ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್‌ ಲೀವಿಟ್‌ರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವರ್ಣಿಸಿದ ರೀತಿ ರಾತ್ರೋರಾತ್ರಿ ವೈರಲ್‌ ಆಗಿದೆ.

ವಾಷಿಂಗ್ಟನ್‌: ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್‌ ಲೀವಿಟ್‌ರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವರ್ಣಿಸಿದ ರೀತಿ ರಾತ್ರೋರಾತ್ರಿ ವೈರಲ್‌ ಆಗಿದೆ. ಸಂದರ್ಶನವೊಂದರಲ್ಲಿ ಲೀವಿಟ್‌ ಬಗ್ಗೆ ಮಾತನಾಡುತ್ತಾ, ‘ಆಕೆ ಸ್ಟಾರ್‌ ಆಗಿಬಿಟ್ಟಿದ್ದಾಳೆ. ಆ ಮುಖ, ಬುದ್ಧಿವಂತಿಕೆ, ತುಟಿಗಳು, ಅವು ಚಲಿಸುವ ರೀತಿ.. ಅವುಗಳು ಚಲಿಸುವಾಗ ಮಷಿನ್‌ ಗನ್‌ ರೀತಿ ಕಾಣುತ್ತದೆ’ ಎಂದು ಸೌಂದರ್ಯಾರಾಧನೆ ಮಾಡಿದ್ದಾರೆ.

ಅಷ್ಟಕ್ಕೇ ನಿಲ್ಲಿಸದೆ, ‘ಇಂತಹ ಪತ್ರಿಕಾ ಕಾರ್ಯದರ್ಶಿ ಬೇರೆ ಅಧ್ಯಕ್ಷರಿಗೆ ಸಿಕ್ಕಿರಲಿಕ್ಕಿಲ್ಲ. ಆಕೆಯೊಂದು ಅದ್ಭುತ’ ಎಂದು ಬಣ್ಣಿಸಿದ್ದಾರೆ.

ಟ್ರಂಪ್‌ ಹೀಗೆ ಹೇಳಿದ ವಿಡಿಯೋ ತುಣುಕು ಭಾರೀ ವೈರಲ್‌ ಆಗಿದೆ. ನೆಟ್ಟಿಗರು 1990ರಲ್ಲಿ ಭಾರೀ ಸದ್ದು ಮಾಡಿದ್ದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಮತ್ತು ವೈಟ್‌ಹೌಸ್‌ನ ಇಂಟರ್ನ್‌ ಮೋನಿಕಾ ಲೆವಿನ್ಸ್ಕಿ ನಡುವಿನ ಲೈಂಗಿಕ ಸಂಬಂಧವನ್ನು ನೆನಪಿಸಿಕೊಂಡಿದ್ದಾರೆ.

ಟ್ರಂಪ್‌ ಹೀಗೆ ಮಾತಾಡುತ್ತಿರುವುದು ಇದೇ ಮೊದಲಲ್ಲ. ಈ ಮುಂಚೆ ತಮ್ಮ ಮಗಳು ಸೇರಿದಂತೆ ಹೆಂಗಳೆಯರ ಬಗ್ಗೆ ಕೀಳುಪದಗಳನ್ನು ಬಳಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.