಂಪ್‌ ಆಪ್ತ, ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್, ಖ್ಯಾತ ಉದ್ಯಮಿ ಜೆಫ್ ಬೆಜೋಸ್ ಮತ್ತು ಫೇಸ್‌ಬುಕ್‌ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್‌, ಚೀನಾ ಸಾಮಾಜಿಕ ಮಾಧ್ಯಮ ದೈತ್ಯ ಟಿಕ್‌ಟಾಕ್‌ ಮುಖ್ಯಸ್ಥ ಶೌ ಚೆವ್, ಮಾಜಿ ಅಧ್ಯಕ್ಷರಾದ ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯೂ ಬುಷ್ ಮತ್ತು ಬರಾಕ್ ಒಬಾಮಾ, ಬಿಲ್‌ ಕ್ಲಿಂಟನ್‌ ಪತ್ನಿ ಹಿಲರಿ ಕ್ಲಿಂಟನ್‌, ನಿರ್ಗಮಿತ ಅಧ್ಯಕ್ಷ ಜೋ ಬೈಡೆನ್‌, ನಿರ್ಗಮಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಪಾಲ್ಗೊಂಡಿದ್ದಾರೆ.