ವಾಷಿಂಗ್ಟನ್‌(ಜ.10): ಸಂಸತ್‌ ಭವನದ ಮೇಲೆ ದಾಳಿ ನಡೆಸಲು ತಮ್ಮ ಬೆಂಬಲಿಗರನ್ನು ಪ್ರಚೋದಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡಲೇ ರಾಜೀನಾಮೆ ನೀಡದಿದ್ದರೆ ಅವರ ವಿರುದ್ಧ ಸಂಸತ್ತಿನಲ್ಲಿ ವಾಗ್ದಂಡನೆ (ವಜಾ) ಪ್ರಕ್ರಿಯೆ ಆರಂಭಿಸಲು ಸಂಸತ್ತಿನ ಕೆಳಮನೆಯಾಗಿರುವ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌್ಸ ಮುಂದಾಗಿದೆ. ಹೀಗಾಗಿ ತಮ್ಮ ಅಧ್ಯಕ್ಷೀಯ ಅವಧಿ ಮುಕ್ತಾಯಕ್ಕೆ ಕೇವಲ 11 ದಿನಗಳಿರುವಾಗ ಟ್ರಂಪ್‌ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

‘ಅಮೆರಿಕದ ಸಂಸದರು ಟ್ರಂಪ್‌ ಈಗಲೇ ರಾಜೀನಾಮೆ ನೀಡುತ್ತಾರೆಂಬ ನಂಬಿಕೆ ಹೊಂದಿದ್ದಾರೆ. ಅವರು ರಾಜೀನಾಮೆ ನೀಡದಿದ್ದರೆ ವಾಗ್ದಂಡನೆ ಪ್ರಕ್ರಿಯೆ ಆರಂಭಿಸುವಂತೆ ಸಂಸತ್ತಿನ ನಿಯಮಗಳ ಸಮಿತಿಗೆ ಸೂಚನೆ ನೀಡಿದ್ದೇನೆ. ಟ್ರಂಪ್‌ ವಿರುದ್ಧ 25ನೇ ತಿದ್ದುಪಡಿ ಮಸೂದೆ ಹಾಗೂ ವಾಗ್ದಡನೆ ನಿಲುವಳಿ ಮಂಡಿಸಲಾಗುವುದು’ ಎಂದು ಸ್ಪೀಕರ್‌ ನ್ಯಾನ್ಸಿ ಪೆಲೋಸಿ ತಿಳಿಸಿದ್ದಾರೆ.

ಭಾರತೀಯ ಮೂಲದ ಅಮೆರಿಕದ ಸಂಸದೆ ಪ್ರಮೀಳಾ ಜಯಪಾಲ್‌ ಕೂಡ ಟ್ರಂಪ್‌ ವಿರುದ್ಧ ಕೂಡಲೇ ವಾಗ್ದಂಡನೆ ಪ್ರಕ್ರಿಯೆ ಆರಂಭವಾಗಬೇಕು ಎಂದು ಹೇಳಿದ್ದಾರೆ. ಆದರೆ, ಟ್ರಂಪ್‌ ರಾಜೀನಾಮೆ ನೀಡದಿದ್ದರೆ ಅವರ ವಿರುದ್ಧ ಈಗಲೇ ವಾಗ್ದಂಡನೆ ಪ್ರಕ್ರಿಯೆ ಆರಂಭಿಸಿದರೂ ಅದು ಜ.20ರಂದು ಹೊಸ ಅಧ್ಯಕ್ಷರ ಅಧಿಕಾರ ಸ್ವೀಕಾರದೊಳಗೆ ಪೂರ್ಣಗೊಳ್ಳುವುದು ಅನುಮಾನವಿದೆ.