*ಸೋಂಕು ಏರಿಕೆಯ ಬಗ್ಗೆ ಡಬ್ಲ್ಯುಎಚ್‌ಒ ಎಚ್ಚರಿಕೆ*ಈಗಿನ ಪ್ರಕರಣಗಳು ‘ಸೋಂಕಿನ ಸುಳಿವು’ ಮಾತ್ರ*ಪರೀಕ್ಷೆ ಕಡಿಮೆ ಆಗಿದ್ದರೂ ಹೆಚ್ಚು ಸೋಂಕು ಪತ್ತೆ ಅಪಾಯಕಾರಿ:*ಸೋಂಕಿನ ಪ್ರಮಾಣ ಇಳಿದಿದೆ ಎಂದು ಮೈಮರೆಯಬೇಡಿ*ನಿರ್ಬಂಧ ಸಡಿಲಿಕೆ, ಹೊಸ ರೂಪಾಂತರಿಯಿಂದ ಅಪಾಯ

ನ್ಯೂಯಾರ್ಕ್ (ಏ. 17): ಜಾಗತಿಕ ಮಟ್ಟದಲ್ಲಿ ಮತ್ತೆ ಕೋವಿಡ್‌ ಸೋಂಕಿನ (Covid 19 Spike) ಪ್ರಮಾಣದಲ್ಲಿ ಭಾರೀ ಏರಿಕೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ), ಯಾವುದೇ ದೇಶಗಳು ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸದೇ ಎಚ್ಚರವಾಗಿರಬೇಕು. ಈಗಿನ ಪ್ರಕರಣಗಳು ಸುಳಿವು ಮಾತ್ರ. ಮುಂದೆ ಇನ್ನಷ್ಟುಸೋಂಕು ಹೆಚ್ಚಬಹುದು ಎಂದಿದೆ.

ಈ ಕುರಿತು ಹೇಳಿಕೆ ನೀಡಿರುವ ಡಬ್ಲ್ಯುಎಚ್‌ಒದ ಮುಖ್ಯಸ್ಥ ಟೆಡ್ರೋಸ್‌ ಆಧನೋಮ್‌ ಗೇಬ್ರಿಯೇಸಸ್‌ ‘ಸತತ ಒಂದು ತಿಂಗಳ ಕುಸಿತದ ಹಾದಿಯ ಬಳಿಕ ಕಳೆದ ವಾರ ವಿಶ್ವದಾದ್ಯಂತ ಹೊಸ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದೆ. ಭಾರೀ ವೇಗದಲ್ಲಿ ಹರಡುವ ಒಮಿಕ್ರೋನ್‌ ವೈರಸ್‌ ತಳಿ ಹಾವಳಿ, ಒಮಿಕ್ರೋನ್‌ನ ಉಪತಳಿ ಬಿಎ.2 ಪ್ರಮಾಣ ಹೆಚ್ಚಳ, ಸೋಂಕು ಇಳಿಕೆಯಾಗಿದೆಯೆಂದು ಸಾರ್ವಜನಿಕ ನಿರ್ಬಂಧ ಕ್ರಮಗಳನ್ನು ಹಿಂದಕ್ಕೆ ಪಡೆದಿದ್ದು, ಕೆಲ ದೇಶಗಳಲ್ಲಿ ಲಸಿಕೆ ವಿತರಣೆ ಪ್ರಮಾಣ ಕಡಿಮೆ ಇರುವುದು, ಸೋಂಕಿನ ಕುರಿತು ಕೆಲವೆಡೆ ಹಬ್ಬಿಸಲಾದ ಸುಳ್ಳು ಸುದ್ದಿಗಳು ಸೋಂಕಿನ ಪ್ರಮಾಣ ಏರಿಕೆಗೆ ಕಾರಣವಾಗಿದೆ. ಅದರಲ್ಲೂ ಬಹುತೇಕ ದೇಶಗಳಲ್ಲಿ ಸೋಂಕು ಪತ್ತೆ ಪ್ರಮಾಣ ಇಳಿಕೆಯಾಗಿರುವ ಹೊರತಾಗಿಯೂ ಇಷ್ಟೊಂದು ಪ್ರಮಾಣದಲ್ಲಿ ಕೇಸು ಪತ್ತೆಯಾಗುತ್ತಿದೆ ಎಂದರೆ, ಇದು ಬಹುದೊಡ್ಡ ಅಪಾಯದ ಸುಳಿವು’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕರ್ನಾಟಕದ ಲಸಿಕೆ ಪ್ರಯೋಗ ಯಶಸ್ವಿ: ಬೆಂಗಳೂರಿನ ಐಐಎಸ್ಸಿಯಿಂದ ಅಭಿವೃದ್ಧಿ

ಹಿಂದಿನ ವಾರಕ್ಕೆ ಹೋಲಿಸಿದರೆ ಮಾ.7-13ರ ಅವಧಿಯಲ್ಲಿ ಹೊಸ ಕೇಸಿನಲ್ಲಿ ಶೆ.8ರಷ್ಟುಏರಿಕೆಯಾಗಿದೆ. ಈ ಅವಧಿಯಲ್ಲಿ 1.1 ಕೋಟಿ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು 43000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜನವರಿ ಅಂತ್ಯದ ಬಳಿಕ ಹೀಗೆ ಕೇಸು ಏರಿಕೆಯಾಗುತ್ತಿರುವುದು ಇದೇ ಮೊದಲು. ದಕ್ಷಿಣ ಕೊರಿಯಾ ಮತ್ತು ಚೀನಾದಲ್ಲಿ ಕ್ರಮವಾಗಿ ಶೇ.25 ಮತ್ತು ಶೇ.27ರಷ್ಟುಹೊಸ ಕೇಸುಗಳಲ್ಲಿ ಏರಿಕೆಯಾಗಿದೆ. ಇನ್ನು ಆಫ್ರಿಕಾದಲ್ಲಿ ಹೊಸ ಕೇಸಿನಲ್ಲಿ ಶೇ.12 ಮತ್ತು ಸಾವಿನಲ್ಲಿ ಶೇ.14ರಷ್ಟುಏರಿಕೆಯಾಗಿದೆ. ಯುರೋಪ್‌ನಲ್ಲಿ ಕೇಸಿನ ಪ್ರಮಾಣ ಶೇ.2ರಷ್ಟುಏರಿಕೆಯಾಗಿದ್ದರೂ, ಸಾವಿನ ಪ್ರಮಾಣ ಸ್ಥಿರವಾಗಿದೆ.

ಇನ್ನು ಡಬ್ಲ್ಯುಎಚ್‌ಒ ಅಧಿಕಾರಿ ಮಾರಿಯಾ ವ್ಯಾನ್‌ ಕೆರ್‌ಕೋವ್‌ ಅವರ ಪ್ರಕಾರ ಒಮಿಕ್ರೋನ್‌ನ ಉಪತಳಿಯಾದ ಬಿಎ.2 ಇದುವರೆಗೆ ಪತ್ತೆಯಾದ ತಳಿಗಳಲ್ಲೇ ಅತ್ಯಂತ ಹೆಚ್ಚು ಸಾಂಕ್ರಾಮಿಕ ಎಂದು ದೃಢಪಟ್ಟಿದೆ. ಆದರೆ ವೈರಸ್‌ ಲೋಡ್‌ ಮತ್ತು ಕೇಸು ಹೆಚ್ಚಾಗಲು ಇದೇ ವೈರಸ್‌ ಕಾರಣ ಎನ್ನವುದುಕ್ಕೆ ಇದುವರೆಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಸೋಂಕು ಏರಿಕೆಗೆ ಏನು ಕಾರಣ?

- ಭಾರೀ ಸಾಂಕ್ರಾಮಿಕವಾದ ಒಮಿಕ್ರೋನ್‌ ತಳಿ

- ಸೋಂಕು ಇಳಿದಿದೆ ಎಂದು ನಿರ್ಬಂಧ ಸಡಿಲಿಕೆ

- ಹಲವು ದೇಶಗಳಲ್ಲಿ ಲಸಿಕೆ ವಿತರಣೆ ಕಡಿಮೆ

- ಲಸಿಕೆ, ಸೋಂಕಿನ ಬಗ್ಗೆ ಕೆಲವೆಡೆ ಅಪಪ್ರಚಾರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಂಕು ಏರಿಕೆ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಮಾಣ ಏರಿಕೆಯಾಗುತ್ತಿದ್ದು, ಶನಿವಾರ 461 ಪ್ರಕರಣಗಳು ಪತ್ತೆಯಾಗಿ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ತನ್ಮೂಲಕ ಪಾಸಿಟಿವಿಟಿ ದರ ಶೇ.5.33ಕ್ಕೆ ಏರಿಕೆಯಾಗಿದೆ. ಶುಕ್ರವಾರ 366, ಗುರುವಾರ 325 ಪ್ರಕರಣಗಳು ಪತ್ತೆಯಾಗಿದ್ದವು. ಇದರೊಂದಿಗೆ ದೆಹಲಿಯಲ್ಲಿ ಈವರೆಗೆ ಪತ್ತೆಯಾದ ಒಟ್ಟು ಕೋವಿಡ್‌ ಕೇಸುಗಳ ಸಂಖ್ಯೆ 18.68 ಲಕ್ಷಕ್ಕೆ ಏರಿಕೆಯಾಗಿದೆ. ಸಾವಿಗೀಡಾದವರ ಸಂಖ್ಯೆ 26,160ಕ್ಕೆ ತಲುಪಿದೆ. ಶುಕ್ರವಾರ ಪಾಸಿಟಿವಿಟಿ ದರ ಶೇ.3.95ರಷ್ಟಿತ್ತು.