ಭಾರತದಿಂದ ಬ್ರಿಟನ್ನಿಗೆ ಬಸ್‌ ಪ್ರವಾಸ: ಒಬ್ಬ ವ್ಯಕ್ತಿಗೆ ತಗುಲುವ ಶುಲ್ಕವಿಷ್ಟು!

ಭಾರತದಿಂದ ಬ್ರಿಟನ್ನಿಗೆ ಬಸ್‌ ಪ್ರವಾಸ!| 18 ದೇಶಗಳಿಗೆ, 20,000 ಕಿ.ಮೀ. ದೂರದ, 70 ದಿನಗಳ ಪ್ರಯಾಣ| ಜಗತ್ತಿನ ಅತಿ ದೂರದ ಬಸ್‌ ಪ್ರವಾಸ ಮುಂದಿನ ವರ್ಷ ಆಯೋಜನೆ| ಅಡ್ವೆಂಚರ್ಸ್‌ ಓವರ್‌ಲ್ಯಾಂಡ್‌ ಎಂಬ ಸಂಸ್ಥೆಯಿಂದ ಸಾಹಸ

Delhi to London by bus 70 day trip crosses 18 countries

ನವದೆಹಲಿ(ಆ.24): ಕೊರೋನಾ ವೈರಸ್‌ನಿಂದಾಗಿ ಎಲ್ಲರೂ ತಮ್ಮ ಪ್ರವಾಸದ ಯೋಜನೆಗಳನ್ನು ರದ್ದುಪಡಿಸಿದ್ದರೆ ಖಾಸಗಿ ಸಂಸ್ಥೆಯೊಂದು ಮುಂದಿನ ವರ್ಷ ಜಗತ್ತಿನ ಅತಿ ದೂರದ ರಸ್ತೆ ಪ್ರವಾಸಕ್ಕೆ ಸಿದ್ಧತೆ ಆರಂಭಿಸಿದ್ದು, ದೆಹಲಿಯಿಂದ ಬ್ರಿಟನ್ನಿನ ಲಂಡನ್‌ಗೆ ಬಸ್‌ ಪ್ರವಾಸ ಆಯೋಜಿಸಿದೆ.

ಅಡ್ವೆಂಚರ್‌ ಓವರ್‌ಲ್ಯಾಂಡ್‌ ಎಂಬ ಖಾಸಗಿ ಪ್ರವಾಸೋದ್ಯಮ ಸಂಸ್ಥೆ ದೆಹಲಿಯಿಂದ ಲಂಡನ್ನಿಗೆ 2021ರ ಮೇ ತಿಂಗಳಲ್ಲಿ ಈ ಐತಿಹಾಸಿಕ ಪ್ರವಾಸ ಆಯೋಜಿಸಿದೆ. ಒಬ್ಬ ವ್ಯಕ್ತಿಗೆ 15 ಲಕ್ಷ ರು. ಶುಲ್ಕ ನಿಗದಿಪಡಿಸಿದ್ದು, ಅದರಲ್ಲಿ ಊಟ, ತಿಂಡಿ, ಹೋಟೆಲ್‌ ವಾಸ್ತವ್ಯ, ವೀಸಾ ಶುಲ್ಕ ಇತ್ಯಾದಿಗಳೆಲ್ಲ ಸೇರಿವೆ. ಮಧ್ಯದಲ್ಲಿ ಎಲ್ಲಾದರೂ ಇಳಿದು ವಿಮಾನದಲ್ಲಿ ಪ್ರಯಾಣಿಸಬೇಕು ಅನ್ನಿಸಿದರೆ ಪ್ರವಾಸಿಗರು ತಾವೇ ಹಣ ಪಾವತಿಸಿ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.

‘ದೆಹಲಿ ಟು ಲಂಡನ್‌’ ಬಸ್‌ ಮಣಿಪುರದ ಇಂಫಾಲದಿಂದ ಹೊರಡಲಿದೆ. ಒಟ್ಟು 17 ದೇಶಗಳನ್ನು ಹಾದು ಲಂಡನ್ನಿಗೆ ತಲುಪಲಿದೆ. ಬಸ್‌ ಸಂಚರಿಸಲಿರುವ ಒಟ್ಟು ದೂರ 20,000 ಕಿ.ಮೀ. ಆಗಿದ್ದು, ಪ್ರವಾಸದ ಅವಧಿ 70 ದಿನಗಳು. ಭಾರತದಿಂದ ಮ್ಯಾನ್ಮಾರ್‌, ಥಾಯ್ಲೆಂಡ್‌, ಲಾವೋಸ್‌, ಚೀನಾ, ಕಿರ್ಗಿಸ್ತಾನ, ಉಜ್ಬೆಕಿಸ್ತಾನ, ಕಜಖಸ್ತಾನ, ರಷ್ಯಾ, ಲಾಟ್ವಿಯಾ, ಲಿಥುವೇನಿಯಾ, ಪೋಲೆಂಡ್‌, ಚೆಕ್‌ ಗಣರಾಜ್ಯ, ಜರ್ಮನಿ, ಬೆಲ್ಜಿಯಂ ಮಾರ್ಗವಾಗಿ ಬಸ್‌ ಬ್ರಿಟನ್ನಿಗೆ ಪ್ರವೇಶಿಸಲಿದೆ. ದಾರಿಯಲ್ಲಿ ಸಿಗುವ ಎಲ್ಲಾ ಪ್ರಮುಖ ಪ್ರವಾಸಿ ತಾಣದಲ್ಲೂ 2 ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ತುಷಾರ್‌ ಅಗರ್ವಾಲ್‌ ತಿಳಿಸಿದ್ದಾರೆ.

ಪ್ರವಾಸಿಗರು ತಮಗಿಷ್ಟವಾದ ದೇಶದಲ್ಲಿ ಇಳಿದುಕೊಂಡು ಹೆಚ್ಚು ದಿನ ಅಲ್ಲೇ ಕಾಲ ಕಳೆಯುವ ಸೌಲಭ್ಯವೂ ಇರಲಿದೆ. ಇದಕ್ಕಾಗಿ ‘ಹಾಪ್‌ ಆನ್‌ ಹಾಪ್‌ ಆಫ್‌’ ಸೌಲಭ್ಯ ನೀಡಲಾಗಿದ್ದು, ಮುಂದೆ ತಮ್ಮದೇ ಖರ್ಚಿನಲ್ಲಿ ವಿಮಾನದಲ್ಲಿ ಬಂದು ಅವರು ಬಸ್‌ ಹತ್ತಬೇಕಾಗುತ್ತದೆ ಅಥವಾ ಊರಿಗೆ ಮರಳಬೇಕಾಗುತ್ತದೆ. ಪ್ರವಾಸಿಗರಿಗೆ ಜೀವಮಾನದಲ್ಲೇ ಅತ್ಯಂತ ಥ್ರಿಲ್ಲಿಂಗ್‌ ಅನುಭವ ನೀಡಲು ಈ ಪ್ರವಾಸ ಆಯೋಜಿಸಲಾಗಿದೆ ಎಂದು ತುಷಾರ್‌ ಹೇಳಿದ್ದಾರೆ.

Latest Videos
Follow Us:
Download App:
  • android
  • ios