* ಕಳೆದ ವಾರ ವಿಶ್ವಾದ್ಯಂತ ಕೇಸು ಶೇ.23ರಷ್ಟುಇಳಿಕೆ* ಆದರೆ ಸಾವಿನ ಸಂಖ್ಯೆ ಶೇ.40ರಷ್ಟುಏರಿಕೆ* ಸಾವಿನ ಸಂಖ್ಯೆ ಪರಿಷ್ಕರಣೆ ಕಾರಣ ಸಾವಿನ ಪ್ರಮಾಣ ಹೆಚ್ಚಳ* ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡ, ಎಚ್ಚರಿಕೆ ಅಗತ್ಯ
ಜಿನೀವಾ(ಮಾ.31): ಒಂದು ಕಡೆ ಚೀನಾ ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ಒಮಿಕ್ರೋನ್ ಬಿಎ.2 ರೂಪಾಂತರಿ ಹಾವಳಿ ಹೆಚ್ಚಿದ್ದರೂ, ವಿಶ್ವದಾದ್ಯಂತ ಒಟ್ಟಾರೆ ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ. ಕಳೆದ ವಾರ ಶೇ.23ರಷ್ಟುಕಡಿಮೆ ಪ್ರಕರಣಗಳು ವರದಿ ಆಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ತಿಳಿಸಿದೆ.
ಕಳೆದ ವಾರ ಜಗತ್ತಿನಾದ್ಯಂತ 1 ಕೋಟಿ ಕೊರೋನಾ ಸೋಂಕು ಪ್ರಕರಣಗಳು ದೃಢಪಟ್ಟರೆ, 45,000 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದು ಅದರ ಹಿಂದಿನ ವಾರಕ್ಕಿಂತತ ಶೇ.23ರಷ್ಟುಕಡಿಮೆ ಪ್ರಕರಣ ಎಂದು ಅದು ಹೇಳಿದೆ.
ಆದರೆ ಕಳೆದ ವಾರ ಕೊರೋನಾ ಸೋಂಕಿಗೆ ಬಲಿಯಾದವರ ಪ್ರಮಾಣ ಶೇ.40ರಷ್ಟುಹೆಚ್ಚಾಗಿದೆ ಅಮೆರಿಕ ಮತ್ತು ಭಾರತದಲ್ಲಿ ಕೊರೋನಾ ಸಾವಿನ ಕುರಿತ ಮಾನದಂಡ ಮತ್ತು ಅಂಕಿಅಂಶಗಳಲ್ಲಿ ಮಾಡಿದ ಬದಲಾವಣೆಯಿಂದಾಗಿ ಸಾವಿನ ಸಂಖ್ಯೆ ಏರಿಕೆಯಾಗಿದೆ ಎಂದು ಅದು ತಿಳಿಸಿದೆ.
ವಿಶ್ವದಲ್ಲಿ ಕಳೆದ ವಾರ 45,000 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದಕ್ಕೂ ಮುಂಚಿನ ವಾರ 33,000 ಕೊರೋನಾ ಸಾವುಗಳು ಸಂಭವಿಸಿದ್ದವು. ಭಾರತದ ಮುಂಬೈನಲ್ಲಿ 4000 ಹಳೆಯ ಕೊರೋನಾ ಸಾವಿನ ಲೆಕ್ಕ ಸೇರಿಸಿದ್ದರಿಂದ ಮತ್ತು ಅಮೆರಿಕ, ಚೀನಾದಲ್ಲಿ ಕೊರೋನಾ ಸಾವಿನ ಮಾನದಂಡಗಳಲ್ಲಿ ಬದಲಾವಣೆ ಮಾಡಿದ್ದರಿಂದ ಈ ಏರಿಕೆ ಕಂಡುಬಂದಿದೆ ಎಂದು ಡಬ್ಲ್ಯುಎಚ್‌ಒ ಸ್ಪಷ್ಟಪಡಿಸಿದೆ.
ಇದೇ ವೇಳೆ ಕೊರೋನಾ ಸೋಂಕು ಕಡಿಮೆಯಾಗುತ್ತದ್ದಂತೆಯೇ ಕೆಲ ದೇಶಗಳಲ್ಲಿ ಸಾಮೂಹಿಕ ಪರೀಕ್ಷೆ ಮತ್ತು ಕಣ್ಗಾವಲು ಕ್ರಮಗಳನ್ನು ಕಡೆಗಣಿಸಲಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಕೊರೋನಾ ಸೋಂಕು ಇನ್ನೂ ಅಂತ್ಯವಾಗಿಲ್ಲ. ಹಾಗಾಗಿ ಕೋವಿಡ್ ಸಾಮೂಹಿಕ ಪರೀಕ್ಷೆ, ಸೋಂಕಿತರ ಪತ್ತೆ ಮುಂತಾದ ಮುಂಜಾಗ್ರತಾ ಕ್ರಮಗಳು ಅತ್ಯಗತ್ಯ ಎಂದು ಎಚ್ಚರಿಸಿದೆ. ಯುರೋಪ್, ಉತ್ತರ ಅಮೆರಿಕ ಮತ್ತಿತರ ದೇಶಗಳಲ್ಲಿ ಇತ್ತೀಚೆಗೆ ಎಲ್ಲಾ ರೀತಿಯ ಕೊರೋನಾ ಮಾರ್ಗಸೂಚಿಗಳನ್ನು ತೆಗೆದುಹಾಕಲಾಗಿದೆ. ಈ ನಡುವೆ ಬಿಎ.2 ಒಮಿಕ್ರೋನ್ ರೂಪಾಂತರಿಯಿಂದಾಗಿ ಹೊಸದಾಗಿ ಪತ್ತೆಯಾಗುತ್ತಿರುವ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿದೆ. ಹಾಗಾಗಿ ಕೊರೋನಾ ಲಸಿಕೆಯ ಪರಿಣಾಮಕಾರಿ ಬಳಕೆ ಅತ್ಯವಶ್ಯಕ ಎಂದು ಸಲಹೆ ನೀಡಿದೆ.
