ಬಾಂಗ್ಲಾದೇಶದಲ್ಲಿ ಧರ್ಮನಿಂದನೆಯ ಸುಳ್ಳಾರೋಪದ ಮೇಲೆ ಹಿಂದೂ ಯುವಕ ದೀಪು ಚಂದ್ರ ದಾಸ್‌ನನ್ನು ಬೆಂಕಿ ಹಚ್ಚಿ ಕೊಂದಿದ್ದ ಪ್ರಕರಣದ ಪ್ರಮುಖ ರೂವಾರಿ, ಮದರಸಾ ಶಿಕ್ಷಕ ಯಾಸಿನ್ ಅರಾಫತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯ ನಂತರ 12 ದಿನಗಳ ಕಾಲ ಢಾಕಾದ ಮದರಸಾಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ.
ಢಾಕಾ/ಮೈಮೆನ್ಸಿಂಗ್ (ಜ.8): ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ಇಡೀ ವಿಶ್ವವೇ ಮರುಗಿದ್ದ ದೀಪು ಚಂದ್ರ ದಾಸ್ ಹತ್ಯೆ ಪ್ರಕರಣದ ರೂವಾರಿ, ಮದರಸಾ ಶಿಕ್ಷಕ ಯಾಸಿನ್ ಅರಾಫತ್‌ನನ್ನು ಕೊನೆಗೂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಧರ್ಮನಿಂದನೆಯ ಸುಳ್ಳು ಆರೋಪ ಹೊರಿಸಿ, 27 ವರ್ಷದ ಅಮಾಯಕ ಯುವಕನನ್ನು ಬೆಂಕಿ ಹಚ್ಚಿ ಕೊಂದಿದ್ದ ಈ ಪಾಪಿ, ಕಳೆದ 12 ದಿನಗಳಿಂದ ರಾಜಧಾನಿ ಢಾಕಾದ ವಿವಿಧ ಮದರಸಾಗಳಲ್ಲಿ ಸುಳ್ಳು ಹೆಸರಿನಲ್ಲಿ ಅಡಗಿ ಕುಳಿತಿದ್ದ.
ಮಸೀದಿಯ ಇಮಾಮ್ ಆಗಿದ್ದವನೇ ಕೊಲೆಗಡುಕ ಗುಂಪಿನ ಲೀಡರ್!
ಬಂಧಿತ ಯಾಸಿನ್ ಅರಾಫತ್ ಕೇವಲ ಆರೋಪಿಯಲ್ಲ, ಈ ಭೀಕರ ಹತ್ಯಾಕಾಂಡದ ಮಾಸ್ಟರ್ ಮೈಂಡ್ ಎಂಬ ಆಘಾತಕಾರಿ ಸತ್ಯ ಹೊರಬಂದಿದೆ. ಶೇಖಬರಿ ಮಸೀದಿಯ ಇಮಾಮ್ ಆಗಿದ್ದ ಈತ, ತನ್ನ ಪ್ರಚೋದನಾಕಾರಿ ಭಾಷಣದ ಮೂಲಕ ಮತಾಂಧರ ಗುಂಪನ್ನು ಒಗ್ಗೂಡಿಸಿದ್ದ. ಜವಳಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ದೀಪು ದಾಸ್‌ನನ್ನು ಕಾರ್ಖಾನೆಯ ಮೇಲ್ವಿಚಾರಕನೇ ಈ ಮತಾಂಧ ಗುಂಪಿಗೆ ಒಪ್ಪಿಸಿದ್ದ ಎಂಬುದು ಮನುಕುಲವೇ ತಲೆತಗ್ಗಿಸುವಂತಿದೆ.
ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ ಕ್ರೌರ್ಯ: ದೀಪುವನ್ನು ರಸ್ತೆಗೆ ಎಳೆತಂದಿದ್ದೇ ಈ ಅರಾಫತ್!
ಪೊಲೀಸ್ ತನಿಖೆಯಲ್ಲಿ ಹೊರಬಂದಿರುವ ಮಾಹಿತಿ ಬೆಚ್ಚಿಬೀಳಿಸುವಂತಿದೆ. ದೀಪು ಚಂದ್ರ ದಾಸ್‌ನನ್ನು ಸ್ವತಃ ಯಾಸಿನ್ ಅರಾಫತ್ ರಸ್ತೆಗೆ ಎಳೆದುಕೊಂಡು ಬಂದಿದ್ದ. ಅಲ್ಲಿ ರಾಕ್ಷಸರಂತೆ ವರ್ತಿಸಿದ ಗುಂಪು, ದೀಪುವನ್ನು ಮರಕ್ಕೆ ನೇತುಹಾಕಿ, ಜೀವಂತವಾಗಿರುವಾಗಲೇ ಬೆಂಕಿ ಹಚ್ಚಿ ವಿಕೃತ ಆನಂದ ಅನುಭವಿಸಿದೆ. ಈ ಘಟನೆ ಬಾಂಗ್ಲಾದೇಶದ ಅಲ್ಪಸಂಖ್ಯಾತರು ಎದುರಿಸುತ್ತಿರುವ ಭಯಾನಕ ಸ್ಥಿತಿಗೆ ಸಾಕ್ಷಿಯಾಗಿದೆ.
ತಲೆಮರೆಸಿಕೊಳ್ಳಲು ಮದರಸಾಗಳೇ ಸಹಾಯ: 21 ಆರೋಪಿಗಳ ಬಂಧನ
ಹತ್ಯೆಯ ನಂತರ ಹೆಸರನ್ನು ಬದಲಾಯಿಸಿಕೊಂಡು ಢಾಕಾದ ಸುಫಾ ಮದರಸಾದಲ್ಲಿ ಈತ ಬೋಧಕನಾಗಿ ಸೇರಿಕೊಂಡಿದ್ದ. ಆದರೆ ತಾಂತ್ರಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಅಂತಿಮವಾಗಿ ಈ ಹಂತಕನನ್ನು ಬಂಧಿಸಿದ್ದಾರೆ. ಈವರೆಗೆ ಒಟ್ಟು 21 ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಪೈಕಿ 9 ಮಂದಿ ಈಗಾಗಲೇ ನ್ಯಾಯಾಲಯದ ಮುಂದೆ ತಾವು ಮಾಡಿದ ಪಾಪಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಬಾಂಗ್ಲಾಗೆ ಮುಖಭಂಗ!
ಹಿಂದೂ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಈ ದಾಳಿಗಳು ಜಾಗತಿಕ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿವೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಮೃಗೀಯ ಹತ್ಯೆಗಳು ಬಾಂಗ್ಲಾದೇಶದ ಮಾನವ ಹಕ್ಕುಗಳ ರಕ್ಷಣೆಯ ಬಣ್ಣವನ್ನು ಬಯಲು ಮಾಡಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುತ್ತದೆಯೇ ಅಥವಾ ಇದು ಕೇವಲ ಕಣ್ಣೊರೆಸುವ ತಂತ್ರವೇ ಎಂಬ ಚರ್ಚೆ ಈಗ ಜಗತ್ತಿನಾದ್ಯಂತ ಶುರುವಾಗಿದೆ.


