Asianet Suvarna News Asianet Suvarna News

ವಿಮಾನದ ರೆಕ್ಕೆಯಲ್ಲಿ ಬೆಂಕಿ: ಸಕಾಲದಲ್ಲಿ ಫ್ಲೈಟ್‌ ಲ್ಯಾಂಡ್‌ ಮಾಡಿ ನೂರಾರು ಜನರ ಜೀವ ಉಳಿಸಿದ ಕ್ಯಾಪ್ಟನ್‌..!

ವಿಮಾನದ ಎರಡು ಎಂಜಿನ್‌ಗಳಲ್ಲಿ ಒಂದರಲ್ಲಿ "ಯಾಂತ್ರಿಕ ಸಮಸ್ಯೆ" ಇದೆ ಎಂದು ಡೆಲ್ಟಾ ಏರ್‌ಲೈನ್ಸ್ ವಕ್ತಾರರು ದೃಢಪಡಿಸಿದರು. ಡೆಲ್ಟಾ ಫ್ಲೈಟ್ 209 ಎಡಿನ್‌ಬರ್ಗ್‌ನಿಂದ ನ್ಯೂಯಾರ್ಕ್-ಜೆಎಫ್‌ಕೆಗೆ ಸುರಕ್ಷಿತವಾಗಿ ಗ್ಲ್ಯಾಸ್ಗೋ ಪ್ರೆಸ್‌ವಿಕ್ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್‌ ಮಾಡಲಾಯ್ತು ಎಂದೂ ಅವರು ಮಾಹಿತಿ ನೀಡಿದ್ದಾರೆ.

delta airlines flight makes emergency landing in scotland as flames shoot from wing watch video ash
Author
First Published Feb 12, 2023, 2:20 PM IST

ಪ್ರೆಸ್‌ವಿಕ್‌ (ಫೆಬ್ರವರಿ 12, 2023): ವಿಮಾನ ಪ್ರಯಾಣ ಎಷ್ಟು ಮೋಜುದಾಯಕವೋ ಕೆಲವೊಮ್ಮೆ ಅಷ್ಟೇ ಅಪಾಯಕಾರಿಯೂ ಆಗಿರುತ್ತದೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸಲು ಹಾಗೂ ದೂರದ ಊರುಗಳಿಗೆ ತ್ವರಿತವಾಗಿ ಪ್ರಯಾಣಿಸಲು ವಿಮಾನ ಪ್ರಯಾಣ ಅಗತ್ಯವಾಗಿದೆ. ಹೀಗೆ ಒಂದು ಧೇಶದಿಂದ ಮತ್ತೊಂದೆಡೆ ಪ್ರಯಾಣಿಸುವಾಗ ಅನೇಕ ವಿಮಾನ ಅವಘಡಗಳು ಸಂಭವಿಸಿ ಒಮ್ಮೆಲೇ ಅನೇಕ ಅವಘಡಗಳು ಸಂಭವಿಸುತ್ತವೆ. ಇದೇ ರೀತಿ, ಇತ್ತೀಚೆಗೆ ವಿಮಾನದ ರೆಕ್ಕೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಇದನ್ನು ನೋಡಿದ ಆ ವಿಮಾನದೊಳಗಿದ್ದ ಪ್ರಯಾಣಿಕರು ಅರಚಾಡಿದ್ದಾರೆ. ಇನ್ನು, ಆ ಪ್ರಯಾಣಿಕರ ಗತಿ ಏನಾಯ್ತು ಅಂತ ಯೋಚಿಸ್ತಿದ್ದೀರಾ..? ಅವರೆಲ್ಲರೂ ಬಚಾವ್‌ ಆಗಿದ್ದಾರೆ. 

ಸ್ಕಾಟ್ಲೆಂಡ್‌ನಿಂದ ಅಮೆರಿಕದ ನ್ಯೂಯಾರ್ಕ್‌ಗೆ ಹೊರಟಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನವನ್ನು ಶುಕ್ರವಾರ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಬಿಬಿಸಿ ವರದಿ ಮಾಡಿದೆ. ಇದಕ್ಕೆ ಕಾರಣ ವಿಮಾನದ ರೆಕ್ಕೆಯಲ್ಲಿ ಕಾಣಿಸಿಕೊಂಡ ಬೆಂಕಿ. ನ್ಯೂಯಾರ್ಕ್‌ಗೆ ತೆರಳುತ್ತಿದ್ದ DAL209 ವಿಮಾನವು ಎಂಜಿನ್‌ ಸಮಸ್ಯೆಯಿಂದ ಬಳಲಿದ ನಂತರ ಸ್ಕಾಟ್ಲೆಂಡ್‌ನ ಪ್ರೆಸ್‌ವಿಕ್‌ನಲ್ಲಿ ತುರ್ತಾಗಿ ಲ್ಯಾಂಡಿಂಗ್‌ ಮಾಡಬೇಕಾಯಿತು. ವಿಮಾನದ ಸಿಬ್ಬಂದಿ ಹಾಗೂ ಪೈಲಟ್‌ಗಳು ಸಕಾಲದಲ್ಲಿ ದೊಡ್ಡದಾಗಬಹುದಾಗಿದ್ದ ಅವಘಡವನ್ನು ತಪ್ಪಿಸಿದ್ದಾರೆ. ಸಮಯಕ್ಕೆ ಸರಿಯಾಗಿ ವಿಮಾನವನ್ನು ಬೇರೆ ಕಡೆ ಲ್ಯಾಂಡ್‌ ಮಾಡಿದ ಪೈಲಟ್‌ಗಳು ನೂರಾರು ಜನರ ಜೀವ ಉಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. 

ಇದನ್ನು ಓದಿ: ವಿದೇಶಕ್ಕೆ ಹೋಗೋ ಪ್ಲ್ಯಾನ್‌ ಇದ್ಯಾ..? ಹಾಗಾದ್ರೆ ಇಲ್ಲಿಗೆ ಹೋಗೋಕೆ ಸಿಗುತ್ತೆ 5 ಲಕ್ಷ ಉಚಿತ ವಿಮಾನ ಟಿಕೆಟ್‌..!
 
ವಿಮಾನದ ಕ್ಯಾಬಿನ್ ಒಳಗಿನಿಂದ ವಿಡಿಯೋವೊಂದನ್ನು ಚಿತ್ರೀಕರಿಸಲಾಗಿದ್ದು, ಇದರಲ್ಲಿ ವಿಮಾನದ ರೆಕ್ಕೆಗಳಿಂದ ಬೆಂಕಿಯ ಜ್ವಾಲೆಗಳನ್ನು ತೋರಿಸುತ್ತದೆ. ಅಲ್ಲದೆ, ಪ್ರಯಾಣಿಕರು ಭಯಭೀತರಾಗುವುದನ್ನು ಹಿನ್ನೆಲೆಯಲ್ಲಿ ಕೇಳಬಹುದು. 

ಅದೇ ವಿಮಾನದಲ್ಲಿ ಬಿಬಿಸಿ ಪತ್ರಕರ್ತೆ ಲಾರಾ ಪೆಟ್ಟಿಗ್ರೂ ಕೂಡ ಇದ್ದರು ಎಂದು ತಿಳಿದುಬಂದಿದೆ. ಅವರು ವಿಮಾನದಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ವಿಮಾನವು ಟೇಕ್ ಆಫ್ ಆದ ನಂತರ ದೊಡ್ಡದಾಗಿ ಎಂಜಿನ್‌ನಲ್ಲಿ ಶಬ್ದ ಸಂಭವಿಸಿತು. ಆದರೆ, ಸಾಮಾನ್ಯವಾಗಿ ವಿಮಾನವು ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಆಗುವ ಸಮಯದಲ್ಲಿ ಸಹ ಅದೇ ರೀತಿ ಶಬ್ದ ಬರುತ್ತದೆ ಎಂಬ ಕಾರಣ ವಿಮಾನವು ಪ್ರಯಾಣಿಸಿತು. ಆದರೆ, ಈ ಶಬ್ದ ಸ್ವಲ್ಪ ಹೊತ್ತಿನ ಬಳಿಕವೂ ಮುಂದುವರೆಯಿತು. ನಂತರ, ವಿಮಾನದ ಕ್ಯಾಪ್ಟನ್‌ ಫ್ಲೈಟ್‌ನಲ್ಲಿ ಏನನ್ನೋ ಘೋಷಣೆ ಮಾಡಿದರೂ ಸದ್ದಿನಿಂದಾಗಿ ಯಾರಿಗೂ ಕೇಳಿಸಲಿಲ್ಲ. 

ಇದನ್ನೂ ಓದಿ: ಫ್ಲೈಟ್‌ನಲ್ಲಿ ಮಕ್ಕಳಿಗೂ ಟಿಕೆಟ್ ಇದ್ಯಪ್ಪಾ ಅಂದ್ರೆ ಮಗುವನ್ನು ಏರ್‌ಪೋರ್ಟ್‌ನಲ್ಲೇ ಬಿಟ್ಹೋದ ಪೋಷಕರು!

ಬಳಿಕ, ವಿಮಾನ ಲ್ಯಾಂಡ್‌ ಆಗಲು ತಯಾರಿ ನಡೆಸುತ್ತಿವೆ ಎಂದು ನಮಗೆ ಶೀಘ್ರದಲ್ಲೇ ಅರಿವಾಯಿತು. ವಿಮಾನ ತುರ್ತು ಭೂ ಸ್ಪರ್ಶಿಸಿದಾಗ ಅಗ್ನಿಶಾಮಕ ಟ್ರಕ್‌ಗಳು ಮತ್ತು ಅಗ್ನಿಶಾಮಕ ದಳಗಳು ವೇಗವಾಗಿ ನಮ್ಮ ಕಡೆಗೆ ಧಾವಿಸುತ್ತಿರುವುದನ್ನು ನಾವು ನೋಡಿದೆವು. ನಮ್ಮ ಎಲ್ಲಾ ವಸ್ತುಗಳನ್ನು ಬಿಟ್ಟು ನಾವು ಸಾಧ್ಯವಾದಷ್ಟು ಬೇಗ ಇಳಿಯಲು ನಮಗೆ ತಿಳಿಸಲಾಯಿತು. ಪ್ರಯಾಣಿಕರು ಹೆಚ್ಚು ಗಾಬರಿಯಾಗಿರದಿದ್ದರೂ, ಅನೇಕರಲ್ಲಿ ಗೊಂದಲ ಹೆಚ್ಚಾಗಿತ್ತು. ಆದರೂ, ಮಕ್ಕಳಿರುವ ಕೆಲವು ಕುಟುಂಬಗಳು ಬಹಳ ತೊಂದರೆಗೀಡಾಗಿದ್ದವು ಎಂದು ಬಿಬಿಸಿ ಪತ್ರಕರ್ತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 

 ಟರ್ಮಿನಲ್‌ಗೆ ಪ್ರವೇಶಿಸುವವರೆಗೆ ನನಗೆ ಏನಾಯಿತು ಎಂಬ ಬಗ್ಗೆ ಗೊತ್ತಿರಲಿಲ್ಲ, ಜನರು ಮಾತನಾಡುವುದನ್ನು ಕೇಳಿ ಅರಿವಾಯಿತು ಎಂದೂ ಬಿಬಿಸಿ ಪತ್ರಕರ್ತೆ ಲಾರಾ ಪೆಟ್ಟಿಗ್ರೂ ಹಂಚಿಕೊಂಡಿದ್ದಾರೆ. ಪೈಲಟ್‌ಗಳು ನಮ್ಮನ್ನು ಸುರಕ್ಷಿತವಾಗಿ ಕೆಳಗಿಳಿಸುವ ಕೆಲಸವನ್ನು ಸುಗಮವಾಗಿ ಮಾಡಿದಂತಿದೆ. ಸ್ಪಷ್ಟವಾಗಿ, ಕ್ಯಾಬಿನ್ ಸಿಬ್ಬಂದಿ ಕ್ರ್ಯಾಶ್ ಲ್ಯಾಂಡಿಂಗ್‌ಗೆ ತಯಾರಿ ನಡೆಸುತ್ತಿದ್ದರು. ಅವರು ಎಲ್ಲರನ್ನು ಶಾಂತಗೊಳಿಸಿದರು ಎಂದೂ ಪತ್ರಕರ್ತೆ ಬಿಬಿಸಿಗೆ ತಿಳಿಸಿದ್ದಾರೆ. 

ಇದನ್ನೂ ಓದಿ: ಈ ನಗರದಲ್ಲಿ ಬಸ್ಸೇ ಇಲ್ಲ..ಜನರು ಕಾಲೇಜು, ಕಚೇರಿಗೆ ಹೋಗೋದು ವಿಮಾನದಲ್ಲೇ !

ವಿಮಾನದ ಎರಡು ಎಂಜಿನ್‌ಗಳಲ್ಲಿ ಒಂದರಲ್ಲಿ "ಯಾಂತ್ರಿಕ ಸಮಸ್ಯೆ" ಇದೆ ಎಂದು ಡೆಲ್ಟಾ ಏರ್‌ಲೈನ್ಸ್ ವಕ್ತಾರರು ದೃಢಪಡಿಸಿದರು. ಡೆಲ್ಟಾ ಫ್ಲೈಟ್ 209 ಎಡಿನ್‌ಬರ್ಗ್‌ನಿಂದ ನ್ಯೂಯಾರ್ಕ್-ಜೆಎಫ್‌ಕೆಗೆ ಸುರಕ್ಷಿತವಾಗಿ ಗ್ಲ್ಯಾಸ್ಗೋ ಪ್ರೆಸ್‌ವಿಕ್ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್‌ ಮಾಡಲಾಯ್ತು ಎಂದೂ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ಅನಾನುಕೂಲತೆಗಾಗಿ ನಾವು ನಮ್ಮ ಗ್ರಾಹಕರಿಗೆ ಕ್ಷಮೆಯಾಚಿಸುತ್ತೇವೆ ಮತ್ತು ಅವರನ್ನು ಎಡಿನ್‌ಬರ್ಗ್ ಮೂಲಕ ಅವರ ಅಂತಿಮ ಸ್ಥಳಗಳಿಗೆ ತಲುಪಿಸಲು ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದೂ ಅವರು ಹೇಳಿದರು. 

Follow Us:
Download App:
  • android
  • ios