ನವದೆಹಲಿ(ಮಾ.17): ಈಗಾಗಲೇ ವಾಯುಮಾಲಿನ್ಯಕ್ಕೆ ಕುಖ್ಯಾತಿ ಪಡೆದಿರುವ ರಾಷ್ಟ್ರ ರಾಜಧಾನಿ ನವದೆಹಲಿ ಈಗ ಜಗತ್ತಿನ ನಂ.1 ಮಲಿನ ರಾಜಧಾನಿ ನಗರ ಎಂಬ ಇನ್ನೊಂದು ಅಪಖ್ಯಾತಿಗೆ ಬಡ್ತಿ ಪಡೆದಿದೆ. ಇನ್ನೊಂದು ಆತಂಕಕಾರಿ ಸಂಗತಿಯೆಂದರೆ, ಜಗತ್ತಿನ 30 ಅತಿ ಮಲಿನ ನಗರಗಳ ಪೈಕಿ ಭಾರತದಲ್ಲೇ 22 ನಗರಗಳಿವೆ. ಸ್ವಿಜರ್‌ಲೆಂಡ್‌ನ ಐಕ್ಯುಏರ್‌ ಸಂಸ್ಥೆ ಪ್ರತಿ ವರ್ಷದಂತೆ ಈ ವರ್ಷವೂ ಜಾಗತಿಕ ವಾಯು ಗುಣಮಟ್ಟವರದಿ-2020 ಬಿಡುಗಡೆ ಮಾಡಿದೆ.

ಅದರಲ್ಲಿ, ದೆಹಲಿ ಅತ್ಯಂತ ಮಲಿನ ರಾಜಧಾನಿ ನಗರ ಎಂದು ಹೇಳಲಾಗಿದೆ. 2019ರ ಪಟ್ಟಿಯಲ್ಲಿ ದೆಹಲಿಯು ಜಗತ್ತಿನ 5ನೇ ಅತ್ಯಂತ ಮಲಿನ ನಗರವಾಗಿತ್ತು. ವಿಶೇಷವೆಂದರೆ, 2019ರಲ್ಲಿ ಇದ್ದ ದೆಹಲಿಯ ವಾಯು ಗುಣಮಟ್ಟ2020ರಲ್ಲಿ ಶೇ.15ರಷ್ಟುಸುಧಾರಿಸಿದೆ. ಆದರೂ ಜಗತ್ತಿನ ನಂ.1 ಮಲಿನ ರಾಜಧಾನಿಯಾಗಿ ಹೊರಹೊಮ್ಮಿದೆ. ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ಪಟ್ಟಿಯಲ್ಲಿರುವ ಭಾರತದ 22 ಮಲಿನ ನಗರಗಳ ಪೈಕಿ ದಕ್ಷಿಣ ಭಾರತದ ಯಾವ ನಗರಗಳೂ ಇಲ್ಲ.

ಟಾಪ್‌ 30ರಲ್ಲಿ ಭಾರತದ 22 ನಗರ

ವಾಯುಮಾಲಿನ್ಯದ ವಿಷಯದಲ್ಲಿ ಜಗತ್ತಿನಲ್ಲೇ ಅತಿಹೆಚ್ಚು ಮಲಿನ ದೇಶ ಭಾರತವಾಗಿದೆ. ದೆಹಲಿಯ ಹೊರತಾಗಿ ಗಾಜಿಯಾಬಾದ್‌, ಬುಲಂದ್‌ಶಹರ್‌, ಬಿಸ್ರಕ್‌ ಜಲಾಲ್ಪುರ, ನೋಯ್ಡಾ, ಗ್ರೇಟರ್‌ ನೋಯ್ಡಾ, ಕಾನ್ಪುರ, ಲಖನೌ, ಮೇರಠ್‌, ಆಗ್ರಾ, ಮುಜಫ್ಫರ್‌ನಗರ, ಭಿವಾರಿ, ಫರೀದಾಬಾದ್‌, ಜೀಂಡ್‌, ಹಿಸಾರ್‌, ಫತೇಹಾಬಾದ್‌, ಬಂಧ್ವಾರಿ, ಗುರುಗ್ರಾಮ, ಯಮುನಾನಗರ, ರೋಹ್ಟಕ್‌, ಧರುಹೇರಾ, ಮುಜಫ್ಫರ್‌ಪುರ (21) ನಗರಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಚೀನಾದ ಕ್ಸಿನ್‌ಜಿಯಾಂಗ್‌ ನಂ.1 ಮಲಿನ ನಗರವಾಗಿದ್ದರೆ, ಉತ್ತರ ಪ್ರದೇಶದ ಗಾಜಿಯಾಬಾದ್‌ ಹಾಗೂ ಬುಲಂದ್‌ಶಹರ್‌ ನಗರಗಳು ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿವೆ.

ಮಾಲಿನ್ಯಕ್ಕೆ ಕಾರಣ ಏನು?

ಭಾರತದಲ್ಲಿ ವಾಯುಮಾಲಿನ್ಯಕ್ಕೆ ಮುಖ್ಯ ಕಾರಣ ವಾಹನಗಳ ಸಂಚಾರ, ಅಡುಗೆಗೆ ಉರುವಲು ಸುಡುವುದು, ವಿದ್ಯುತ್‌ ಉತ್ಪಾದನೆಗೆ ಕಲ್ಲಿದ್ದಲು ಬಳಸುವುದು, ಉದ್ದಿಮೆಗಳು, ನಿರ್ಮಾಣ ಕೆಲಸಗಳು, ತ್ಯಾಜ್ಯ ಸುಡುವುದು ಹಾಗೂ ಕೃಷಿ ಕೂಳೆ ಸುಡುವುದು ಎಂದು ವರದಿಯಲ್ಲಿ ಹೇಳಲಾಗಿದೆ.

ಜಗತ್ತಿನ ಟಾಪ್‌ 5 ಮಲಿನ ನಗರಗಳು

1. ಕ್ಸಿನ್‌ಜಿಯಾಂಗ್‌

2. ಗಾಜಿಯಾಬಾದ್‌

3. ಬುಲಂದ್‌ಶಹರ್‌

4. ಬಿಸ್ರಕ್‌ ಜಲಾಲ್ಪುರ

5. ನೋಯ್ಡಾ

ಜಗತ್ತಿನ ಟಾಪ್‌ 5 ಮಲಿನ ದೇಶಗಳು

1. ಬಾಂಗ್ಲಾದೇಶ

2. ಪಾಕಿಸ್ತಾನ

3. ಭಾರತ

4. ಮಂಗೋಲಿಯಾ

5. ಅಷ್ಘಾನಿಸ್ತಾನ