ಬೀಜಿಂಗ್(ಏ.18):  ಕೊರೋನಾ ವೈರಸ್‌ ಸೋಂಕಿನಿಂದ ಸಾವಿಗೀಡಾದವರ ಅಸಲಿ ಸಂಖ್ಯೆಯನ್ನು ಚೀನಾ ಮುಚ್ಚಿಟ್ಟಿದೆ ಎಂಬ ಆರೋಪಗಳ ಬೆನ್ನಲ್ಲೇ, ಮಾರಕ ವೈರಾಣುವಿಗೆ ಚೀನಾದಲ್ಲಿ ಏನಿಲ್ಲವೆಂದರೂ 2.15 ಕೋಟಿ ಜನರು ಬಲಿಯಾಗಿರಬಹುದು ಎಂಬ ಹೊಸ ತರ್ಕ ಹುಟ್ಟಿಕೊಂಡಿದೆ.

ಚೀನಾದಲ್ಲಿ ಕೊರೋನಾ ಅಟ್ಟಹಾಸದ ಸಂದರ್ಭದಲ್ಲೇ ಒಟ್ಟಾರೆ ಮೊಬೈಲ್‌ ಬಳಕೆದಾರರ ಸಂಖ್ಯೆ 2.15 ಕೋಟಿಯಷ್ಟುಕುಸಿತ ಕಂಡುಬಂದಿದೆ. ಸಾಮಾನ್ಯವಾಗಿ ಒಂದು ಕಂಪನಿ ಗ್ರಾಹಕರನ್ನು ಕಳೆದುಕೊಂಡರೆ ಮತ್ತೊಂದು ಕಂಪನಿಗೆ ಆ ಗ್ರಾಹಕರು ವರ್ಗಾವಣೆಗೊಳ್ಳಬೇಕು. ಆದರೆ ಚೀನಾದಲ್ಲಿ ಈ ರೀತಿ ಆಗಿಲ್ಲದಿರುವುದು ವಿಶ್ವಾದ್ಯಂತ ಕುತೂಹಲದ ಚರ್ಚೆಗೆ ನಾಂದಿ ಹಾಡಿದೆ.

ಕೋರೋನ ಚೀನಾ ಲ್ಯಾಬ್ ಶಿಶು ಅಲ್ಲ ಅಂತ ಎಷ್ಟು ಸಲ ಹೇಳಬೇಕು

ಚೀನಾದ ಅತಿದೊಡ್ಡ ಮೊಬೈಲ್‌ ಕಂಪನಿಯಾಗಿರುವ ಚೀನಾ ಮೊಬೈಲ್‌ 82 ಲಕ್ಷ ಗ್ರಾಹಕರನ್ನು ಜನವರಿ ಹಾಗೂ ಫೆಬ್ರವರಿಯಲ್ಲಿ ಕಳೆದುಕೊಂಡಿದೆ. ಎರಡನೇ ಅತಿದೊಡ್ಡ ಕಂಪನಿಯಾಗಿರುವ ಚೀನಾ ಟೆಲಿಕಾಂ ಕಂಪನಿಯ 56 ಲಕ್ಷ ಹಾಗೂ ಚೀನಾ ಯೂನಿಕಾಂ ಕಂಪನಿಯ 78 ಲಕ್ಷ ಗ್ರಾಹಕರು ದಿಢೀರ್‌ ಕಣ್ಮರೆಯಾಗಿದ್ದಾರೆ. ಈ ಮೂರು ಕಂಪನಿಗಳ ಸೇವೆ ತ್ಯಜಿಸಿರುವ ಗ್ರಾಹಕರ ಸಂಖ್ಯೆ 2.15 ಕೋಟಿ ಎಂದು ಮೊಬೈಲ್‌ ಕಂಪನಿಗಳೇ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಹೇಳುತ್ತವೆ.

ಮತ್ತೊಂದೆಡೆ, ಲ್ಯಾಂಡ್‌ಲೈನ್‌ ಬಳಕೆದಾರರ ಸಂಖ್ಯೆಯೂ 84 ಲಕ್ಷದಷ್ಟುಕುಸಿತ ಕಂಡುಬಂದಿದೆ. ಮೊಬೈಲ್‌ ಬಳಕೆದಾರರು ಇಷ್ಟೊಂದು ಸಂಖ್ಯೆಯಲ್ಲಿ ಕುಸಿತ ಕಂಡಿದ್ದಕ್ಕೆ ಆ ಗ್ರಾಹಕರು ಕೊರೋನಾಗೆ ಬಲಿಯಾಗಿದ್ದೂ ಕಾರಣವಾಗಿರಬಹುದು ಎಂಬ ವಾದ ಕೇಳಿಬರುತ್ತಿದೆ.

ಕೊರೋನಾಗೆ ಚೀನಾದಲ್ಲಿ ಈವರೆಗೆ 3270 ಮಂದಿ ಬಲಿಯಾಗಿದ್ದಾರೆ ಎಂದು ಸರ್ಕಾರ ಅಧಿಕೃತವಾಗಿ ಹೇಳುತ್ತಿದೆ. ಆದರೆ ಇದನ್ನು ಅಲ್ಲಗಳೆದು ಚೀನಿಯರೇ ವಿಡಿಯೋ, ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಬಹುತೇಕ ಮೊಂದಿ ಮೊಬೈಲ್‌ ಗ್ರಾಹಕರ ಸಂಖ್ಯೆ ಕುಸಿತವಾಗಿರುವುದನ್ನು ಉದಾಹರಣೆಯಾಗಿ ನೀಡುತ್ತಿದ್ದಾರೆ.

ನವೆಂಬರಲ್ಲಿ ಚೀನಾಕ್ಕೆ ಮತ್ತೆ ಕೊರೋನಾ ದಾಳಿ! ತಜ್ಞರಿಂದ ಎಚ್ಚರಿಕೆ

ಇದರ ಜತೆಗೆ ಇನ್ನೊಂದು ತರ್ಕವಿದೆ. ಚೀನಾದ ವಲಸೆ ಕಾರ್ಮಿಕರು ಉದ್ಯೋಗ ಸ್ಥಳದಲ್ಲಿ ಒಂದು ಸಿಮ್‌ ಹಾಗೂ ತವರಿನ ಒಂದು ಸಿಮ್‌ ಹೊಂದಿರುತ್ತಾರೆ. ಕೊರೋನಾದಿಂದ ಊರಿಗೆ ಮರಳಿದ್ದರಿಂದ ಉದ್ಯೋಗ ಸ್ಥಳದ ಸಿಮ್‌ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಹೀಗಾಗಿ ಗ್ರಾಹಕರ ಸಂಖ್ಯೆಯಲ್ಲಿ ಕುಸಿತವಾಗಿದೆ ಎಂಬ ವಾದವೂ ಕೇಳಿ ಬರುತ್ತಿದೆ.