ತ್ವರಿತ ನೆರವಿಗೆ ಧಾವಿಸಿದ ಅಮೆರಿಕ| ಭಾರತದ ನೆರವಿಗೆ ಇದ್ದ ಅಡೆ-ತಡೆ ತೆರವು ಮಾಡಿದ ಅಮೆರಿಕ| ಭಾರತದ ನೆರವಿಗೆ ಅಮೆರಿಕದ ಎಲ್ಲಾ ಇಲಾಖೆಗಳಿಗೆ ಸೂಚನೆ| ಆಮ್ಲಜನಕ, ವೆಂಟಿಲೇಟರ್‌, ರೆಮ್‌ಡೆಸಿವಿರ್‌ ಔಷಧಗಳ ಪೂರೈಕೆ| ಕೋವಿಶೀಲ್ಡ್‌ ಲಸಿಕೆಯ ಕಚ್ಚಾವಸ್ತುಗಳ ರವಾನೆಗೆ ಗ್ರೀನ್‌ ಸಿಗ್ನಲ್‌| ತನ್ನ ಸಲಕರಣೆಗಳ ಬಳಸಲು ಭಾರತೀಯರಿಗೆ ಅಮೆರಿಕ ತರಬೇತಿ

ವಾಷಿಂಗ್ಟನ್‌(ಏ.28): ಕಾಡ್ಗಿಚ್ಚಿನ ವೇಗದಲ್ಲಿ ಹೆಚ್ಚುತ್ತಿರುವ 2ನೇ ಅಲೆಯ ಕೋವಿಡ್‌ ವಿರುದ್ಧ ಸೆಣಸುತ್ತಿರುವ ಭಾರತದ ನೆರವಿಗೆ ಅಮೆರಿಕ ಇದೀಗ ಧಾವಿಸಿದೆ. ಇದಕ್ಕಾಗಿ ಭಾರತದ ನೆರವಿಗೆ ಅಡ್ಡಿಯಾಗುವ ಎಲ್ಲಾ ಅಂಶಗಳನ್ನು ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ನೇತೃತ್ವದ ಆಡಳಿತ ತೆರವು ಮಾಡಿದೆ.

ಭಾರತಕ್ಕೆ ಅಗತ್ಯವಿರುವ ವೈದ್ಯಕೀಯ ಸೇರಿದಂತೆ ಇನ್ನಿತರ ನೆರವುಗಳನ್ನು ತ್ವರಿತಗತಿಯಲ್ಲಿ ವಿಮಾನ ಮೂಲಕ ರವಾನಿಸಲು ಇದ್ದ ಎಲ್ಲಾ ಅಡೆತಡೆಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ ಕೊರೋನಾ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ ಅಗತ್ಯವಿರುವ ನೆರವಿನ ಕ್ಷೇತ್ರಗಳು ಯಾವುವು ಎಂಬುದನ್ನು ಗುರುತಿಸಲು ರಕ್ಷಣಾ, ಆರೋಗ್ಯ, ಮಾನವ ಸಂಪನ್ಮೂಲಗಳ ಇಲಾಖೆ, ರಾಜ್ಯ ಇಲಾಖೆ, ಅಂತಾರಾಷ್ಟ್ರೀಯ ಅಭಿವೃದ್ಧಿ ಕುರಿತಾದ ಅಮೆರಿಕದ ಏಜೆನ್ಸಿ, ಅಮೆರಿಕದ ವಾಣಿಜ್ಯ ಪ್ರತಿನಿಧಿಗಳು ಸೇರಿದಂತೆ ಎಲ್ಲಾ ಇಲಾಖೆಗಳನ್ನು ಅಮೆರಿಕ ನಿಯೋಜನೆ ಮಾಡಿದೆ.

ಈ ಪ್ರಕಾರ ಕೋವಿಡ್‌ ರಕ್ಷಣಾ ಕವಚವಾದ ಕೋವಿಶೀಲ್ಡ್‌ ಲಸಿಕೆಗೆ ಅಗತ್ಯವಿರುವ ಕಚ್ಚಾವಸ್ತುಗಳನ್ನು ಪೂರೈಸಲಾಗುತ್ತದೆ. ಲಸಿಕೆಗೆ ಸಂಬಂಧಿಸಿದ ತಾಂತ್ರಿಕ ಮತ್ತು ಇತರೆ ವಸ್ತುಗಳ ನೆರವು, ರಾಷ್ಟ್ರೀಯ ಮತ್ತು ಉಪ ರಾಷ್ಟ್ರೀಯ ಹಂತದಲ್ಲಿ ಲಸಿಕೆಯು ಸಿದ್ಧವಾಗಿರುವಂತೆ ಸಹಕಾರ, ರೆಮ್‌ಡೆಸಿವಿರ್‌, ರಾರ‍ಯಪಿಡ್‌ ಡಯಾಗ್ನಾಸ್ಟಿಕ್‌ ಪರೀಕ್ಷೆ, ಪಿಪಿಇ ಕಿಟ್‌ಗಳು, ಆಮ್ಲಜನಕ ಪೂರೈಕೆ, ಆಮ್ಲಜನಕದ ವ್ಯವಸ್ಥೆ, ವೆಂಟಿಲೇಟರ್‌ಗಳನ್ನು ತಕ್ಷಣವೇ ಭಾರತಕ್ಕೆ ಪೂರೈಸಲು ಅಮೆರಿಕ ನಿರ್ಧರಿಸಿದೆ. ಅಲ್ಲದೆ ತನ್ನ ವೈದ್ಯಕೀಯ ಸಾಧನಗಳು ಭಾರತದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅಗತ್ಯವಿರುವ ತರಬೇತಿಯನ್ನು ಭಾರತಕ್ಕೆ ನೀಡುವುದಾಗಿ ಅಮೆರಿಕ ಸರ್ಕಾರ ಹೇಳಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

"